ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Durga Puja Immersion: ದುರ್ಗಾ ದೇವಿಯ ವಿಗ್ರಹ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ; ಕಟಕ್‌ ಉದ್ವಿಗ್ನ

ಒಡಿಶಾದ ಕಟಕ್‌ನಲ್ಲಿ ಭಾನುವಾರ (ಅಕ್ಟೋಬರ್‌ 5) ಮುಂಜಾನೆ ದುರ್ಗಾ ದೇವಿಯ ವಿಗ್ರಹ ವಿಸರ್ಜನೆಯ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದೆ. ಸ್ಥಳೀಯಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ವಿಎಚ್‌ಪಿ ಆರೋಪಿಸಿ ಸೋಮವಾರ ಬಂದ್‌ಗೆ ಕರೆ ನೀಡಿದೆ.

ದುರ್ಗಾ ದೇವಿಯ ವಿಗ್ರಹ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ

-

Ramesh B Ramesh B Oct 5, 2025 9:21 PM

ಭುವನೇಶ್ವರ: ಒಡಿಶಾದ ಕಟಕ್‌ನಲ್ಲಿ (Cuttack) ಭಾನುವಾರ (ಅಕ್ಟೋಬರ್‌ 5) ಮುಂಜಾನೆ ದುರ್ಗಾ ದೇವಿಯ ವಿಗ್ರಹ ವಿಸರ್ಜನೆಯ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದ್ದು, ಸೋಮವಾರ 12 ಗಂಟೆಗಳ ಬಂದ್‌ಗೆ ವಿಶ್ವ ಹಿಂದೂ ಪರಿಷತ್‌ (VHP) ಕರೆ ನೀಡಿದೆ. ಸ್ಥಳೀಯಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ಆರೋಪಿಸಿದೆ (Durga Puja Immersion). ಹಿಂಸಾಚಾರ ಮುಂಜಾನೆ 1:30ರಿಂದ 2 ಗಂಟೆಯ ಮಧ್ಯೆ ನಡೆದಿದೆ ಎನ್ನಲಾಗಿದೆ.

ಕಥಾಜೋಡಿ ನದಿಯ ದಡದಲ್ಲಿರುವ ದೇಬಿಗರ ಕಡೆಗೆ ವಿಗ್ರಹದ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದಾಗ ದರಘಾಬಜಾರ್ ಪ್ರದೇಶದ ಹಾಥಿ ಪೋಖಾರಿ ಬಳಿ ಮುಂಜಾನೆ ಹಿಂಸಾಚಾರ ಭುಗಿಲೆದ್ದಿತು. ಮೆರವಣಿಗೆಯ ಸಮಯದಲ್ಲಿ ಸಂಗೀತ ಅಳವಡಿಸಿರುವುದಕ್ಕೆ ಕೆಲವು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ ಗಲಾಟೆ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕೋಮು ಸಂಘರ್ಷದ ಬಗ್ಗೆ ಮಾಹಿತಿ ನೀಡಿದ ಶಾಸಕಿ:



ಈ ಸುದ್ದಿಯನ್ನೂ ಓದಿ: Dasara Tragedy: ದುರ್ಗಾ ದೇವಿಯ ವಿಗ್ರಹ ವಿಸರ್ಜನೆ ವೇಳೆ ದುರಂತ; ಟ್ರ್ಯಾಕ್ಟರ್‌ ನದಿಗೆ ಉರುಳಿ 12 ಮಂದಿ ಸಾವು

"ಕೆಲವು ಸ್ಥಳೀಯರು ಮೆರವಣಿಗೆ ವೇಳೆ ಸಂಗೀತ ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಘರ್ಷಣೆಗೆ ಆರಂಭವಾಯ್ತು. ಗುಂಪೊಂದು ಮೆರವಣಿಗೆಯ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿತು. ಈ ವೇಳೆ ಕಟಕ್ ಡಿಸಿಪಿ ಖಿಲಾರಿ ರಿಷಿಕೇಶ್ ದ್ನ್ಯಾಂಡಿಯೊ ಸೇರಿದಂತೆ ಹಲವರು ಗಾಯಗೊಂಡರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಜತೆಗೆ ಸುಮಾರು ಮೂರು ಗಂಟೆಗಳ ಕಾಲ ಮೆರವಣಿಗೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ದಾಳಿಯಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಪೂಜಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. "ಪದೇ ಪದೆ ವಿನಂತಿಸಿದರೂ ಅಧಿಕಾರಿಗಳು ಶಾಂತಿಯುತ ಮೆರವಣಿಗಯನ್ನು ಖಚಿತಪಡಿಸಿಕೊಳ್ಳಲು ವಿಫಲರಾಗಿದ್ದಾರೆ" ಎಂದು ವಿಎಚ್‌ಪಿ ವಕ್ತಾರರು ಹೇಳಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಫಲರಾದ ಡಿಸಿಪಿ ಮತ್ತು ಜಿಲ್ಲಾಧಿಕಾರಿಯನ್ನು ತಕ್ಷಣ ವರ್ಗಾಯಿಸಬೇಕೆಂದು ಆಗ್ರಹಿಸಿದ್ದಾರೆ.

ಅಧಿಕಾರಿ ಹೇಳಿದ್ದೇನು? ಇಲ್ಲಿದೆ ನೋಡಿ:



ವಾಹನಗಳಿಗೆ ಹಾನಿ

ಈ ಘರ್ಷಣೆ ವೇಳೆ ಹಲವು ವಾಹನಗಳು ಮತ್ತು ರಸ್ತೆಬದಿಯ ಅಂಗಡಿಗಳು ಹಾನಿಗೊಳಗಾದವು. ಬಿಜು ಜನತಾದಳ (ಬಿಜೆಡಿ) ಸಮಾಜ ವಿರೋಧಿ ಶಕ್ತಿಗಳು ಕೋಮು ಸಾಮರಸ್ಯವನ್ನು ಕದಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ (Mohan Charan Majhi), ಘರ್ಷಣೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜತೆಗೆ ಗಾಯಾಳುಗಳಿಗೆ ಉಚಿತ ವೈದ್ಯಕೀಯ ಆರೈಕೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಘರ್ಷಣೆ ಮತ್ತಷ್ಟು ಹೆಚ್ಚದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೋಮವಾರ ನಗರವು ವಿಎಚ್‌ಪಿಯ ಬಂದ್‌ಗೆ ಸಿದ್ಧವಾಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.