17 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಆದೇಶ: ಎಸ್ಐಆರ್ ವಿವಾದದ ನಡುವೆ ಚುನಾವಣಾ ಆಯೋಗದ ಬಿಗ್ ಮೂವ್!
ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತ ವಿವಾದದ ನಡುವೆಯೇ, ಭಾರತೀಯ ಚುನಾವಣಾ ಆಯೋಗವು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ನಡೆಸಲು ಆದೇಶಿಸಿದೆ. 2027ರ ಜನವರಿ 1 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಲಾಗಿದ್ದು, ಕರಡು ಮತದಾರರ ಪಟ್ಟಿ ನವೆಂಬರ್ 12ರಂದು ಮತ್ತು ಅಂತಿಮ ಪಟ್ಟಿ ಜನವರಿ 4ರಂದು ಪ್ರಕಟವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ: ವಿವಾದಿತ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ನಡುವೆಯೇ, ಭಾರತೀಯ ಚುನಾವಣಾ ಆಯೋಗವು (Election Commission of India) 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ (Union Territories) ಮತದಾರರ ಪಟ್ಟಿಯ 'ವಿಶೇಷ ಸಂಕ್ಷಿಪ್ತ ಪರಿಷ್ಕರಣೆ'ಗೆ (SSR) ಗುರುವಾರ ಆದೇಶಿಸಿದೆ. ವಂಚಿತರಾದ ಮತ್ತು ಹೊಸ ಯುವ ಮತದಾರರನ್ನು ನೋಂದಾಯಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಜನವರಿ 1, 2027 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಕರಡು ಪಟ್ಟಿಯು ನವೆಂಬರ್ 12 ರಂದು ಹಾಗೂ ಅಂತಿಮ ಪಟ್ಟಿಯು ಜನವರಿ 4, 2027 ರಂದು ಪ್ರಕಟವಾಗಲಿದೆ.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಪಂಜಾಬ್ ಮತ್ತು ತಮಿಳುನಾಡು ಸೇರಿದಂತೆ 17 ರಾಜ್ಯಗಳು ಇದರಲ್ಲಿ ಒಳಗೊಂಡಿವೆ. ಎಸ್ಐಆರ್ ಪ್ರಕ್ರಿಯೆಯ ವೇಳೆ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿದೆ ಹಾಗೂ ಫಾರ್ಮ್ 6 ಜೊತೆಗೆ ಪೋಷಕರ 20 ವರ್ಷಗಳ ಹಿಂದಿನ ವಿವರ ನೀಡುವ ಹೆಚ್ಚುವರಿ ಘೋಷಣಾಪತ್ರವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಹಾಗೂ ಸಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿವೆ.
ಈ ಹೊಸ ಪರಿಷ್ಕರಣೆಯಲ್ಲಿ ಮತದಾರರ ಹೆಸರು ಸೇರ್ಪಡೆಗೆ ಸಾಮಾನ್ಯ ಫಾರ್ಮ್ 6 ಮಾತ್ರ ಸಾಕಾಗಲಿದ್ದು, ವಿವಾದಿತ ಹೆಚ್ಚುವರಿ ಘೋಷಣಾಪತ್ರದ ಅಗತ್ಯವಿರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೆ, ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕುವುದನ್ನು ತಡೆಯಲು ಆಯೋಗ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಒಟ್ಟು ಮತದಾರರ ಪೈಕಿ ಶೇಕಡಾ 2ಕ್ಕಿಂತ ಹೆಚ್ಚು ಹೆಸರುಗಳನ್ನು ಕೈಬಿಡುವ ಪ್ರಕರಣಗಳು ಕಂಡುಬಂದಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒ) ಖುದ್ದಾಗಿ ಪರಿಶೀಲಿಸುವುದು ಕಡ್ಡಾಯವಾಗಿದೆ.
ಗುರುತಿಸಲ್ಪಟ್ಟ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು (ಬಿಎಲ್ಎ) ದಿನಕ್ಕೆ ಗರಿಷ್ಠ 10 ಫಾರ್ಮ್ಗಳನ್ನು ಮಾತ್ರ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಯಾವುದೇ ಏಜೆಂಟ್ 30ಕ್ಕಿಂತ ಹೆಚ್ಚು ಫಾರ್ಮ್ಗಳನ್ನು ನೀಡಿದರೆ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ವಾರಕ್ಕೊಮ್ಮೆ ಆಕ್ಷೇಪಣೆಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡುವುದರ ಜೊತೆಗೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಕೇವಲ ಫಾರ್ಮ್ 7 ಅರ್ಜಿ ಬಂದ ನಂತರ ಮತ್ತು ಸಂಬಂಧಪಟ್ಟ ವ್ಯಕ್ತಿಯ ವಾದವನ್ನು ಆಲಿಸಿ 'ಸ್ಪೀಕಿಂಗ್ ಆರ್ಡರ್' ಹೊರಡಿಸಿದ ಬಳಿಕವೇ ಖಾಯಂ ಸ್ಥಳಾಂತರಗೊಂಡವರ ಅಥವಾ ಮೃತರ ಹೆಸರುಗಳನ್ನು ಪಟ್ಟಿಯಿಂದ ರದ್ದುಗೊಳಿಸಿ, ಆದೇಶದ ಪ್ರತಿಯನ್ನು ECINET ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಕಡ್ಡಾಯಗೊಳಿಸಲಾಗಿದೆ.
ಎಸ್ಐಆರ್ ನಡೆಯುತ್ತಿರುವ ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಇತರ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ದಿನಗಳಲ್ಲಿ ಪರಿಷ್ಕರಣಾ ವೇಳಾಪಟ್ಟಿ ಪ್ರಕಟಿಸಲಾಗುವುದು. ಜೊತೆಗೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಲಡಾಖ್ಗೆ ಪ್ರತ್ಯೇಕವಾಗಿ ವೇಳಾಪಟ್ಟಿ ನಿಗದಿಪಡಿಸಲಾಗುವುದು ಎಂದು ಆಯೋಗ ವಿವರಿಸಿದೆ.