ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋದವರಿಗೆ ಮತ್ತೆ ಅವಕಾಶ; ಪ್ರತಿಭಟನೆ ನಡುವೆ 20 ರಾಜ್ಯಗಳಲ್ಲಿ ವಿಶೇಷ ನೋಂದಣಿ ಅಭಿಯಾನ
Election Commission: ವಿಶೇಷ ತೀವ್ರ ಪರಿಷ್ಕರಣೆ ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಮತ್ತೆ ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ವಿಶೇಷ ನೋಂದಣಿ ಅಭಿಯಾನ ಆರಂಭಿಸಿದೆ. ಈ ರಾಜ್ಯಗಳಲ್ಲಿ ಹೆಸರು ಸೇರ್ಪಡೆಗೆ ಸಾಮಾನ್ಯ ಫಾರ್ಮ್-6 ಸಲ್ಲಿಸಿದರೆ ಸಾಕಾಗಿದ್ದು, ವಿಶೇಷ ತೀವ್ರ ಪರಿಷ್ಕರಣೆಯ ವೇಳೆ ಅಗತ್ಯವಿದ್ದ ಹೆಚ್ಚುವರಿ ಘೋಷಣಾ ಪತ್ರ ಈಗ ಅಗತ್ಯವಿಲ್ಲ. ಅರ್ಹ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ. 7: ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪ್ರಕ್ರಿಯೆ ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಮತ್ತೆ ಸೇರ್ಪಡೆಗೊಳಿಸಲು ಚುನಾವಣಾ ಆಯೋಗ (Election Commission) ವಿಶೇಷ ನೋಂದಣಿ ಅಭಿಯಾನ (Special Enrolment Drive) ಆರಂಭಿಸಿದೆ. ವಿಶೇಷ ತೀವ್ರ ಪರಿಷ್ಕರಣೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಹೆಸರು ಸೇರ್ಪಡೆಗೊಳಿಸಲು ಅರ್ಹ ಮತದಾರರು ಸಾಮಾನ್ಯ ಫಾರ್ಮ್-6 ಸಲ್ಲಿಸಿದರೆ ಸಾಕು. ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಅಗತ್ಯವಿದ್ದ ಹೆಚ್ಚುವರಿ ಘೋಷಣಾ ಪತ್ರವನ್ನು ಇದೀಗ ಸಲ್ಲಿಸುವ ಅಗತ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಮತದಾರರ ಪಟ್ಟಿಯಿಂದ ಗೈರಾದ, ಸ್ಥಳಾಂತರಗೊಂಡ, ಮೃತಪಟ್ಟ ಅಥವಾ ಅಳಿಸಲ್ಪಟ್ಟವರ ಪಟ್ಟಿಯಲ್ಲಿ ಗುರುತಿಸಲಾದ ಅರ್ಹ ಮತದಾರರನ್ನು ಮತ್ತೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮತದಾರರ ನೋಂದಣಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಗೋವಾದಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದವರ ಮನೆಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ತೆರಳಿ ಅರ್ಜಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲಿ ಗುರುತಿಸಲಾದ 97 ಮತದಾರರ ಪೈಕಿ 81 ಮಂದಿ ಈಗಾಗಲೇ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ 75 ಅಮೃತ ಮಹೋತ್ಸವ
ಪಶ್ಚಿಮ ಬಂಗಾಳದಲ್ಲಿಯೂ ಮತದಾರರ ಪಟ್ಟಿಯಿಂದ ಹೊರಗುಳಿದವರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗಳ ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಮತಗಟ್ಟೆ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಬಹುದು.
ಆದರೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ, ಫಾರ್ಮ್-6 ಮುಖ್ಯವಾಗಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವವರಿಗೆ ಉದ್ದೇಶಿತವಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಮತದಾರರಾಗಿದ್ದು, ಪರಿಷ್ಕರಣೆ ವೇಳೆ ಹೆಸರು ಅಳಿಸಲ್ಪಟ್ಟವರನ್ನು ಮರುಸೇರಿಸಲು ಪ್ರತ್ಯೇಕ ವ್ಯವಸ್ಥೆ ಅಗತ್ಯವಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಮತ್ತು ಮತದಾರರ ಹೆಸರನ್ನು ಡಿಲೀಟ್ ಮಾಡಿರುವ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅರ್ಹ ಮತದಾರರ ಹೆಸರನ್ನು ಮರುಸ್ಥಾಪಿಸುವುದು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
ಇದೇ ವೇಳೆ, ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆಯೂ ಆಗ್ರಹಿಸಿವೆ.
ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಉಳಿದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಒಟ್ಟು ಮತದಾರರ ಅಂತಿಮ ಸಂಖ್ಯೆ ಸ್ಪಷ್ಟವಾಗಲಿದೆ.