ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Encounter in Kathua: ಜಮ್ಮು & ಕಾಶ್ಮೀರದಲ್ಲಿ ಮತ್ತೆ ಗುಂಡಿನ ಮೊರೆತ; ಕಥುವಾದಲ್ಲಿ ಉಗ್ರರ ವಿರುದ್ಧ ಸೇನೆಯ ಭರ್ಜರಿ ಕಾರ್ಯಾಚರಣೆ

Jammu and Kashmir: ಭಾನುವಾರ (ಮಾ. 23) ಸಂಜೆ ಕಥುವಾ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಹಿರಾನಗರ್ ಸೆಕ್ಟರ್‌ನ ಭಾರತ-ಪಾಕಿಸ್ತಾನ ಗಡಿ ಬಳಿಯ ಸನ್ಯಾಲ್ ಗ್ರಾಮದಲ್ಲಿ ಶಂಕಿತ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಎನ್‌ಕೌಂಟರ್‌ ಆರಂಭವಾಯಿತು.

ಜಮ್ಮು & ಕಾಶ್ಮೀರ ಕಥುವಾದಲ್ಲಿ ಎನ್‌ಕೌಂಟರ್‌

ಸಾಂದರ್ಭಿಕ ಚಿತ್ರ.

Profile Ramesh B Mar 23, 2025 8:34 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಮತ್ತೆ ಉಗ್ರರ ಗುಂಡಿನ ಸದ್ದು ಕೇಳಿ ಬಂದಿದೆ. ಭಾನುವಾರ (ಮಾ. 23) ಸಂಜೆ ಕಥುವಾ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ (Encounter in Kathua). ಹಿರಾನಗರ್ ಸೆಕ್ಟರ್‌ನ ಭಾರತ-ಪಾಕಿಸ್ತಾನ ಗಡಿ ಬಳಿಯ ಸನ್ಯಾಲ್ ಗ್ರಾಮದಲ್ಲಿ ಶಂಕಿತ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಎನ್‌ಕೌಂಟರ್‌ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಯ ಸಿಬ್ಬಂದಿ ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗೆ ಜಮ್ಮುವಿನಲ್ಲಿ ಭಯೋತ್ಪಾದಕರ ಒಳನುಸುಳುವಿಕೆಗೆ ಹೆಚ್ಚಾಗುತ್ತಿದೆ. ಮಾ. 17ರಂದು ಕುಪ್ವಾರಾ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕನೊಬ್ಬ ಸಾವನ್ನಪ್ಪಿದ್ದ. ಅದಕ್ಕೂ ಮೊದಲು ಕಥುವಾ ಜಿಲ್ಲೆಗೆ ನುಗ್ಗಿದ್ದ ಉಗ್ರ ಮೂವರು ನಾಗರಿಕರನ್ನು ಹತ್ಯೆ ಮಾಡಿದ್ದರು. ಇದರಲ್ಲಿ 14 ವರ್ಷದ ಬಾಲಕನೂ ಸೇರಿದ್ದ.

ಗುಂಡಿನ ಮೊರೆತದ ವಿಡಿಯೊ ನೋಡಿ:



ಈ ಸುದ್ದಿಯನ್ನೂ ಓದಿ: J&K Missing Case: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಮೂವರು ನಾಗರಿಕರು ನಾಪತ್ತೆ; ಉಗ್ರರ ಮೇಲೆ ಶಂಕೆ

ದೋಡಾದಲ್ಲಿ ಉಗ್ರರ ಅಡಗುದಾಣ ಪತ್ತೆ

ಭಾನುವಾರ ಬೆಳಗ್ಗೆ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿ ದೋಡಾ ಜಿಲ್ಲೆಯಲ್ಲಿ ಉಗ್ರರ ಬೃಹತ್ ಅಡಗುದಾಣವನ್ನು ಧ್ವಂಸ ಮಾಡಿ, ಅಲ್ಲಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿತ್ತು. ಭಯೋತ್ಪಾದಕರ ಅಡಗು ತಾಣದಿಂದ 1 ಪಿಸ್ತೂಲ್ ಮತ್ತು ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಶನಿವಾರ ಭದೇರ್ವಾದ ಭಲ್ರಾ ಅರಣ್ಯ ಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಮತ್ತು ಸೇನೆಯ ವಿಶೇಷ ಕಾರ್ಯಾಚರಣೆ ಗುಂಪು (SOG) ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಈ ಅಡಗುತಾಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಶಂಕಾಸ್ಪದ ಚಲನವಲನ ಹಾಗೂ ಗುಪ್ತಚರ ಮಾಹಿತಿಯ ಮೇರೆಗೆ ಭದೇರ್ವಾದ ಭಲ್ರಾ ಅರಣ್ಯ ಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಮತ್ತು ಸೇನೆ ವಿಶೇಷ ಕಾರ್ಯಾಚರಣೆ ಗುಂಪು ಕಾರ್ಯಾಚರಣೆಗಿಳಿದಿತ್ತು. ಅಡಗುತಾಣದಿಂದ ಪಿಸ್ತೂಲ್, 3 ಮ್ಯಾಗಜೀನ್‌ಗಳು , 25 ಸುತ್ತುಗಳ ಎಕೆ ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಕಾರ್ಯಾಚರಣೆಯ ಸಮಯದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಗುರುವಾರ (ಮಾ. 19) ಸಂಜೆ ಸ್ಫೋಟದಂತಹ ಶಬ್ದ ಕೇಳಿಸಿದೆ. ಆದರೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಕಳೆದ ಶನಿವಾರ (ಮಾ. 15) ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ನಾಲ್ವರು ಲಷ್ಕರ್-ಎ-ತೈಬಾ ಉಗ್ರರ ಅಡಗು ತಾಣದ ಮೇಲೆ ಸೇನೆ ದಾಳಿ ನಡೆಸಿತ್ತು. ಶ್ರೀನಗರದ ಪಕ್ಕದಲ್ಲಿರುವ ದಚಿಗಮ್ ರಾಷ್ಟ್ರೀಯ ಉದ್ಯಾನವನದಲ್ಲಿ ಭಯೋತ್ಪಾದಕರ ಬಂಕರ್ ತರಹದ ಅಡಗುತಾಣವನ್ನು ಭದ್ರತಾ ಪಡೆಗಳು ನಾಶಪಡಿಸಿದ್ದವು. ದಚಿಗಮ್ ರಾಷ್ಟ್ರೀಯ ಉದ್ಯಾನವನದ ಮೇಲ್ಭಾಗದಲ್ಲಿರುವ ಪಹಲಿಪೋರಾ ಬಳಿಯ ಕಾಡಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಪೊಲೀಸರಿಗೆ ಅದರ ಮೂಲಗಳಿಂದ ಮಾಹಿತಿ ಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಲಾಗಿತ್ತು.