ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್; ಸೆಮಿಯಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟ ಭಾರತ ಪುರುಷರ ತಂಡ
Asian Games 2026: ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡವನ್ನು ಸೋಲಿಸುವ ಮೂಲಕ ಭಾರತೀಯ ಪುರುಷರ ತಂಡವು ತನ್ನ ಮೊದಲ ಪದಕವನ್ನು ಖಚಿತಪಡಿಸಿಕೊಂಡಿತ್ತು. ಆದಾಗ್ಯೂ, ಸೆಮಿಫೈನಲ್ ಹಣಾಹಣಿಯಲ್ಲಿ ಚೀನಾ ತಂಡದ ಸವಾಲು ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ.
Rankireddy and Chirag -
ನಗೋಯಾ, ಸೆ.23: ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ 1-3 ಅಂತರದಲ್ಲಿ ಸೋಲುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡದ ಸವಾಲು ಅಂತ್ಯಗೊಂಡಿತು. ಕಂಚಿನ ಪದಕದೊಂದಿಗೆ ಮುಕ್ತಾಯಗೊಳಿಸಿತು. ಹಾಂಗ್‌ಝೌ 2023ರಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನಂತರ, ಕ್ರೀಡಾಕೂಟದ ಇತಿಹಾಸದಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಬ್ಯಾಡ್ಮಿಂಟನ್ ಪದಕ ಇದಾಗಿದೆ.
ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ ಈ ಬಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ, ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡವನ್ನು ಸೋಲಿಸುವ ಮೂಲಕ ಭಾರತೀಯ ಪುರುಷರ ತಂಡವು ತನ್ನ ಮೊದಲ ಪದಕವನ್ನು ಖಚಿತಪಡಿಸಿಕೊಂಡಿತ್ತು. ಆದಾಗ್ಯೂ, ಸೆಮಿಫೈನಲ್ ಹಣಾಹಣಿಯಲ್ಲಿ ಚೀನಾ ತಂಡದ ಸವಾಲು ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ.
ಮೊದಲ ಪಂದ್ಯದಲ್ಲಿ ಅನುಭವಿ ಆಟಗಾರ ಲಕ್ಷ್ಯ ಸೇನ್ ಅವರು ಮಾಜಿ ವಿಶ್ವ ಚಾಂಪಿಯನ್ ಶಿ ಯುಕಿ ಅವರನ್ನು ಎದುರಿಸಿದರು. ತೀವ್ರ ಪೈಪೋಟಿಯ ಈ ಪಂದ್ಯದಲ್ಲಿ ಭಾರತೀಯ ಆಟಗಾರ 16-21, 18-21 ಅಂತರದಲ್ಲಿ ಸೋಲುವ ಮೂಲಕ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದರು.
ಏಷ್ಯನ್ ಗೇಮ್ಸ್; ವುಶು ಸ್ಫರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ರೋಶಿಬಿನಾ ದೇವಿ
ಆದರೆ, ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಲಿಯಾಂಗ್ ವೈಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ನೇರ ಗೇಮ್‌ಗಳಲ್ಲಿ (21-11, 22-20) ಜಯಗಳಿಸುವ ಮೂಲಕ ಭಾರತವನ್ನು ಸಮಬಲದ ಸ್ಥಿತಿಗೆ ತಂದರು.
ಮುಂದಿನ ಪಂದ್ಯದಲ್ಲಿ, ಯುವ ಆಟಗಾರ ಆಯುಷ್ ಶೆಟ್ಟಿ ಅವರು ಏಷ್ಯನ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ ಆಗಿರುವ ಲಿ ಶಿಫೆಂಗ್ ಅವರನ್ನು ಎದುರಿಸಿದರು. ಭಾರತೀಯ ಆಟಗಾರನನ್ನು 21-19, 21-13 ಅಂತರದಿಂದ ಸೋಲಿಸಿದ ಲಿ, ಚೀನಾಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟರು.
ಎರಡನೇ ಡಬಲ್ಸ್ ಪಂದ್ಯದಲ್ಲಿ ಎಂ.ಆರ್.ಅರ್ಜುನ್ ಮತ್ತು ಹರಿಹರನ್ ಅಂಶಕರುಣನ್ ಜೋಡಿ ಹೇ ಜಿ ಟಿಂಗ್ ಮತ್ತು ಲಿಯು ಯಿ ವಿರುದ್ಧ 16-21, 21-17, 9-21 ಅಂತರದಲ್ಲಿ ಸೋಲು ಕಂಡರು. ಇದರೊಂದಿಗೆ ಭಾರತದ ಸೋಲು ಕೂಡ ಖಚಿತವಾಯಿತು. ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ 1-3 ಅಂತರದಲ್ಲಿ ಸೋಲುವ ಮೂಲಕ ಭಾರತೀಯ ಮಹಿಳಾ ತಂಡವು ಪದಕದ ಸ್ಪರ್ಧೆಯಿಂದ ಹೊರಬಿದ್ದಿತು.