ಫ್ಲೈದುಬೈ ಕಾಕ್‌ಪಿಟ್‌ನಲ್ಲಿ ಪೈಲಟ್ ಮೇಲೆ ಹಲ್ಲೆ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕಠಿಣ ನಿಯಮ ಪರಿಚಯಿಸಲು ಮುಂದಾದ ಕೇಂದ್ರ
Flydubai Cockpit Stabbing Case: ಫ್ಲೈದುಬೈ ವಿಮಾನದಲ್ಲಿ ಪೈಲಟ್ ಮೇಲೆ ಹಲ್ಲೆ ನಡೆದಿರುವುದು ದುರದೃಷ್ಟದ ಘಟನೆ. ಅದಾಗ್ಯೂ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಪ್ರಯಾಣಿಕರ ಜೀವಗಳನ್ನು ಉಳಿಸಿರುವುದಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ಹೀಗಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮಾರ್ಗಸೂಚಿ ನೀಡಬೇಕೇ ಎಂಬ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ. 2: ಫ್ಲೈದುಬೈ (Flydubai) ವಿಮಾನದಲ್ಲಿ ಸಹ-ಪೈಲಟ್‌ನಿಂದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಕೇರಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ದೇಶದಲ್ಲಿ ಕಠಿಣ ನಿಯಮ ಪರಿಚಯಿಸಲು ಮುಂದಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ಮಾರ್ಗಸೂಚಿ ನೀಡುವ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲು, ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಲೋಚನೆ ನಡೆಸಲಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ (Samir Kumar Sinha) ತಿಳಿಸಿದ್ದಾರೆ.
ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆದಿರುವುದು ದುರದೃಷ್ಟದ ಘಟನೆ. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಜನರ ಜೀವಗಳನ್ನು ಉಳಿಸಲು ಸಾಧ್ಯವಾಗಿರುವುದಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ಮಾರ್ಗಸೂಚಿ ನೀಡಬೇಕೇ ಎಂಬ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಸಿನ್ಹಾ ಹೇಳಿದ್ದಾರೆ.
“ನಾವು ಸಭೆ ನಡೆಸಿ ಕೆಲವು ಭದ್ರತಾ ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ. ಈ ನಿರ್ದಿಷ್ಟ ಘಟನೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ಸಲಹೆ ನೀಡಬೇಕೆಂದು ನಿರ್ಧರಿಸಿದರೆ, ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳಲು ಅದನ್ನು ಉನ್ನತ ಅಧಿಕಾರಿಗಳ ಮುಂದೆ ಮಂಡಿಸುತ್ತೇವೆ. ನಮ್ಮ ಆಂತರಿಕ ಸಮಾಲೋಚನೆಗಳನ್ನು ಪೂರ್ಣಗೊಳಿಸಿದ ಬಳಿಕ ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುತ್ತದೆ” ಎಂದು ಸಿನ್ಹಾ ವಿವರಿಸಿದ್ದಾರೆ.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಆರೋಗ್ಯ ಸ್ಥಿರ: ನಗುತ್ತ ಮಾತನಾಡುತ್ತಿದ್ದಾರೆ ಎಂದ ಭಾರತದ ರಾಯಭಾರಿ
“ನಾವು ಈ ಘಟನೆ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಬಯಸುವುದಿಲ್ಲ. ಏಕೆಂದರೆ ಇದು ಮತ್ತೊಂದು ದೇಶಕ್ಕೆ ಸಂಬಂಧಿಸಿದ ವಿಷಯ. ಈ ಘಟನೆಯನ್ನು ಖಂಡಿತವಾಗಿಯೂ ಪರಿಶೀಲಿಸಲಾಗುವುದು” ಎಂದು ಹೇಳಿದ್ದಾರೆ.
ಏನಿದು ಘಟನೆ?
ಸೆಪ್ಟೆಂಬರ್ 30ರಂದು ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಸಹ ಪೈಲಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದ. ಈ ಪ್ರಯತ್ನವನ್ನು ಪೈಲಟ್-ಇನ್-ಕಮಾಂಡ್ ಆಗಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ವಿಫಲಗೊಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಸಹ ಪೈಲಟ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ.
174 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನ FZ1073, ಬೋಯಿಂಗ್ 737 MAX 8 ಉತ್ತರ ಸೌದಿ ಅರೇಬಿಯಾದಲ್ಲಿ ಸುಮಾರು 30 ಸೆಕೆಂಡುಗಳಲ್ಲಿ 14,300 ಅಡಿ ಎತ್ತರಕ್ಕೆ ಇಳಿದು, ತಬೂಕ್‌ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಜೀಜ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಕ್ಯಾಪ್ಟನ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದ ನಂತರ, ಇಬ್ಬರು ಫ್ಲೈದುಬೈ ಪೈಲಟ್‌ಗಳು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದರು.
ಸೌದಿ ಅರೇಬಿಯಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಮಚ್ಚಾರ್ ಅವರನ್ನು ಗುರುವಾರ (ಅ. 1) ಅಬುಧಾಬಿಗೆ ಸ್ಥಳಾಂತರಿಸಲಾಯಿತು. ಮಚ್ಚಾರ್ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಇದು ಸಾಮಾನ್ಯವಾಗಿ ಪೈಲಟ್-ಇನ್-ಕಮಾಂಡ್ ಸೀಟಿನ ಹಿಂದೆ ಇರುವ ತುರ್ತು ಸಂದರ್ಭದಲ್ಲಿ ಬಳಸುವ ಉಪಕರಣವಾಗಿದ್ದು, ಸುಲಭವಾಗಿ ತೆಗೆಯುವಂತೆ ವಿನ್ಯಾಸಗೊಳಿಸಲಾಗಿದೆ. ಸದ್ಯ, ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ಭಾರತೀಯ ಪೈಲಟ್ ತಪ್ಪಿಸಿದ್ದಾರೆ. ಸ್ಮಿತ್ ಮಚ್ಚಾರ್ ಅವರ ಧೈರ್ಯ, ಸಮಯಪ್ರಜ್ಞೆಯನ್ನು ವಿಶ್ವವೇ ಕೊಂಡಾಡುತ್ತಿದೆ.