ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇರಾನ್ ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಅಂತ್ಯಸಂಸ್ಕಾರ ಪೂರ್ಣ; ಮೊಜ್ತಬಾ ಗೈರು

ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಾಮೆನೇಯಿ ಅವರ ಅಂತ್ಯಸಂಸ್ಕಾರ ಮಶ್ಹಾದ್‌ನ ಇಮಾಮ್ ರೆಜಾ ದರ್ಗಾದಲ್ಲಿ ನೆರವೇರಿದೆ. ವಾರಪೂರ್ತಿ ನಡೆದ ಶೋಕಾಚರಣೆಗಳಿಗೆ ತೆರೆ ಬಿದ್ದಿದ್ದು, ಉತ್ತರಾಧಿಕಾರಿ ಮೊಜ್ತಬಾ ಖಾಮೆನೇಯಿ ಇನ್ನೂ ಸಾರ್ವಜನಿಕವಾಗಿ ಕಾಣಿಸದಿರುವುದು ದೇಶದ ರಾಜಕೀಯ ಬೆಳವಣಿಗೆಗಳ ಕುರಿತು ಕುತೂಹಲ ಮೂಡಿಸಿದೆ.

ಅಲಿ ಖಮೇನಿ ಅಂತ್ಯಸಂಸ್ಕಾರ; ಉತ್ತರಾಧಿಕಾರಿ ಮೊಜ್ತಬಾ ಗೈರುಹಾಜರು

ಅಯತೊಲ್ಲಾ ಅಲಿ ಖಾಮೆನೇಯಿ -

Profile
Sushmitha Jain Jul 10, 2026 9:02 PM

ಟೆಹರಾನ್‌: ಇರಾನ್‌ನ (Iran) ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಅಂತ್ಯಸಂಸ್ಕಾರ ಶುಕ್ರವಾರ ಮುಂಜಾನೆ ಮಶ್ಹಾದ್‌ನಲ್ಲಿರುವ ಶಿಯಾ ಮುಸ್ಲಿಮರ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಇಮಾಮ್ ರೆಜಾ ದರ್ಗಾದಲ್ಲಿ ನೆರವೇರಿತು. ಕಳೆದ ಒಂದು ವಾರದಿಂದ ಇರಾನ್ ಹಾಗೂ ಇರಾಕ್‌ನಲ್ಲಿ ನಡೆದಿದ್ದ ಭವ್ಯ ಅಂತಿಮಯಾತ್ರೆಗಳು, ಶೋಕಾಚರಣೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳಿಗೆ ಇದರೊಂದಿಗೆ ತೆರೆ ಬಿದ್ದಿದೆ.

ಖಮೇನಿ ಅವರ ಪಾರ್ಥಿವ ಶರೀರವನ್ನು ಮಶ್ಹಾದ್ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿಸಲಾಯಿತು. ಸಾವಿರಾರು ಭಕ್ತರು ಹಾಗೂ ಬೆಂಬಲಿಗರು ಇರಾನ್ ಧ್ವಜಗಳನ್ನು ಹಿಡಿದು, ಖಮೇನಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ ಅಂತಿಮ ನಮನ ಸಲ್ಲಿಸಿದರು. ಬಿಳಿ ಪೇಟ ಧರಿಸಿದ್ದ ಧಾರ್ಮಿಕ ಮುಖಂಡರು ಶವವಾಹನದೊಂದಿಗೆ ಸಾಗಿದರು. ಬಳಿಕ ಹೆಲಿಕಾಪ್ಟರ್ ಮೂಲಕ ಶವಪೆಟ್ಟಿಗೆಯನ್ನು ದರ್ಗಾದ ಒಳಭಾಗಕ್ಕೆ ಕೊಂಡೊಯ್ಯಲಾಯಿತು. ಅವರ ಹಿರಿಯ ಪುತ್ರ ಮೊಸ್ತಫಾ ಖಮೇನಿ ಅಂತಿಮ ಪ್ರಾರ್ಥನೆ ನೆರವೇರಿಸಿದರು.

ಮೊಜ್ತಬಾ ಖಮೇನಿ ಗೈರುಹಾಜರಿ ಚರ್ಚೆಗೆ ಕಾರಣ

ಖಮೇನಿ ಅವರ ಪುತ್ರ ಹಾಗೂ ಉತ್ತರಾಧಿಕಾರಿಯಾಗಿ ಘೋಷಿಸಲ್ಪಟ್ಟಿರುವ ಮೊಜ್ತಬಾ ಖಮೇನಿ ಅವರು ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಲಿಖಿತ ಹೇಳಿಕೆಗಳನ್ನು ನೀಡಿದ್ದರೂ, ಅವರ ಯಾವುದೇ ಇತ್ತೀಚಿನ ಫೋಟೋ, ವಿಡಿಯೊ ಅಥವಾ ಧ್ವನಿ ಸಂದೇಶವನ್ನು ಇರಾನ್ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ಯುದ್ಧದ ವೇಳೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದು, ಭದ್ರತಾ ಕಾರಣಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ವರದಿಗಳು ತಿಳಿಸಿವೆ.

ಸಿಗರೇಟ್ ಖರೀದಿಸಲು 500 ರೂ. ಖೋಟಾ ನೋಟು ಕೊಟ್ಟು ಸಿಕ್ಕಿಬಿದ್ದ MBA ಪದವೀಧರ; ರಾಜ್ಯದಲ್ಲಿ ಬೃಹತ್ ಖೋಟಾ ನೋಟು ದಂಧೆ ಬೆಳಕಿಗೆ!

ಅಮೆರಿಕ ವಿರೋಧಿ ಘೋಷಣೆಗಳು

ಅಂತಿಮಯಾತ್ರೆ ವೇಳೆ ಸಾವಿರಾರು ಜನರು ಅಮೆರಿಕ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದರು. "ಡೆತ್ ಟು ಅಮೆರಿಕಾ" ಸೇರಿದಂತೆ ಹಲವು ಘೋಷಣೆಗಳು ಮೊಳಗಿದವು. ಕೆಲವರು ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಫಲಕಗಳನ್ನೂ ಪ್ರದರ್ಶಿಸಿದರು. ಇರಾನ್ ಆಡಳಿತವು ಈ ಭಾರೀ ಜನಸಾಗರವನ್ನು ದೇಶದ ಐಕ್ಯತೆ ಮತ್ತು ಆಡಳಿತದ ಬೆಂಬಲದ ಸಂಕೇತವಾಗಿ ಬಿಂಬಿಸಲು ಪ್ರಯತ್ನಿಸಿತು.

1989ರಲ್ಲಿ ಸುಪ್ರೀಂ ನಾಯಕರಾಗಿ ಅಧಿಕಾರ ಸ್ವೀಕರಿಸಿದ್ದ ಅಲಿ ಖಾಮೆನೇಯಿ ಸುಮಾರು 37 ವರ್ಷಗಳ ಕಾಲ ಇರಾನ್‌ನ ರಾಜಕೀಯ, ಧಾರ್ಮಿಕ ಮತ್ತು ಸೇನಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದ್ದರು. ಅವರ ಆಡಳಿತಾವಧಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಭಾವ ಗಮನಾರ್ಹವಾಗಿ ಹೆಚ್ಚಾಯಿತು. ದೇಶದ ಆರ್ಥಿಕ ನಿರ್ಬಂಧಗಳು, ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ಉದ್ವಿಗ್ನ ಸಂಬಂಧಗಳು ಹಾಗೂ ಆಂತರಿಕ ಪ್ರತಿಭಟನೆಗಳು ಅವರ ಆಡಳಿತದ ಪ್ರಮುಖ ಸವಾಲುಗಳಾಗಿದ್ದವು.

ಯುದ್ಧದ ಬಳಿಕ ರಾಜಕೀಯ ಅನಿಶ್ಚಿತತೆ

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಫೆಬ್ರವರಿ 28ರಂದು ಖಾಮೆನೇಯಿ ಮೃತಪಟ್ಟಿದ್ದರು. ಬಳಿಕ ಇರಾನ್‌ನಲ್ಲಿ ಭದ್ರತಾ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಹೊಸ ನಾಯಕತ್ವದ ಅಡಿಯಲ್ಲಿ ದೇಶದ ರಾಜಕೀಯ ಹಾಗೂ ವಿದೇಶಾಂಗ ನೀತಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರತ್ತ ಜಾಗತಿಕ ಸಮುದಾಯದ ಗಮನ ಕೇಂದ್ರೀಕೃತವಾಗಿದೆ.