ಉಚಿತ ಕ್ಯಾಬ್ ಸವಾರಿ, ಹಲ್ವಾ: ಇದು ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲ; ಯುವ ಜನತೆಯನ್ನು ಆಕರ್ಷಿಸಲು ಚುನಾವಣಾ ಆಯೋಗದ ಆಶ್ವಾಸನೆ
Kerala Election: ಕೇರಳಂ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಈ ನಡುವೆ, ಉಚಿತ ಉಬರ್ ಪ್ರಯಾಣ, 1 ರುಪಾಯಿಗೆ ಹಲ್ವಾ ಮತ್ತು ಅಕ್ಕಿ ಹಿಟ್ಟು ಈ ಆಶ್ವಾಸನೆಗಳು ಬಹಿರಂಗವಾಗಿ ಕೇಳಿಬಂದಿದೆ. ಇದು ರಾಜಕೀಯ ಪಕ್ಷಗಳ ಆಶ್ವಾಸನೆಗಳಲ್ಲ, ಬದಲಾಗಿ ಚುನಾವಣಾ ಆಯೋಗದ್ದು. ಏನಿದು ಸ್ಟೋರಿ ಅಂತೀರಾ? ಇಲ್ಲಿದೆ ವಿವರ.
ಎಐ ರಚಿತ ಚಿತ್ರ -
ತಿರುವನಂತಪುರಂ, ಏ. 4: ಉಚಿತ ಉಬರ್ ಪ್ರಯಾಣ (Free cab rides), 1 ರುಪಾಯಿಗೆ ಹಲ್ವಾ ಮತ್ತು ಅಕ್ಕಿ ಹಿಟ್ಟು-ಇವುಗಳು ಗ್ರಾಹಕರನ್ನು ಆಕರ್ಷಿಸಲು ಮಾಡಿರುವ ಜಾಹೀರಾತಿನಂತೆ ಕಾಣಬಹುದು. ಆದರೆ ಇದು ಏಪ್ರಿಲ್ 9ರಂದು ನಡೆಯಲಿರುವ ಕೇರಳಂ ವಿಧಾನಸಭಾ ಚುನಾವಣೆಯಲ್ಲಿ (Kerala Election) ಯುವ ಮತದಾರರನ್ನು ಮತದಾನ ಮಾಡುವಂತೆ ಉತ್ತೇಜಿಸಲು ಚುನಾವಣಾ ಆಯೋಗ (Election Commission) ಕೈಗೊಂಡಿರುವ ಉಪಕ್ರಮ. ಮತದಾನವನ್ನು ಒಂದು ಹಬ್ಬದಂತೆ ಮಾಡಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚುನಾವಣೆ ಸಮಯದಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ರಾಜಕೀಯ ಪಕ್ಷಗಳು ಸೀರೆ, ತಟ್ಟೆ, ಹಣ ಇತ್ಯಾದಿ ಕೊಡುವುದನ್ನು ನೋಡಿರಬಹುದು ಅಥವಾ ಕೇಳಿರಬಹುದು. ಇದು ನಿಷೇಧವಾಗಿದ್ದರೂ ಇಂತಹ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಆದರೆ ಮತದಾನಕ್ಕೆ ಯುವ ಮತದಾರರನ್ನು ಆಕರ್ಷಿಸಲು ಇದೀಗ ಚುನಾವಣಾ ಆಯೋಗವೇ ವಿನೂತನ ಕ್ರಮ ಕೈಗೊಂಡಿದೆ.
ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳು ಮತ್ತು ಯುವಕರು ಮತದಾನದ ಮಹತ್ವವನ್ನು ತಿಳಿಸಲು ತಮ್ಮದೇ ಆದ ರೀತಿಯಲ್ಲಿ ಏನಾದರೂ ಹೊಸ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅವರು ಯಾವ ರೀತಿಯ ನವೀನ ಆಲೋಚನೆಗಳನ್ನು ಮುಂದಿಟ್ಟುಕೊಂಡು ಬರುತ್ತಾರೆ ಎಂಬುದನ್ನು ಗಮನಿಸುವುದು ಮುಖ್ಯ ಎಂದು ಕೇರಳದ ಮುಖ್ಯ ಚುನಾವಣಾಧಿಕಾರಿ ರತನ್ ಯು. ಕೇಳ್ಕರ್ ಹೇಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿ ರಿಲೀಸ್ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಣ್ಣಾಮಲೈ ಹೆಸರಿಲ್ಲ
ಯಾರೇ ಆಗಲಿ ಮುಂದೆ ಬಂದು ಜನರನ್ನು ಮತದಾನಕ್ಕೆ ಪ್ರೇರೇಪಿಸುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾದರೆ, ಅದು ಒಳ್ಳೆಯ ಬೆಳವಣಿಗೆ. ಇಂತಹ ಕ್ರಮಗಳು ಸಮಾಜದಲ್ಲಿ ಒಳ್ಳೆಯ ಸಂದೇಶವನ್ನು ಹರಡುತ್ತದೆ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ 18-30 ವರ್ಷ ವಯಸ್ಸಿನ ಮತದಾರರು ಸುಮಾರು 50 ಲಕ್ಷ ಇದ್ದಾರೆ. ಆದರೆ ಈ ಮತದಾರರು ಚುನಾವಣೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲ ಮತ್ತು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದ್ದರೂ ಸಹ ಮತ ಚಲಾಯಿಸಲು ಬರುವುದಿಲ್ಲ ಎಂದು ಕೇಳ್ಕರ್ ಹೇಳಿದರು.
ಒಂದು ಮತವು ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಯುವಜನರು ತಪ್ಪಾಗಿ ಭಾವಿಸುತ್ತಾರೆ. ಹೀಗಾಗಿ ಯುವಜನರಲ್ಲಿ ಅವರ ಹಕ್ಕುಗಳು ಮತ್ತು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಬಹು ಮಾರ್ಗಗಳನ್ನು ಆರಿಸಿಕೊಂಡಿದೆ ಎಂದು ಕೇರಳ ಸಿಇಒ ಹೇಳಿದರು.
ಪ್ರತಿ ಜಿಲ್ಲೆಯಲ್ಲೂ ಮೊದಲ ಬಾರಿಗೆ ಮತದಾರರಾಗಿರುವವರಿಗೆ ಮತದಾನದ ದಿನದಂದು ಹಲ್ವಾ ನೀಡುವಂತಹ ವಿವಿಧ ವಿಧಾನಗಳ ಮೂಲಕ ನಾವು ಯುವಜನತೆಯನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಕ್ಷೇತ್ರಕ್ಕೆ ಪ್ರವೇಶಿಸುವಾಗ ಅವರು ಮೊದಲ ಹೆಜ್ಜೆ ಇಡಲು ಸಂತೋಷಪಡುವಂತೆ ಅವರ ನಾಗರಿಕ ಪ್ರಯಾಣವನ್ನು ಸಿಹಿಗೊಳಿಸುವುದು ಇದರ ಉದ್ದೇಶ ಎಂದು ಕೇಳ್ಕರ್ ಹೇಳಿದರು.
ಈ ಕ್ರಮದ ಭಾಗವಾಗಿ 200 ಹಲ್ವಾ ಪ್ಯಾಕೆಟ್‌ಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ (ಡಿಇಒ) ಕಚೇರಿಗಳಿಗೆ ತಲುಪಿಸಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮತ್ತು ಸ್ವಯಂಸೇವಕರು ಮೊದಲ ಬಾರಿಗೆ ಮತದಾನ ಮಾಡುವವರನ್ನು ಪರಿಶೀಲಿಸುತ್ತಾರೆ. ಗೊತ್ತುಪಡಿಸಿದ ಬೂತ್‌ಗಳಲ್ಲಿ ಹಲ್ವಾ ಪ್ಯಾಕೆಟ್‌ಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ಸಿಇಒ ಹೇಳಿದರು.
ತಮಿಳುನಾಡು ಚುನಾವಣೆ; ಡಿಎಂಕೆ, ಟಿವಿಕೆ ನೇರ ಹಣಾಹಣಿ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ವಿಜಯ್
ಇದಲ್ಲದೆ, ಎರ್ನಾಕುಲಂ ಮತ್ತು ತಿರುವನಂತಪುರಂನಲ್ಲಿ ಎರಡು ಕಿಲೋ ಮೀಟರ್ ವ್ಯಾಪ್ತಿಯೊಳಗಿನ ಮತಗಟ್ಟೆಗಳಿಗೆ ಉಚಿತ ಉಬರ್ ಸವಾರಿಯನ್ನು ನೀಡಲಾಗುತ್ತಿದೆ. ಅದಕ್ಕಿಂತ ಹೆಚ್ಚಿನ ದೂರಕ್ಕೆ ಶುಲ್ಕ ವಿಧಿಸಲಾಗುತ್ತದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಚುನಾವಣೆಯ ನಂತರ ಏಪ್ರಿಲ್ 10 ಮತ್ತು 11ರಂದು ಗ್ರಾಹಕರಿಗೆ 1 ರುಪಾಯಿಗೆ ಅಕ್ಕಿ ಹಿಟ್ಟು ಒದಗಿಸುವ ಪ್ರಸ್ತಾವನೆಯೊಂದಿಗೆ ಸಪ್ಲೈಕೋ ಅಭಿಯಾನದಲ್ಲಿ ಕೂ ಜೋಡಿಸಿದೆ. ಸ್ಟಾರ್‌ಬಕ್ಸ್ ಮತ್ತು ಕೆಫೆ ಕಾಫಿ ಡೇಯಂತಹ ಶಾಪ್‌ಗಳು ಮತದಾರರಿಗೆ ಕೆಲವು ರೀತಿಯ ರಿಯಾಯಿತಿಗಳನ್ನು ನೀಡಲು ಮಾತುಕತೆ ನಡೆಸುತ್ತಿವೆ ಎಂದು ಕೇಳ್ಕರ್ ಹೇಳಿದರು.