ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಲು ಸಿದ್ಧ: ಮತ್ತೆ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಸೂಚನೆ ನೀಡಿದ ಭಾರತ
General Upendra Dwivedi: ಉಗ್ರರ ವಿರುದ್ಧ ಕಠಿಣ ಕಾರ್ಯಾಚರಣೆ ಆರಂಭಿಸಲು ಭಾರತೀಯ ಸೇನೆ ಸಂಪೂರ್ಣ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಅವರು, ಸೇನೆಯು ಉಗ್ರವಾದದ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (ಸಂಗ್ರಹ ಚಿತ್ರ) -
ನವದೆಹಲಿ, ಜ. 13: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ(POK)ದಲ್ಲಿರುವ ಭಯೋತ್ಪಾದಕಾ ತಾಣಗಳನ್ನು ಗುರಿಯಾಗಿಸಿಕೊಂಡು ಕಳೆದ ವರ್ಷ ಕೈಗೊಂಡ ಆಪರೇಷನ್ ಸಿಂದೂರ್ (Operation Sindhoor) ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ಹೇಳಿದ್ದಾರೆ. ಭವಿಷ್ಯದಲ್ಲಿ ಯಾವುದೇ ರೀತಿಯ ಆಕ್ರಮಣ ತೋರಿದರೆ ಪರಿಣಾಮಕಾರಿಯಾಗಿ ನಿಭಾಯಿಸಲಾಗುವುದು ಎಂದು ಪಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.
2026ರ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನರಲ್ ದ್ವಿವೇದಿ, ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಸೇನೆಯು ತನ್ನ ಸೈನ್ಯವನ್ನು ಸಜ್ಜುಗೊಳಿಸಿತ್ತು. ಪಾಕಿಸ್ತಾನ ಯಾವುದೇ ತಪ್ಪು ಮಾಡಿದರೆ ಕಾರ್ಯಾಚರಣೆಗಳಿಗೆ ನಮ್ಮ ಸೇನೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದರು.
ಜಮ್ಮು-ಕಾಶ್ಮೀರದ ಭಯೋತ್ಪಾದಕರ ಅಡಗುತಾಣದಲ್ಲಿ ಐಇಡಿ ಪತ್ತೆ
ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಮಾರಕ ಭಯೋತ್ಪಾದಕಾ ದಾಳಿಗೆ ಪ್ರತಿಯಾಗಿ ಭಾರತ ಮೇ 7ರಂದು ಆಪರೇಷನ್ ಸಿಂದೂರ್ ಪ್ರಾರಂಭಿಸಿತು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಹಲವು ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಭದ್ರತಾ ಪಡೆಗಳು ದಾಳಿ ನಡೆಸಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಾಶ ಮಾಡಲಾಯಿತು.
ನಂತರ ಪಾಕಿಸ್ತಾನವು ಕ್ಷಿಪಣಿ ಮತ್ತು ಡ್ರೋನ್ ಮೂಲಕ ಪ್ರತಿದಾಳಿ ನಡೆಸಿತು. ಅದನ್ನು ಭಾರತ ತಡೆಹಿಡಿಯಿತು. ಪ್ರತೀಕಾರವಾಗಿ, ಭಾರತವು ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ಮಾಡಿತು. ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಭಯೋತ್ಪಾದಕರ ಉಡಾವಣಾ ನೆಲೆಗಳನ್ನು ಪುಡಿಪುಡಿ ಮಾಡಿತು. ಭಾರತೀಯ ಸೇನೆಯು ಸಂಘಟಿತ ಗುಂಡಿನ ದಾಳಿ ನಡೆಸಿತು. ಮೇ 10ರಂದು ಕದನ ವಿರಾಮ ಘೋಷಿಸಲಾಯಿತು.
ಆಪರೇಷನ್ ಸಿಂದೂರ್ ಅನ್ನು ಅತ್ಯಂತ ನಿಖರವಾಗಿ ರೂಪಿಸಿ ಕಾರ್ಯಗತಗೊಳಿಸಲಾಯಿತು. ಮೇ7ರಂದು 22 ನಿಮಿಷಗಳ ಆರಂಭಿಕ ಹಂತದಿಂದ ಹಿಡಿದು ಮೇ 10ರವರೆಗೆ 88 ಗಂಟೆಗಳ ಕಾಲ ನಡೆದ ಸಂಯೋಜಿತ ಕಾರ್ಯಾಚರಣೆಯ ಮೂಲಕ, ಉಗ್ರರ ತಾಣಗಳನ್ನು ಧ್ವಂಸಗೊಳಿಸಲಾಯಿತು. ಕದನ ವಿರಾಮ ಘೋಷಿಸಿದಾಗಿನಿಂದ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸೂಕ್ಷ್ಮವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಜನರಲ್ ದ್ವಿವೇದಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಿಂದ ಪಾಕ್, ಪಿಒಕೆಗೆ ವಲಸೆ ಹೋದ 300ಕ್ಕೂ ಹೆಚ್ಚು ಜನರ ಮೇಲೆ ನಿಗಾ
2025ರಲ್ಲಿ, 31 ಭಯೋತ್ಪಾದಕರನ್ನು ನಿರ್ನಾಮ ಮಾಡಲಾಯಿತು. ಅದರಲ್ಲಿ ಶೇ. 65ರಷ್ಟು ಮಂದಿ ಪಾಕಿಸ್ತಾನಿ ಮೂಲದವರು. ಇದರಲ್ಲಿ ಪಹಲ್ಗಾಮ್ ದಾಳಿಯ ಮೂವರು ದುಷ್ಕರ್ಮಿಗಳನ್ನು ಆಪರೇಷನ್ ಮಹಾದೇವ್ ಮೂಲಕ ಹತ್ಯೆ ಮಾಡಲಾಗಿದೆ. ಸಕ್ರಿಯ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಈಗ ಒಂದಂಕಿಯಲ್ಲಿದೆ ಎಂದು ಅವರು ಹೇಳಿದರು.
ಅಲ್ಲದೆ 2025ರಲ್ಲಿ ಉಗ್ರ ಸಂಘಟನೆಗಳಿಗೆ ಸೇರ್ಪಡೆ ಬಹುತೇಕ ಇಲ್ಲದಂತಾಗಿದೆ. ಕೇವಲ ಇಬ್ಬರು ಮಾತ್ರ ಸೇರಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಕಾರಾತ್ಮಕ ಬದಲಾವಣೆಯ ಸ್ಪಷ್ಟ ಸೂಚಕ. ಅಭಿವೃದ್ಧಿ ಚಟುವಟಿಕೆಗಳು ಚುರುಕುಗೊಳ್ಳುವುದು, ಪ್ರವಾಸೋದ್ಯಮ ಪುನಶ್ಚೇತನಗೊಳ್ಳುವುದು ಹಾಗೂ ಶಾಂತಿಯುತವಾಗಿ ನಡೆದ ಅಮರನಾಥಯಾತ್ರೆಗೆ ಐದು ವರ್ಷಗಳ ಸರಾಸರಿಯನ್ನು ಮೀರಿ ನಾಲ್ಕು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಭಾಗವಹಿಸಿರುವುದು- ಇವೆಲ್ಲವೂ ಉತ್ತಮ ಬದಲಾವಣೆಯ ಸೂಚನೆ. ಭಯೋತ್ಪಾದನೆಯಿಂದ ಪ್ರವಾಸೋದ್ಯಮದತ್ತ ಎಂಬ ಪರಿಕಲ್ಪನೆ ಕ್ರಮೇಣ ಆಕಾರ ಪಡೆಯುತ್ತಿದೆ ಎಂದು ಅವರು ಹೇಳಿದರು.