ಕಡಲ ಮಧ್ಯೆ ಮತ್ತೊಮ್ಮೆ ಆಪತ್ಬಾಂಧವನಾದ ಭಾರತ; ಮುಳುಗುತ್ತಿದ್ದ ವಿದೇಶಿ ರಾಸಾಯನಿಕ ಟ್ಯಾಂಕರ್ ರಕ್ಷಿಸಿದ ಭಾರತೀಯ ಕರಾವಳಿ ಪಡೆ: 23 ಮಂದಿ ಪಾರು
Indian Coast Guard rescue: ಸಮುದ್ರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ಭಾರತೀಯ ಕರಾವಳಿ ಕಾವಲು ಪಡೆ (ICG) ತಪ್ಪಿಸಿದೆ. ಒಡಿಶಾದ ಪಾರಾದೀಪ್ ಕರಾವಳಿಯ ಸಮೀಪ 23 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಸ್ಥಿರ ಸ್ಥಿತಿಯಲ್ಲಿದ್ದ ರಾಸಾಯನಿಕ ಟ್ಯಾಂಕರ್ ಅನ್ನು ಅತ್ಯಂತ ಸಾಹಸಿಕವಾಗಿ ರಕ್ಷಿಸಲಾಗಿದೆ.
ಮುಳುಗುತ್ತಿದ್ದ ವಿದೇಶಿ ಟ್ಯಾಂಕರ್‌ನ್ನು ರಕ್ಷಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆ -
ಭುವನೇಶ್ವರ, ಸೆ. 28: ಸಮುದ್ರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ಭಾರತೀಯ ಕರಾವಳಿ ಕಾವಲು ಪಡೆ (ICG) ತಪ್ಪಿಸಿದೆ. ಒಡಿಶಾದ ಪಾರಾದೀಪ್ ಕರಾವಳಿಯ ಸಮೀಪ 23 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಸ್ಥಿರ ಸ್ಥಿತಿಯಲ್ಲಿದ್ದ ರಾಸಾಯನಿಕ ಟ್ಯಾಂಕರನ್ನು ರಕ್ಷಿಸಲಾಗಿದೆ. ತುರ್ತು ಸಹಾಯಕ್ಕಾಗಿ ಬಂದ ಕರೆಯನ್ನು ಸ್ವೀಕರಿಸಿದ ಕೂಡಲೇ ಭಾರತೀಯ ಕರಾವಳಿ ಕಾವಲು ಪಡೆ (Indian Coast Guard) ಕಾರ್ಯಾಚರಣೆಗೆ ಇಳಿದಿದ್ದು, ವಿದೇಶಿ ಹಡಗನ್ನು ಸುರಕ್ಷಿತವಾಗಿ ಎಳೆದುಕೊಂಡು ದಡಕ್ಕೆ ಬರಲಾಯಿತು.
“ಪಾರಾದೀಪ್‌ನಿಂದ ಎಂಟಿ ಸೀಗಲ್ 9 ಹಡಗಿನಿಂದ ಬಂದ ಗಂಭೀರ ತುರ್ತು ಕರೆಯನ್ನು ಸ್ವೀಕರಿಸಿದ ಬಳಿಕ, 9,000 ಮೆಟ್ರಿಕ್ ಟನ್ ಪಾಮ್ ಎಣ್ಣೆ ಮತ್ತು 23 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಸ್ಥಿರ ಸ್ಥಿತಿಯಲ್ಲಿದ್ದ ರಾಸಾಯನಿಕ ಟ್ಯಾಂಕರ್‌ನ್ನು ರಕ್ಷಿಸಲು ಐಸಿಜಿಎಸ್ ವಿಶ್ವಸ್ಟ್ ಕ್ಷಿಪ್ರ ಮತ್ತು ನಿರ್ಣಾಯಕ ಕಾರ್ಯಾಚರಣೆಯನ್ನು ಆರಂಭಿಸಿತು” ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇಲ್ಲಿದೆ ಪೋಸ್ಟ್:
Averting a major disaster at sea!
— Indian Coast Guard (@IndiaCoastGuard) September 28, 2026
Following a critical distress call from MT Seagull 9 off #Paradip, #ICGS Vishwast launched a swift & decisive operation to rescue the unstable chemical tanker carrying 9,000 MT palm oil & 23 crew members.
Braving high-risk conditions, the… pic.twitter.com/3F1h4d1Yid
ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡ ಭಾರತೀಯ ಕರಾವಳಿ ಕಾವಲು ಪಡೆ, ಪರಿಣಿತಿ ಹೊಂದಿದ ಹಾನಿ ನಿಯಂತ್ರಣ ತಂಡವನ್ನು ಕಳುಹಿಸಿತು ಎಂದು ತಿಳಿಸಿದೆ. ತಂಡವು ಬ್ಯಾಲಸ್ಟ್ ಟ್ಯಾಂಕ್‌ಗಳಲ್ಲಿದ್ದ ನೀರನ್ನು ಹೊರತೆಗೆಯಲು ಸಬ್‌ಮರ್ಸಿಬಲ್ ಪಂಪ್‌ಗಳನ್ನು ಬಳಸಿತು. ಅಲ್ಲದೆ, ಹಾನಿಗೊಳಗಾದ ನೀರಿನ ಪೈಪ್‌ಲೈನ್‌ಗಳನ್ನು ಮುಚ್ಚುವ ಮೂಲಕ ಒಂದು ಬದಿಗೆ ವಾಲಿದ್ದ ಹಡಗನ್ನು ಸ್ಥಿರಗೊಳಿಸಲಾಯಿತು ಎಂದು ತಿಳಿಸಿದೆ.
ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ: ರಾಯಭಾರಿಗೆ ಭಾರತದಿಂದ ಸಮನ್ಸ್
ಮಾಲಿನ್ಯ ನಿಯಂತ್ರಣ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ನಿರಂತರ ನಿಗಾ ಇರಿಸಲು ಐಸಿಜಿ ಮಾಲಿನ್ಯ ನಿಯಂತ್ರಣ ಹಡಗು ಮತ್ತು ಆಫ್‌ಶೋರ್ ಗಸ್ತು ಹಡಗನ್ನು ಸಹ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅದು ಹೇಳಿದೆ. ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಅಲ್ಪ ಪ್ರಮಾಣದ ಪಾಮ್ ಎಣ್ಣೆಯ ಪದರ ಸಂಪೂರ್ಣವಾಗಿ ಮಾಯವಾಗಿದೆ ಎಂಬುದನ್ನು ಐಸಿಜಿ ಡಾರ್ನಿಯರ್ ಖಚಿತಪಡಿಸಿದೆ ಎಂದು ತಿಳಿಸಲಾಗಿದೆ.
“ಹಡಗನ್ನು ಇದೀಗ ಸುರಕ್ಷಿತವಾಗಿ ಪಾರಾದೀಪ್ ಕಡೆಗೆ ಎಳೆದುಕೊಂಡು ಹೋಗಲಾಗುತ್ತಿದೆ. ಭಾರತೀಯ ಕರಾವಳಿ ಕಾವಲು ಪಡೆಯ ಘಟಕಗಳು ಸಕ್ರಿಯವಾಗಿ ನಿಗಾ ವಹಿಸುತ್ತಿದ್ದು, 24X7 ಸುರಕ್ಷತೆಯನ್ನು ಖಚಿತಪಡಿಸುವುದರ ಜತೆಗೆ ನಮ್ಮ ಸಾಗರಗಳನ್ನು ರಕ್ಷಿಸುತ್ತಿವೆ” ಎಂದು ಐಸಿಜಿ ತಿಳಿಸಿದೆ.
ಭಾರತೀಯ ಕರಾವಳಿ ಕಾವಲು ಪಡೆ ದೇಶದ ಸಾಗರ ಸಂಬಂಧಿತ ಕಾನೂನು ಜಾರಿ ಸಂಸ್ಥೆಯಾಗಿದ್ದು, ಭಾರತದ ಕಡಲಾಚೆಯ ಆಸ್ತಿಗಳ ಸುರಕ್ಷತೆಯನ್ನು ಖಚಿತಪಡಿಸುವುದು, ಸಮುದ್ರ ಸಂಪರ್ಕ ಮಾರ್ಗಗಳ ಭದ್ರತೆಯನ್ನು ಕಾಪಾಡುವುದು, ಸಮುದ್ರದಲ್ಲಿ ಉಂಟಾಗುವ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸುವುದು, ಸಮುದ್ರ ಮಾಲಿನ್ಯವನ್ನು ನಿಯಂತ್ರಿಸುವುದು ಹಾಗೂ ಮಾನವೀಯ ನೆರವು ಒದಗಿಸುವುದು ಇದರ ಪ್ರಮುಖ ಜವಾಬ್ದಾರಿ.