ಬ್ಯಾಂಕ್ ಮುಷ್ಕರ ಮುಂದೂಡಿಕೆ: ನೌಕರರ ಪಾಲಿಗೆ 7 ದಿನಗಳ ಕೆಲಸದ ವಾರ! ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಹಬ್ಬ
Bank Strike Gets Called Off: ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಮುಷ್ಕರ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಭಾನುವಾರ ಕೆಲಸ ಮಾಡಿದ್ದ ಬ್ಯಾಂಕ್ ನೌಕರರು ಈ ವಾರ ಸತತ ಏಳು ದಿನ ಕೆಲಸ ಮಾಡಿದಂತಾಗಲಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಸೆ. 28: ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು (Nationwide Bank Strike) ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದ್ದು, ಭಾನುವಾರವೂ (ಸೆಪ್ಟೆಂಬರ್ 27) ಬ್ಯಾಂಕ್ ನೌಕರರು ಕೆಲಸ ಮಾಡಿದ್ದರಿಂದ ಈ ವಾರ ಸತತ ಏಳು ದಿನ ಕೆಲಸ ಮಾಡುವಂತಾಗಲಿದೆ ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟ ವತಿಯಿಂದ ಕರೆ ನೀಡಲಾಗಿದ್ದ ರಾಷ್ಟ್ರವ್ಯಾಪಿ ಮುಷ್ಕರ ಆರಂಭವಾಗಲು ಕೆಲವೇ ಗಂಟೆಗಳಿದ್ದಾಗ, ಭಾರತೀಯ ಬ್ಯಾಂಕುಗಳ ಸಂಘದ ಜತೆ ನಡೆದ ಕೊನೆಯ ಕ್ಷಣದ ಸಭೆಯ ಬಳಿಕ ಮುಷ್ಕರವನ್ನು ಮುಂದೂಡಲು ನಿರ್ಧರಿಸಲಾಯಿತು.
ಮುಷ್ಕರ ನಡೆಯಲಿದೆ ಎಂಬ ಹಿನ್ನೆಲೆಯಲ್ಲಿ ಕೆಲವು ಬ್ಯಾಂಕ್ ನೌಕರರು ಭಾನುವಾರ ಕೆಲಸ ಮಾಡಿದ್ದರು. ಆದರೆ ಮುಷ್ಕರ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಈ ವಾರ ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ, ನಂತರ ಅಕ್ಟೋಬರ್ 3 ಶನಿವಾರವೂ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ಭಾನುವಾರ ಸೇರಿ ಲೆಕ್ಕ ಹಾಕಿದರೆ, ಕೆಲ ನೌಕರರಿಗೆ ಸತತ ಏಳು ದಿನ ಕೆಲಸ ಮಾಡುವಂತಾಗಿದೆ. ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಬ್ಯಾಂಕ್ ನೌಕರರ ಪರಿಸ್ಥಿತಿಯನ್ನು ವ್ಯಂಗ್ಯವಾಗಿ ತೋರಿಸುವ ಮೀಮ್‌ಗಳ ಮಹಾಪೂರವೇ ಹರಿದುಬರುತ್ತಿದೆ.
ಇಲ್ಲಿದೆ ಮೀಮ್:
Bank Employees who worked on Sunday watching 3 day strike getting called off pic.twitter.com/kGYf5TxV4t
— Abhishek (@be_mewadi) September 27, 2026
ಒಂದು ಮೀಮ್‌ನಲ್ಲಿ, “ಭಾನುವಾರ ಕೆಲಸ ಮಾಡಿದ ಬ್ಯಾಂಕ್ ನೌಕರರು, ಮೂರು ದಿನಗಳ ಮುಷ್ಕರ ರದ್ದಾದ ಸುದ್ದಿ ನೋಡುತ್ತಿರುವಾಗ…” ಎಂಬ ಬರಹದೊಂದಿಗೆ ನಟ ರಜನಿಕಾಂತ್ ಅವರ ಚಲನಚಿತ್ರದ ದುಃಖದ ದೃಶ್ಯವನ್ನು ಬಳಸಲಾಗಿದೆ.
ಮತ್ತೊಂದು ಮೀಮ್‌ನಲ್ಲಿ, “ಭಾನುವಾರ ಕೆಲಸ ಮಾಡಿದ ಬಳಿಕ ಮುಷ್ಕರ ರದ್ದಾದಾಗ ಬ್ಯಾಂಕ್ ನೌಕರರು…” ಎಂಬ ಬರಹದೊಂದಿಗೆ ನಟ ಸಲ್ಮಾನ್ ಖಾನ್ ಅವರ ಚಲನಚಿತ್ರದ ದುಃಖದ ದೃಶ್ಯವನ್ನು ಉಪಯೋಗಿಸಲಾಗಿದೆ.
ಇದೇ ರೀತಿಯಲ್ಲಿ ಹಲವು ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಷ್ಕರ ಮುಂದೂಡಿಕೆಯಾದ ಬಳಿಕ ನೌಕರರ ನಿರಾಸೆಯನ್ನು ವಿವಿಧ ಚಲನಚಿತ್ರ ದೃಶ್ಯಗಳು ಮತ್ತು ಚಿತ್ರಗಳ ಮೂಲಕ ತೋರಿಸಲಾಗಿದೆ.
Bank employees when strike gets cancelled after they worked on a Sunday pic.twitter.com/EG3iE9y7Qa
— Sagar (@sagarcasm) September 27, 2026
ಸಭೆಯಲ್ಲಿ ಏನು ನಿರ್ಧಾರ?
ಭಾನುವಾರ ರಾತ್ರಿ 9:30ಕ್ಕೆ ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟ ಮತ್ತು ಭಾರತೀಯ ಬ್ಯಾಂಕುಗಳ ಸಂಘದ ನಡುವೆ ಸಭೆ ನಡೆದಿದ್ದು, ಸಭೆಯ ಬಳಿಕ ಹಲವು ವಿಷಯಗಳ ಕುರಿತು ಒಪ್ಪಂದಕ್ಕೆ ಬರಲಾಗಿದೆ.
ಪಂಜಾಬ್ ಕಾಲೇಜ್‌ನಲ್ಲಿ ಭುಗಿಲೆದ್ದ ವಿದ್ಯಾರ್ಥಿಗಳ ಪ್ರತಿಭಟನೆ; ತರಗತಿಗಳು ರದ್ದು, ಇಂಟರ್ನೆಟ್ ಸ್ಥಗಿತಕ್ಕೆ ಆದೇಶ
ಮುಖ್ಯವಾಗಿ:
- ಎಲ್ಲ ಶನಿವಾರಗಳನ್ನು ಬ್ಯಾಂಕ್ ರಜೆಯನ್ನಾಗಿ ಮಾಡುವ ವಿಚಾರ ಪರಿಶೀಲಿಸಲು ಎರಡೂ ಸಂಘಟನೆಗಳ ಜಂಟಿ ಸಮಿತಿಯನ್ನು ತಕ್ಷಣ ರಚಿಸಲು ನಿರ್ಧರಿಸಲಾಗಿದೆ.
- ಗ್ರಾಹಕರು ಸೇರಿ ಸಂಬಂಧಪಟ್ಟ ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿ, ಈ ವಿಚಾರಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮಿತಿ ಪ್ರಯತ್ನಿಸಲಿದೆ.
- ನಾಲ್ಕನೇ ಹಂತ ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಸಂಬಂಧಿಸಿದ ಬದಲಾವಣೆಗಳ ಕುರಿತು ಮಾತುಕತೆ ಆರಂಭಿಸಲಾಗುವುದು.
- 2024ರ ಮಾರ್ಚ್ 8ರ ಸಭೆಯ ದಾಖಲೆಯಲ್ಲಿ ಉಲ್ಲೇಖಿಸಲಾಗಿರುವ ಇತರ ಬಾಕಿ ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆಸಿ ಶೀಘ್ರ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಲಾಗಿದೆ.
ಮುಷ್ಕರ ಮುಂದೂಡಿಕೆಯಿಂದ ಬ್ಯಾಂಕಿಂಗ್ ಸೇವೆಗಳ ಮೇಲೆ ಉಂಟಾಗಬಹುದಾಗಿದ್ದ ವ್ಯತ್ಯಯ ತಪ್ಪಿದರೂ, ಈಗಾಗಲೇ ಭಾನುವಾರ ಕೆಲಸ ಮಾಡಿದ್ದ ಬ್ಯಾಂಕ್ ನೌಕರರಲ್ಲಿ “ಮುಷ್ಕರವೇ ಇಲ್ಲ ಎಂದಾದರೆ ಭಾನುವಾರ ಕೆಲಸ ಮಾಡಿದ್ದು ಏಕೆ?” ಎಂಬ ನಿರಾಸೆ ಸಾಮಾಜಿಕ ಜಾಲತಾಣಗಳ ಮೀಮ್‌ಗಳಲ್ಲಿ ವ್ಯಕ್ತವಾಗುತ್ತಿದೆ.