ಗೋವಾ ನೈಟ್ಕ್ಲಬ್ ದುರಂತ: ಲೂತ್ರಾ ಸಹೋದರರು ಪರಾರಿ, ಸಹ-ಮಾಲೀಕನ ಬಂಧನ
Goa Nightclub Tragedy: ಗೋವಾದಲ್ಲಿ ಸಂಭವಿಸಿದ ನೈಟ್‌ಕ್ಲಬ್ ದುರಂತ ಪ್ರಕರಣ ಹೊಸ ತಿರುವು ಪಡೆದಿದೆ. ಘಟನೆಯ ಬಳಿಕ ಆರೋಪಿಗಳಾದ ಲೂತ್ರಾ ಸಹೋದರರು ಥೈಲ್ಯಾಂಡ್‍ಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಸಹ–ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಸಂಬಂಧಿಸಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ.
ಲೂತ್ರಾ ಸಹೋದರರು (ಸಂಗ್ರಹ ಚಿತ್ರ) -
ನವದೆಹಲಿ, ಡಿ. 10: ಗೋವಾ ನೈಟ್ಕ್ಲಬ್ ದುರಂತ (Goa Nightclub Tragedy) ಪ್ರಕರಣಕ್ಕೆ ಸಂಬಂಧಿಸಿದಂತೆ 25 ಜನರ ಸಾವಿಗೆ ಕಾರಣವಾದ ಬಿರ್ಚ್ ಬೈ ರೋಮಿಯೋ ಲೇನ್ (Birch by Romeo Lane) ನೈಟ್‌ಕ್ಲಬ್‌ನ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾನನ್ನು ಗೋವಾ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಗುಪ್ತಾ ಹಾಗೂ ಮತ್ತೊಬ್ಬ ಮಾಲೀಕ ಸುರಿಂದರ್ ಕುಮಾರ್ ಖೋಸ್ಲಾ ವಿರುದ್ಧ ರಾಜ್ಯ ಪೊಲೀಸರು ಈ ಹಿಂದೆ ಲುಕ್ ಔಟ್ ಸರ್ಕ್ಯುಲರ್ (ಎಲ್‌ಒಸಿ) ಹೊರಡಿಸಿದ್ದರು.
ನಾವು ನೈಟ್‌ಕ್ಲಬ್‌ನ ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾನನ್ನು ಬಂಧಿಸಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರನೇ ವ್ಯಕ್ತಿ ಈತ ಎಂದು ಗೋವಾ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಈ ಹಿಂದೆ, ಪೊಲೀಸ್ ತಂಡವು ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದಾಗ, ಅವರು ಪತ್ತೆಯಾಗಾದ ಕಾರಣ ಎಲ್‌ಒಸಿ ಹೊರಡಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು. ನಂತರ ಗುಪ್ತಾ ಅವರನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ತೆ ಮಾಡಿ ಬಂಧಿಸಲಾಯಿತು ಎಂದು ಅವರು ಹೇಳಿದರು.
ಗೋವಾ ನೈಟ್ ಕ್ಲಬ್ ಅಗ್ನಿ ದುರಂತ: ಬೆಂಕಿ ಕಾಣಿಸಿಕೊಳ್ಳಲು ಕಾರಣವಾದ ವಿಡಿಯೊ ಇಲ್ಲಿದೆ ನೋಡಿ
ಗೋವಾಕ್ಕೆ ಕರೆತರಲು ಔಪಚಾರಿಕ ಪ್ರಕ್ರಿಯೆಗಳು ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನೈಟ್‌ಕ್ಲಬ್‌ನ ಇನ್ನಿಬ್ಬರು ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಪರಾರಿಯಾಗಿದ್ದು, ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.
ಪೊಲೀಸರು ಇದುವರೆಗೆ ಐವರನ್ನು ಬಂಧಿಸಿದ್ದಾರೆ. ನೈಟ್‌ಕ್ಲಬ್‌ನ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋದಕ್, ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ, ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್ ಮತ್ತು ಉದ್ಯೋಗಿ ಭರತ್ ಕೊಹ್ಲಿ ಬಂಧಿತರು.
ಶನಿವಾರ (ಡಿಸೆಂಬರ್ 6) ಮಧ್ಯರಾತ್ರಿ ಉತ್ತರ ಗೋವಾದ ಅರ್ಪೋರಾದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಜನರು ಮೃತಪಟ್ಟಿದ್ದರು. ಬೆಂಕಿ ದುರಂತ ಸಂಭವಿಸುತ್ತಿದ್ದಂತೆ, ಕೆಲ ಗಂಟೆಗಳಲ್ಲೇ ಕ್ಲಬ್‌ನ ಇಬ್ಬರು ಮಾಲೀಕರು ದೇಶ ಬಿಟ್ಟು ಥೈಲ್ಯಾಂಡ್‌ಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾದ ತಕ್ಷಣ, ಗೋವಾ ಪೊಲೀಸರು ದೆಹಲಿಗೆ ತೆರಳಿದ್ದರು. ಮಾಲೀಕರಾದ ಗೌರವ್ ಮತ್ತು ಸೌರಭ್ ಲೂತ್ರಾ ಅವರನ್ನು ವಶಕ್ಕೆ ಪಡೆಯಲು ರಾಷ್ಟ್ರ ರಾಜಧಾನಿಗೆ ತೆರಳಿದ್ದರು. ಆದರೆ ಈ ವೇಳೆ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅವರ ಮನೆಗೆ ಪೊಲೀಸರು ನೋಟಿಸ್ ಅಂಟಿಸಿ ಬಂದಿದ್ದರು. ಆದರೆ ನಂತರ ಅವರು ದೇಶವನ್ನೇ ಬಿಟ್ಟು ಹೋಗಿರುವುದು ತಿಳಿದು ಬಂತು.
ಥೈಲ್ಯಾಂಡ್‍ಗೆ ಪರಾರಿಯಾಗಿರುವ ಆರೋಪಿಗಳ ಒಡೆತನದ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ. ಸರ್ಕಾರದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಒಡೆತನದ ಭೂಮಿಯಲ್ಲಿ ಈ ರೆಸ್ಟೋರೆಂಟ್ ಅನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎನ್ನಲಾಗಿದ್ದು, ಇದೀಗ ಈ ಇಬ್ಬರು ಸಹೋದರರ ಆಸ್ತಿಗಳನ್ನು ಕೆಡವಲಾಗಿದೆ. ಗೌರವ್ ಮತ್ತು ಸೌರಭ್ ಒಡೆತನದ ವಾಗೇಟರ್‌ನಲ್ಲಿರುವ ಅಕ್ರಮ ರೋಮಿಯೋ ಲೇನ್ ಬೀಚ್ ಶ್ಯಾಕ್ ಅನ್ನು ನೆಲಸಮ ಮಾಡುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.