ಗೋವಾ ನೈಟ್‍ಕ್ಲಬ್ ದುರಂತ; ತಡವಾಗಿ ಬಂದ ಕ್ಯಾಬ್ ಚಾಲಕನಿಂದ ಕೂದಲೆಳೆ ಅಂತರದಲ್ಲಿ ಪಾರಾದ ದೆಹಲಿ ಪ್ರವಾಸಿಗ
Goa nightclub fire: ಉತ್ತರ ಗೋವಾದ ಅರ್ಪೋರಾ ಗ್ರಾಮದ ನೈಟ್‌ಕ್ಲಬ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 25 ಜನರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ಸಂಬಂಧ ಸಮಗ್ರ ತನಿಖೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶ ಹೊರಡಿಸಿದ್ದಾರೆ. ಈ ನಡುವೆ ದೆಹಲಿ ಮೂಲದ ಪ್ರವಾಸಿಗರೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಬಗ್ಗೆ ನೆನಪಿಸಿಕೊಂಡಿದ್ದಾರೆ.
ಡಾ. ಅವನೀಶ್ ಮತ್ತುಗೋವಾ ಬೆಂಕಿ ದುರಂತ (ಸಂಗ್ರಹ ಚಿತ್ರ) -
ಪಣಜಿ, ಡಿ. 7: ಭಾನುವಾರ 25 ಜನರ ಸಾವಿಗೆ ಕಾರಣವಾದ ಅರ್ಪೋರಾದಲ್ಲಿನ ನೈಟ್‌ಕ್ಲಬ್‌ನಲ್ಲಿ (Goa nightclub fire) ಸಂಭವಿಸಿದ ಅಗ್ನಿ ಅವಘಡದ ಬಗ್ಗೆ ತನಿಖೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Goa Chief Minister Pramod Sawant) ಆದೇಶ ಹೊರಡಿಸಿದ್ದಾರೆ. ಕ್ಲಬ್‌ನ ಮಾಲೀಕ ಮತ್ತು ಜನರಲ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಆರಂಭಿಕ ತನಿಖೆಯಲ್ಲಿ ನೈಟ್‌ಕ್ಲಬ್ ಕಡ್ಡಾಯ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಕಂಡು ಬಂದಿದೆ ಎಂದು ಸಿಎಂ ಹೇಳಿದರು. ಕ್ಲಬ್ ಆಡಳಿತ ಮಂಡಳಿಯ ವಿರುದ್ಧ ಮಾತ್ರವಲ್ಲದೆ, ಉಲ್ಲಂಘನೆಗಳ ಹೊರತಾಗಿಯೂ ಅದನ್ನು ನಡೆಸಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
25 ಜನರನ್ನು ಬಲಿ ಪಡಿದ ಗೋವಾ ನೈಟ್ ಕ್ಲಬ್; ಧಗಧಗ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್
ಪ್ರವಾಸಿಗರು ತುಂಬಿ ತುಳುಕಿರುವ ಈ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ದುರದೃಷ್ಟಕರ ಘಟನೆ ಎಂದು ಸಾವಂತ್ ಹೇಳಿದರು. ಈ ಸಂಬಂಧ ಸೂಕ್ತ ವಿಚಾರಣೆ ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪಣಜಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಅರ್ಪೋರಾ ಗ್ರಾಮದಲ್ಲಿರುವ ಈ ನೈಟ್‌ಕ್ಲಬ್ ಕಳೆದ ವರ್ಷವಷ್ಟೇ ತೆರೆಯಲ್ಪಟ್ಟಿದ್ದು, ಪ್ರವಾಸಿಗರು ಮತ್ತು ಸ್ಥಳೀಯರಿಗೆ ಜನಪ್ರಿಯ ತಾಣವಾಗಿತ್ತು. ಬಂಬೋಲಿಮ್‌ನ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮೃತಪಟ್ಟವರ ಕುಟುಂಬಗಳು ಜಮಾಯಿಸಿದ್ದು, ಹಲವು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಠಾತ್ ದುರಂತದ ಬಗ್ಗೆ ಅನೇಕರು ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ.
ದುರಂತದಲ್ಲಿ ಇಬ್ಬರು ಸಂಬಂಧಿಕರನ್ನು ಕಳೆದುಕೊಂಡ ನಾರಾಯಣ್ ಮಾಥುರ್ ನೋವು ತೋಡಿಕೊಂಡಿದ್ದಾರೆ. ʼʼರೆಸ್ಟೋರೆಂಟ್‌ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸಹೋದರ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಜತೆಗೆ ನೆರೆಹೊರೆಯವರೂ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ನಾವೆಲ್ಲರೂ ಜಾರ್ಖಂಡ್ ಮೂಲದವರುʼʼ ಎಂದು ಹೇಳಿದರು.
ಘಟನೆಯಲ್ಲಿ ನಾಲ್ವರು ಪ್ರವಾಸಿಗರು ಮತ್ತು 14 ಸಿಬ್ಬಂದಿ ಸೇರಿದಂತೆ 25 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಉಳಿದ ಏಳು ಮಂದಿ ಮೃತಪಟ್ಟವರ ಗುರುತು ಪತ್ತೆಗೆ ತನಿಖೆ ನಡೆಯುತ್ತಿದೆ.
ಡಾ. ಅವನೀಶ್ ಅವರ ಅನುಭವ:
#WATCH | Dr Avanish from Delhi, who had planned to visit the ill-fated restaurant where a fire broke out, says, "...Actually, we got lucky because our cab driver was late or else we would be here..." https://t.co/qSth23gSZe pic.twitter.com/fPoSx1Pfcq
— ANI (@ANI) December 7, 2025
ಕೂದಲೆಳೆ ಅಂತರದಲ್ಲಿ ಪಾರು
ಈ ಮಧ್ಯೆ ಅನಿರೀಕ್ಷಿತ ವಿಳಂಬದಿಂದಾಗಿ ಬದುಕುಳಿದ ಪ್ರವಾಸಿಗನೊಬ್ಬನ ಕಥೆ ಗಮನ ಸೆಳೆದಿದೆ. ದೆಹಲಿಯ ಪ್ರವಾಸಿ ಡಾ. ಅವನೀಶ್ ಈ ಅದೃಷ್ಟವಂತ. ʼʼನಮ್ಮ ಕ್ಯಾಬ್ ಚಾಲಕ ತಡವಾಗಿ ಬಂದಿದ್ದರಿಂದ ನಮ್ಮ ಜೀವ ಉಳಿಯಿತು. ಇಲ್ಲದಿದ್ದರೆ ಆ ವೇಳೆ ನಾವು ಅಲ್ಲಿಯೇ ಇರುತ್ತಿದ್ದೆವುʼʼ ಎಂದು ಹೇಳಿದರು. ಇತರ ಅನೇಕ ಪ್ರವಾಸಿಗರು ಮತ್ತು ಉದ್ಯೋಗಿಗಳಿಗೆ ಈ ಅದೃಷ್ಟವಿರಲಿಲ್ಲ. ಬೆಂಕಿಯು ವೇಗವಾಗಿ ಹರಡುತ್ತಿದ್ದಂತೆ ಹಲವು ಮಂದಿ ಒಳಗೆ ಸಿಲುಕಿಕೊಂಡು ಬೆಂದು ಹೋದರು ಎಂದು ತಿಳಿಸಿದರು.
ಬೆಂಕಿಯ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ತನಿಖೆ ಮುಂದುವರಿಸಿದೆ. ಅಧಿಕಾರಿಗಳು ಇನ್ನೂ ಬೆಂಕಿ ದುರಂತದ ಕಾರಣದ ಬಗ್ಗೆ ದೃಢಪಡಿಸದಿದ್ದರೂ, ನೈಟ್‌ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಲು ವಿಫಲವಾಗಿದೆ ಎಂಬ ಆರಂಭಿಕ ಅನುಮಾನ ಮೂಡಿದೆ.
ಪ್ರಕರಣ ಸಂಬಂಧ ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆ ಸಮಗ್ರವಾಗಿ ನಡೆಯಲಿದ್ದು, ಎಲ್ಲ ಜವಾಬ್ದಾರಿಯುತ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ, ಮೃತರ ಕುಟುಂಬಗಳಿಗೆ ಭರವಸೆ ನೀಡಿದೆ.