Pahalgam Terror Attack: "ನಿಮ್ಮವರನ್ನು ಕೊಂದವರಿಗೂ ಹೀಗೆ ಕಣ್ಣೀರು ಹಾಕಿಸುತ್ತೇವೆ" ; ಸಂತ್ರಸ್ತ ಕುಟುಂಬಕ್ಕೆ ಅಮಿತ್ ಶಾ ಸಾಂತ್ವನ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಿನ್ನೆ (ಮಂಗಳವಾರ) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳು ಬುಧವಾರ ಶ್ರೀನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಕಣ್ಣೀರು ಹಾಕಿದ್ದಾರೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ (Pahalgam Terror Attack) ನಿನ್ನೆ (ಮಂಗಳವಾರ) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳು ಬುಧವಾರ ಶ್ರೀನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಕಣ್ಣೀರು ಹಾಕಿದ್ದಾರೆ. ಅಮಿತ್ ಶಾ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ದಿ ರೆಸಿಸ್ಟೆನ್ಸ್ ಫ್ರಂಟ್ ಭಯೋತ್ಪಾದಕರು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಗಾಯಾಳುಗಳನ್ನು ಅನಂತ್‌ನಾಗ್‌ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ದಾಳಿಯ ಸುದ್ದಿ ತಿಳಿಯುತ್ತಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರಕ್ಕೆ ದೌಡಾಯಿಸಿದ್ದಾರೆ. ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರನ್ನು ಬೇಟೆಯಾಡುವುದಾಗಿ ಅವರು ತಿಳಿಸಿದ್ದರು. ಇದೀಗ ಅವರು ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದ್ದಾರೆ. ಈ ಹೇಯ ಕೃತ್ಯ ಎಸಗಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅವರೆಲ್ಲ ನ್ಯಾಯದ ಮುಂದೆ ಬರಲೇಬೇಕು. ಈ ಭಯಾನಕ ದಾಳಿಯ ಅಪರಾಧಿಗಳನ್ನು ಶಿಕ್ಷಿಸಲು ಭದ್ರತಾ ಪಡೆಗಳು ಕಾರ್ಯೋನ್ಮುಖವಾಗಿವೆ. ಇನ್ನೂ ಕೆಲವೇ ದಿನಗಳಲ್ಲಿ ನಿಮ್ಮ ಕಣ್ಣೀರಿಗೆ ನ್ಯಾಯ ಒದಗಿಸಲಾಗುವುದು" ಎಂದು ಅಮಿತ್ ಶಾ ಸಂತ್ರಸ್ತರಿಗೆ ಭರವಸೆ ನೀಡಿದರು.
#WATCH | Srinagar | Union Home Minister Amit Shah and J&K LG Manoj Sinha meet the families of Pahalgam terror attack victims pic.twitter.com/vJ73eeRyVC
— ANI (@ANI) April 23, 2025
ಕೇಂದ್ರ ಸರ್ಕಾರ ನಿಮ್ಮ ದು:ಖದಲ್ಲಿ ಭಾಗಿಯಾಗಿದೆ. ನಿಮ್ಮ ನೋವು ನಮಗೆಲ್ಲರಿಗೂ ಅರ್ಥವಾಗುತ್ತದೆ. ನಿಮ್ಮವರನ್ನು ನಿಮ್ಮಿಂದ ದೂರ ಮಾಡಿದ ದುರುಳರಿಗೆ ತಕ್ಕ ಶಿಕ್ಷೆಯನ್ನು ನೀಡುತ್ತೇವೆ. ಅವರ ಹೆಡೆಮುರಿ ಕಟ್ಟಲು ನಾವು ಸಿದ್ಧರಾಗಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಅಮಿತ್ ಶಾ ಅವರ ಮಾತುಗಳನ್ನು ಕೇಳುತ್ತಿದ್ದಂತೆ ಸಂತ್ರಸ್ತರು ಕಣ್ಣೀರು ಹಾಕಿದ್ದಾರೆ. ನಮ್ಮವರ ಸಾವಿಗೆ ದಯವಿಟ್ಟು ನ್ಯಾಯ ಒದಗಿಸಿ ಎಂದು ಅವರು ಕೇಳಿಕೊಂಡಿದ್ದಾರೆ. ಶ್ರೀನಗರದಲ್ಲೇ ವಾಸ್ತವ್ಯ ಹೂಡಿರುವ ಅಮಿತ್ ಶಾ, ಭದ್ರತಾ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತಿದ್ದಾರೆ. "ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಉಗ್ರರನ್ನು ಸದೆಬಡಿಯುವುದು ಸದ್ಯದ ನಮ್ಮ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ದಾಳಿ ಹಿಂದಿನ ರೆಸಿಸ್ಟೆನ್ಸ್ ಫ್ರಂಟ್ ಎಂದರೇನು? ಮಾಸ್ಟರ್‌ಮೈಂಡ್ ಸೈಫುಲ್ಲಾ ಖಾಲಿದ್ ಯಾರು?
ಪಹಲ್ಗಾಮ್ ದಾಳಿ ನಡೆದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಪ್ರವಾಸದಲ್ಲಿದ್ದರು. ಮೋದಿ ತಮ್ಮ ಅಧಿಕೃತ ಪ್ರವಾಸವನ್ನು ಮೊಟಕುಗೊಳಿಸಿ ನಿನ್ನೆ ರಾತ್ರಿಯೇ ಭಾರತಕ್ಕೆ ಮರಳಿದ್ದಾರೆ. ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಉಗ್ರರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.