CM Siddaramaiah: ವಿಧಾನಸಭಾ ಚುನಾವಣಾ ಅಕ್ರಮ ಆರೋಪ : ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್ ನೋಟಿಸ್
Notice to CM Siddaramaiah: ಚುನಾವಣಾ ಪ್ರಚಾರ ವೇಳೆ ಗ್ಯಾರಂಟಿಗಳನ್ನು ಘೋಷಿಸುವುದು ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಇದು ಆಮಿಷವಾಗಿದ್ದು, ಈ ರೀತಿ ಪ್ರಚಾರ ಮಾಡುವುದು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (4)ರ ಪ್ರಕಾರವೂ ಒಪ್ಪತಕ್ಕದ್ದಲ್ಲ ಎಂದು ಮೈಸೂರಿನ ವರುಣ ಹೋಬಳಿಯ ಕೂಡನಹಳ್ಳಿ ಗ್ರಾಮದ ಕೆ.ಎಂ. ಶಂಕರ್ ದೂರಿದ್ದರು. ಇವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಸಿಎಂ ಸಿದ್ದರಾಮಯ್ಯ -
ನವದೆಹಲಿ, ಡಿ. 08: ವಿಧಾನಸಭೆ ಚುನಾವಣಾ (Assembly Election) ಅಕ್ರಮ ಆರೋಪ ಸಂಬಂಧ ಕರ್ನಾಟಕ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಸುಪ್ರೀಂ ಕೋರ್ಟ್ (Supreme Court) ಇಂದು ನೋಟಿಸ್ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಗೆಲುವನ್ನು ಪ್ರಶ್ನಿಸಿ ಕೆ. ಶಂಕರ್ ಎನ್ನುವವರು ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ವಿಚಾರಣೆ ನಡೆಸಿರುವ ನ್ಯಾ. ವಿಕ್ರಮನಾಥ್ ನೇತೃತ್ವದ ದ್ವಿ ಸದಸ್ಯ ಪೀಠ, ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ.
ಯಾವುದೀ ಪ್ರಕರಣ?
2023ರ ಚುನಾವಣೆಯಲ್ಲಿ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಆಮಿಷಗಳ ಮೂಲಕ ಮತದಾರರನ್ನು ತಮ್ಮೆಡೆಗೆ ಸೆಳೆಯುವುದು ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಮೈಸೂರಿನ ವರುಣ ಹೋಬಳಿಯ ಕೂಡನಹಳ್ಳಿ ಗ್ರಾಮದ ಕೆ.ಎಂ. ಶಂಕರ್ ಆಗ್ರಹಿಸಿದ್ದರು. ಇದೇ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲು ಕೂಡ ಏರಿದ್ದರು.
ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (1) ಮತ್ತು ಸೆಕ್ಷನ್ 123 (2) ಪ್ರಕಾರ, ಚುನಾವಣಾ ಪ್ರಚಾರ ವೇಳೆ ಗ್ಯಾರಂಟಿಗಳನ್ನು ಘೋಷಿಸುವುದು ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಇದು ಆಮಿಷವಾಗಿದ್ದು, ಈ ರೀತಿ ಪ್ರಚಾರ ಮಾಡುವುದು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (4)ರ ಪ್ರಕಾರವೂ ಒಪ್ಪತಕ್ಕದ್ದಲ್ಲ. ಜೊತೆಗೆ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯನವರಿಗೆ ಗೊತ್ತಿತ್ತು. ಗ್ಯಾರಂಟಿ ಕಾರ್ಡಿನ ಮೇಲೆ ಸ್ವತಃ ಅವರೇ ಸಹಿ ಮಾಡಿದ್ದಾರೆ. ಹೀಗಾಗಿ ಮತದಾರರಿಗೆ ಆಮಿಷ ನೀಡಿ ತಮಗೆ ಮತ ಚಲಾಯಿಸುವಂತೆ ನೋಡಿಕೊಳ್ಳಲಾಗಿದೆ ಎಂದು ಕೆ.ಎಂ. ಶಂಕರ್ ಹೇಳಿದ್ದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಆಪ್ತನಿಗೆ ದೆಹಲಿ ಪೊಲೀಸ್ ನೋಟಿಸ್
ಆದರೆ ಸಿದ್ದರಾಮಯ್ಯ ಅವರ ಪರವಾಗಿ ವಾದಿಸಿಸದ್ದ ಹಿರಿಯ ವಕೀಲ ರವಿವರ್ಮ ಕುಮಾರ್, ಶಂಕರ್ ಅವರ ಆರೋಪಗಳಿಗೆ ಕೌಂಟರ್ ಕೊಟ್ಟಿದ್ದರು. ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳಿಂದ ಆಶ್ವಾಸನೆಗಳನ್ನು ನೀಡುವುದಕ್ಕೆ ಅವಕಾಶವಿದೆ ಎಂದು ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಶಂಕರ್ ಅವರ ಅರ್ಜಿ ವಜಾಗೊಳಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.