ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಟ್ಟ ಹೊಗೆ, ಧಗಧಗಿಸಿದ ಬೆಂಕಿ: ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಅಜಿತ್‌ ಪವಾರ್‌ ಇದ್ದ ವಿಮಾನ ಪತನ; ಎಕ್ಸ್‌ಕ್ಲೂಸಿವ್ ವಿಡಿಯೊ ಇಲ್ಲಿದೆ

Viral Video: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಬುಧವಾರ ನಡೆದ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ದುರಂತದಲ್ಲಿ ಅಜಿತ್ ಪವಾರ್‌ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಸದ್ಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ದುರಂತದ ಭೀಕರ ವಿಡಿಯೊ

ವಿಮಾನ ದುರಂತ -

Profile
Pushpa Kumari Jan 28, 2026 1:53 PM

ಮುಂಬೈ, ಜ. 28:ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar Plane Crash) ಬುಧವಾರ (ಜನವರಿ 28) ನಡೆದ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ರ್‍ಯಾಲಿಗಳಲ್ಲಿ ಭಾಗವಹಿಸಲು ಅಜಿತ್ ಪವಾರ್ ಮುಂಬೈಯಿಂದ ಬಾರಾಮತಿಗೆ ಪ್ರಯಾಣ ಬೆಳೆಸಿದ್ದರು. ಲ್ಯಾಂಡಿಂಗ್‌ ವೇಳೆ ತಾಂತ್ರಿಕ ದೋಷದಿಂದ ವಿಮಾನ ಪತ್ನವಾಗಿದ್ದು, ಈ ದುರಂತದಲ್ಲಿ ಅಜಿತ್ ಪವಾರ್‌ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಸದ್ಯ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 8.45ರ ಸುಮಾರಿಗೆ ಈ ಅಪಘಾತ ಉಂಟಾಗಿದೆ. ವಿಮಾನವು ರನ್‌ವೇ ಮೇಲೆ ಇಳಿಯುವ ಎರಡನೇ ಯತ್ನದಲ್ಲಿದ್ದಾಗ ಹಠಾತ್ತನೆ ದಿಕ್ಕು ತಪ್ಪಿ ರನ್‌ವೇಯಿಂದ ಪಕ್ಕಕ್ಕೆ ಸರಿದು ನೆಲಕ್ಕೆ ಅಪ್ಪಳಿಸಿದೆ. ಅಪ್ಪಳಿಸಿದ ತಕ್ಷಣ ವಿಮಾನ ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ವಿಮಾನ ನಿಲ್ದಾಣದ ಮ್ಯಾನೇಜರ್ ಶಿವಾಜಿ ತಾವರೆ ತಿಳಿಸಿದಂತೆ ಲ್ಯಾಂಡಿಂಗ್ ಸಮಯದಲ್ಲಿ ಈ ಅವಘಡ ನಡೆದಿದೆ.

ವಿಡಿಯೊ ನೋಡಿ:



ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಅವಶೇಷಗಳಿಂದ ದಟ್ಟವಾದ ಕಪ್ಪು ಹೊಗೆ ಚಿಮ್ಮುತ್ತಿರುವುದು ಕಂಡು ಬಂದಿದೆ. ವಿಮಾನದ ಅವಶೇಷಗಳು ಸುಟ್ಟು ಕರಕಲಾಗಿದ್ದು, ಎಎನ್‌ಐ (ANI) ಸುದ್ದಿಸಂಸ್ಥೆ ಹಂಚಿಕೊಂಡಿರುವ ವಿಡಿಯೊದಲ್ಲಿ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ದೃಶ್ಯ ಸೆರೆಯಾಗಿದೆ. ವಿಮಾನವು ರನ್‌ವೇಯ ಬದಿಯಲ್ಲಿ ಹೋಗಿ ಅಪಘಾತಕ್ಕೀಡಾಯಿತು. ಅಪಘಾತಕ್ಕೀಡಾದ ಲಿಯರ್‌ಜೆಟ್ 45 ನೋಂದಣಿ ಸಂಖ್ಯೆ VT-SSK ವಿಮಾನವು ದೆಹಲಿ ಮೂಲದ 'ವಿಎಸ್‌ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಗೆ ಸೇರಿದ್ದು ಎಂದು ತಿಳಿದು ಬಂದಿದೆ.

ವಿಮಾನ ಪತನದಲ್ಲಿ ಸಾವನ್ನಪ್ಪಿದ ಅಜಿತ್ ಪವಾರ್ ಆಸ್ತಿ ಎಷ್ಟು ಕೋಟಿ?

ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, "ಮಹಾರಾಷ್ಟ್ರದ ಹಿರಿಯ ನಾಯಕ ಅಜಿತ್ ಪವಾರ್ ಅವರ ನಿಧನದ ವಿಚಾರ ಕೇಳಿ ದುಃಖವಾಗಿದೆ. ಮೂರೂವರೆ ದಶಕಗಳಿಂದ ಅವರು ಸಮಾಜದ ಏಳಿಗೆಗಾಗಿ ದುಡಿದಿದ್ದಾರೆ. ಅವರ ನಿಧನ ಎನ್‌ಡಿಎ ಕುಟುಂಬಕ್ಕೆ ಮತ್ತು ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟ" ಎಂದು ಹೇಳಿದ್ದಾರೆ.