ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಕ್ತ ಕಾಶ್ಮೀರ ಚಿತ್ರದಲ್ಲಿ 18 ನಿಮಿಷಗಳ‌ ಸ್ಪೆಷಲ್ ಸಾಂಗ್? ಒಂದೇ ಹಾಡಿನಲ್ಲಿ ವಿಷ್ಣು, ಅಂಬಿ, ಶಿವಣ್ಣ, ಅಪ್ಪು, ಉಪ್ಪಿ, ದರ್ಶನ್‌ ಡ್ಯಾನ್ಸ್‌!

ರಕ್ತ ಕಾಶ್ಮೀರ ಸಿನಿಮಾವು ಸುಮಾರು 14 ವರ್ಷಗಳ ವಿಳಂಬದ ನಂತರ ಜನವರಿ 30ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಮ್ಯಾ ಮುಖ್ಯ ಪಾತ್ರಗಳಲ್ಲಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಯೆಂದರೆ 18 ನಿಮಿಷಗಳ ವಿಶೇಷ ಹಾಡು, ಇದರಲ್ಲಿ ವಿಷ್ಣುವರ್ಧನ್, ಅಂಬರೀಶ್, ಪುನೀತ್ ಮತ್ತು ದರ್ಶನ್ ಸೇರಿದಂತೆ 15 ಮಂದಿ ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ.

ರಕ್ತ ಕಾಶ್ಮೀರದಲ್ಲಿ 18 ನಿಮಿಷಗಳ ಹಾಡು; ಒಂದೇ ಸಾಂಗ್‌ನಲ್ಲಿ ದಿಗ್ಗಜರ ದರ್ಶನ

-

Avinash GR
Avinash GR Jan 28, 2026 3:29 PM

ಹಲವು ವರ್ಷಗಳ ವಿಳಂಬದ ನಂತರ ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಮ್ಯಾ ನಟನೆಯ 'ರಕ್ತ ಕಾಶ್ಮೀರ' ಸಿನಿಮಾವು ಈ ವಾರ (ಜ.30) ಕರ್ನಾಟಕದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಸುಮಾರು 14 ವರ್ಷಗಳ ಹಿಂದೆಯೇ ಚಿತ್ರೀಕರಣಗೊಂಡಿದ್ದ ಈ ಚಿತ್ರ, ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಗಮನ ಸೆಳೆಯುತ್ತಿದೆ. ಇದರ ಕಥಾವಸ್ತು ಮತ್ತು ನಿರೂಪಣೆ ಇಂದಿನ ಪ್ರೇಕ್ಷಕರಿಗೆ ಇಷ್ಟವಾಗಲಿದೆಯೇ ಅಥವಾ ಪ್ರಸ್ತುತ ಸನ್ನಿವೇಶಕ್ಕೆ ಹೊಂದಿಕೆಯಾಗಲಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

15 ಸ್ಟಾರ್‌ ಕಲಾವಿದರ ನಟನೆ

ವರದಿಗಳ ಪ್ರಕಾರ, ʻರಕ್ತ ಕಾಶ್ಮೀರʼ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ 18 ನಿಮಿಷಗಳ ವಿಶೇಷ ಹಾಡು ಕೂಡ ಒಂದು ಎನ್ನಲಾಗಿದೆ. ಹೌದು, ಈ ಸ್ಪೆಷಲ್‌ ಸಾಂಗ್‌ನಲ್ಲಿ ಡಾ. ವಿಷ್ಣುವರ್ಧನ್, ಡಾ. ಅಂಬರೀಶ್, ಡಾ. ಪುನೀತ್ ರಾಜ್‌ಕುಮಾರ್, ಡಾ. ಶಿವರಾಜ್‌ಕುಮಾರ್, ರಮೇಶ್‌ ಅರವಿಂದ್‌, ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ 15 ದಿಗ್ಗಜರು ಒಂದೇ ಕಡೆ ಕಾಣಿಸಿಕೊಂಡಿದ್ದಾರೆ.

Naveen Sagar Column: ಇದು ಅಣ್ಣಾವ್ರು ಹಾಡಿದ್ದ ಪ್ರೇಮ ಕಾಶ್ಮೀರವಲ್ಲ...ರಕ್ತ ಕಾಶ್ಮೀರ!

ಸಿಂಗ್ ಬಾಬು ಅವರ ಬಹುನಿರೀಕ್ಷಿತ ಸಿನಿಮಾ

ರಾಜೇಂದ್ರ ಸಿಂಗ್ ಬಾಬು ಅವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದು, ತಮ್ಮ ವೃತ್ತಿಜೀವನದಲ್ಲಿ ಹಲವಾರು ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಂಡಿಎಂ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಮ್ಯಾ ಮುಖ್ಯ ಭೂಮಿಕೆಯಲ್ಲಿದ್ದು, ಮಾರ್ಸ್ ಸುರೇಶ್ ಅವರು ರಾಜ್ಯಾದ್ಯಂತ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರಮಂದಿರಕ್ಕಾಗಿಯೇ ಮಾಡಿರುವ ಸಿನಿಮಾ ಇದು

"ದೀರ್ಘ ವಿಳಂಬವಾಗಿದ್ದರೂ ಚಿತ್ರದ ಮೇಲಿರುವ ನನ್ನ ನಂಬಿಕೆ ಕಡಿಮೆಯಾಗಿಲ್ಲ. 'ರಕ್ತ ಕಾಶ್ಮೀರ' ಚಿತ್ರವನ್ನು ಚಿತ್ರಮಂದಿರದ ಅನುಭವಕ್ಕಾಗಿಯೇ ರೂಪಿಸಲಾಗಿದೆ. ಬೃಹತ್ ದೃಶ್ಯ ವೈಭವ, ನೈಜ ಲೊಕೇಶನ್‌ಗಳು ಮತ್ತು ಭಾವನಾತ್ಮಕ ಕಥೆಯನ್ನು ಇದು ಹೊಂದಿದ್ದು, ಟಿವಿ ಅಥವಾ ಡಿಜಿಟಲ್ (ಒಟಿಟಿ) ಬಿಡುಗಡೆಗಾಗಿ ಇದನ್ನು ಮಾಡಿರಲಿಲ್ಲ" ಎಂದು ರಾಜೇಂದ್ರ ಸಿಂಗ್ ಬಾಬು ಅವರು ಸ್ಪಷ್ಟಪಡಿಸಿದ್ದಾರೆ.

Raktha Kashmira Movie: ಉಪೇಂದ್ರ-ರಮ್ಯಾ ಕಾಂಬಿನೇಷನ್‌ನಲ್ಲಿ ಶೀಘ್ರವೇ ತೆರೆಗೆ ಬರಲಿದೆ ‘ರಕ್ತ ಕಾಶ್ಮೀರ’

ಕಾಶ್ಮೀರದಲ್ಲಿ ಒಂದು ತಿಂಗಳು ಶೂಟಿಂಗ್‌

ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಘಟನೆಗಳು ಮತ್ತು ಬೆಂಗಳೂರು ಸೇರಿದಂತೆ ಭಾರತದ ನಗರಗಳಲ್ಲಿ ನಡೆದ ದಾಳಿಗಳಿಂದ ಸ್ಫೂರ್ತಿ ಪಡೆದು ಈ ಕಥೆಯನ್ನು ಹೆಣೆಯಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ನೈಜತೆಗಾಗಿ ಚಿತ್ರತಂಡ ಕಾಶ್ಮೀರದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಿದ್ದು, ಇದೊಂದು ದೇಶಭಕ್ತಿಯುಳ್ಳ ಕೌಟುಂಬಿಕ ಚಿತ್ರವಂತೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ರಾಜೇಂದ್ರ ಸಿಂಗ್ ಬಾಬು ಅವರೇ ಬರೆದಿದ್ದು, ಎಂ. ಎಸ್. ರಮೇಶ್ ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಮುಖೇಶ್ ರಿಷಿ, ದೊಡ್ಡಣ್ಣ, ಓಂ ಪ್ರಕಾಶ್ ರಾವ್, ಅನಿಲ್ ಮತ್ತು ಕುರಿ ಪ್ರತಾಪ್ ಕೂಡ ಇದ್ದಾರೆ.