Swami Nithyananda: ʼಕೈಲಾಸಾಧಿಪತಿʼ ನಿತ್ಯಾನಂದನ ಮತ್ತೊಂದು ಕಿತಾಪತಿ; ಬೊಲಿವಿಯಾದಲ್ಲಿ ಸಾವಿರಾರು ಎಕ್ರೆ ಭೂಮಿ ಕಬಳಿಸಲು ಮುಂದಾದ ಸ್ವಯಂ ಘೋಷಿತ ದೇವ ಮಾನವ
Land Trafficking: ಸ್ವಯಂಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎನ್ನುವ ದೇಶ ಸ್ಥಾಪಿಸಿದ್ದಾಗಿ ಹೇಳಿಕೊಳ್ಳುವ ಈತ ಭೂ ಕಬಳಿಕೆಯ ಆರೋಪದಲ್ಲಿ ಸಿಲುಕಿದ್ದಾನೆ. ಅದೇನು ಎನ್ನುವ ವಿವರ ಇಲ್ಲಿದೆ.

ಸ್ವಾಮಿ ನಿತ್ಯಾನಂದ.

ಹೊಸದಿಲ್ಲಿ: ಜಗತ್ತನ್ನು ಬೆಳಗುವ ಸೂರ್ಯನನ್ನೇ ನಿಯಂತ್ರಿಸಬಲ್ಲೆ ಎಂದು ಹೇಳಿಕೊಂಡಿದ್ದ ಸ್ವಯಂಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದ (Swami Nithyananda) ಇದೀಗ ಮತ್ತೆ ಸುದ್ದಿಯಲ್ಲಿದ್ದಾನೆ. ಬಿಡದಿಯಲ್ಲಿ ಆಶ್ರಮ ಸ್ಥಾಪಿಸಿ ಸಾಕಷ್ಟು ವಿವಾದ ಹುಟ್ಟುಹಾಕಿದ್ದ ನಿತ್ಯಾನಂದ ಬಳಿಕ ಭಾರತ ಬಿಟ್ಟು ಪರಾರಿಯಾಗಿದ್ದ. ಅದಾದ ನಂತರ ಹಿಂದೂಗಳಿಗಾಗಿ ದೇಶವನ್ನೇ ಸ್ಥಾಪಿಸಿದ್ದಾಗಿ ಹೇಳಿಕೊಂಡಿದ್ದ. ಇದಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (United States of Kailasa) ಎನ್ನುವ ಹೆಸರನ್ನೂ ಇಟ್ಟಿದ್ದ. ಮಾತ್ರವಲ್ಲ ವಿಶ್ವಸಂಸ್ಥೆಯ ಸಭೆಗೆ ತನ್ನ ದೇಶದ ಪ್ರತಿನಿಧಿಯನ್ನೂ ಕಳುಹಿಸಿದ್ದ. ಹೀಗೆ ಆಗಾಗ ಸದ್ದು ಮಾಡುತ್ತಿದ್ದ ನಿತ್ಯಾನಂದ ಇದೀಗ ಮತ್ತೊಮ್ಮೆ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾನೆ. ಸಾವಿರಾರು ಎಕ್ರೆ ಭೂಮಿ ಕಬಳಿಸುವ ಹುನ್ನಾರ ನಡೆಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. ಈ ಕುರಿತಾದ ವಿವರ ಇಲ್ಲಿದೆ.
ಕೆಲವು ದಿನಗಳ ಹಿಂದೆ ನಿತ್ಯಾನಂದ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅದಾದ ಬಳಿಕ ಆತನ ಸಹವರ್ತಿಗಳು ಸ್ಪಷ್ಟನೆ ನೀಡಿ ನಿತ್ಯಾನಂದ ಬದುಕಿರುವುದಾಗಿ ತಿಳಿಸಿದ್ದರು. ಆ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದರು. ಇದರೊಂದಿಗೆ ಕೈಲಾಸದ ಪ್ರತಿನಿಧಿಗಳು ದಕ್ಷಿಣ ಅಮೆರಿಕದ ದೇಶ ಬೊಲಿವಿಯಾ (Bolivia)ದಲ್ಲಿ 1,000 ವರ್ಷಗಳ ಗುತ್ತಿಗೆಗೆ ಸಹಿ ಹಾಕಿ ಭೂಸ್ವಾಧೀನ ಮಾಡಲು ಯತ್ನಿಸಿದ್ದರೆಂದು ವರದಿ ಸಾಕಷ್ಟು ವಿವಾದ ಸೃಷ್ಟಿಸಿದೆ.
ಈ ಸುದ್ದಿಯನ್ನೂ ಓದಿ: Nithyananda Swami: ಬಿಡದಿಯ ನಿತ್ಯಾನಂದ ಸ್ವಾಮಿ ನಿಧನ? ಭಾರೀ ವೈರಲಾಗ್ತಿದೆ ಈ ಸುದ್ದಿ
ಈ ವಿವಾದದ ಬಗ್ಗೆ ಗಮನ ಹರಿಸುವ ಮುನ್ನ ನಿತ್ಯಾನಂದ ಸ್ಥಾಪಿಸಿದ್ದಾನೆ ಎನ್ನಲಾದ ದೇಶ ಕೈಲಾಸದ ಹಿನ್ನೆಲೆ ನೋಡೋಣ:
ಹಿಂದೂ ರಾಷ್ಟ್ರ
2019ರಲ್ಲಿ ದಕ್ಷಿಣ ಅಮೆರಿಕಾದ ಈಕ್ವೆಡಾರ್‌ನ ದ್ವೀಪದಲ್ಲಿ ನಿತ್ಯಾನಂದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸವನ್ನು ಸ್ಥಾಪಿಸಿದ. ಜತೆಗೆ ಅದನ್ನು 'ವಿಶ್ವದ ಶ್ರೇಷ್ಠ ಮತ್ತು ಶುದ್ಧ ಹಿಂದೂ ರಾಷ್ಟ್ರ' ಎಂದು ಘೋಷಿಸಿದ. ತನ್ನ ದೇಶ ತನ್ನದೇ ಆದ ಧ್ವಜ, ಸಂವಿಧಾನ, ಆರ್ಥಿಕ ವ್ಯವಸ್ಥೆ, ಪಾಸ್‌ಪೋರ್ಟ್ ಮತ್ತು ಲಾಂಛನವನ್ನು ಹೊಂದಿದೆ ಎಂದು ಪ್ರಕಟಿಸಿದ. ಈ ದೇಶದಲ್ಲಿ ಜನಾಂಗ, ಲಿಂಗ, ಪಂಥ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಪ್ರಪಂಚದ ಎಲ್ಲ ಹಿಂದೂಗಳಿಗೆ ಪ್ರವೇಶವಿದೆ. ಕಿರುಕುಳಕ್ಕೊಳಗಾದ ಹಿಂದೂಗಳಿಗೆ ಇದು ಸುರಕ್ಷಿತ ತಾಣ. ಇಲ್ಲಿ ಅವರು ಶಾಂತಿಯುತವಾಗಿ ಬದುಕಬಹುದು ಎಂದು ಹೇಳಿದ. ಅದಾಗ್ಯೂ ವಿಶ್ವಸಂಸ್ಥೆ ಕೈಲಾಸಕ್ಕೆ ಮಾನ್ಯತೆ ನೀಡಿಲ್ಲ.
ಏನಿದು ಭೂ ಕಬಳಿಕೆ ವಿವಾದ?
‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂಬ ದೇಶದ ಪ್ರತಿನಿಧಿಗಳು ಎಂದು ಪರಿಚಯಿಸಿಕೊಂಡ ಸುಮಾರು 20 ಮಂದಿ ಬೊಲಿವಿಯಾದಲ್ಲಿ 1,000 ವರ್ಷಗಳ ಗುತ್ತಿಗೆಗೆ ಸಹಿ ಹಾಕಿ ಭೂ ಸ್ವಾಧೀನ ಮಾಡಲು ಯತ್ನಿಸಿದ್ದರೆಂದು ವರದಿಯೊಂದು ತಿಳಿಸಿದೆ. ಬೊಲಿವಿಯನ್ ಪತ್ರಿಕೆ ʼಎಲ್ ಡೆಬರ್ʼ ನಡೆಸಿದ ತನಿಖೆಯು, ಬೌರೆ ಸಮುದಾಯ ಸೇರಿದಂತೆ ಸ್ಥಳೀಯ ಗುಂಪುಗಳಿಂದ ವ್ಯಾಪಕವಾದ ಭೂ ಗುತ್ತಿಗೆಗಳನ್ನು ಪಡೆಯಲು ನಿತ್ಯಾನಂದನ ಅನುಯಾಯಿಗಳು ಮಾಡಿದ ಪ್ರಯತ್ನಗಳನ್ನು ವಿವರಿಸಿದ ಬಳಿಕ ಈ ವಿಚಾರ ಬರಳಕಿಗೆ ಬಂದಿದೆ. ಬೌರೆ ನಾಯಕ ಪೆಡ್ರೊ ಗುವಾಸಿಕೊ ಈ ಬಗ್ಗೆ ಮಾತನಾಡಿ, 2024ರಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನ ವೇಳೆ ಸಹಾಯ ಮಾಡುವ ನೆಪದಲ್ಲಿ ಕೈಲಾಸದ ಪ್ರತಿನಿಧಿಗಳು ಹೇಗೆ ತಮ್ಮನ್ನು ಯಾಮಾರಿಸಿದರು ಎಂದು ವಿವರಿಸಿದ್ದಾರೆ.
ಏನಿದು 1,000 ವರ್ಷಗಳ ಗುತ್ತಿಗೆ ಒಪ್ಪಂದ?
1,000 ವರ್ಷಗಳ ಗುತ್ತಿಗೆ ಒಪ್ಪಂದವಾಗಿ ವಿಕಸನಗೊಂಡವು ಎಂಬುದನ್ನು ಅವರು ತಿಳಿಸಿದ್ದಾರೆ. ಹೊಸದಿಲ್ಲಿಯ ಸುಮಾರು 3 ಪಟ್ಟು ಗಾತ್ರದ ಪ್ರದೇಶವನ್ನು ಗುತ್ತಿಗೆ ನೀಡುವಂತೆ ಕೈಲಾಸದ ಪ್ರತಿನಿಧಿಗಳು ಪಟ್ಟು ಹಿಡಿದಿದ್ದರು. ಇದಕ್ಕಾಗಿ ವಾರ್ಷಿಕ 200,000 ಡಾಲರ್ ನೀಡುವುದಾಗಿ ಒಪ್ಪಂದವಾಗಿತ್ತು. ಆರಂಭದಲ್ಲಿ ಸ್ಥಳೀಯರಿಗೆ ಇದನ್ನು 25 ವರ್ಷಗಳ ಗುತ್ತಿಗೆ ಎನ್ನಲಾಗಿತ್ತು. ಆದರೆ ವಾಸ್ತವವಾಗಿ ಈ ಗುತ್ತಿಗೆ 1,000 ವರ್ಷಗಳವರೆಗೆ ಜಾರಿಯಲ್ಲಿರುತ್ತೆ ಎಂಬುದನ್ನು ತಿಳಿದ ನಂತರ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ ಎಂದು ಗುವಾಸಿಕೊ ಹೇಳಿದ್ದಾರೆ. ಈ ಒಪ್ಪಂದವು ನೈಸರ್ಗಿಕ ಸಂಪತ್ತುಗಳ ಹಕ್ಕು ಮತ್ತು ವಾಯುಪ್ರದೇಶದ ಹಕ್ಕನ್ನು ಒಳಗೊಂಡಿದ್ದರೂ, ಅದರ ಪೂರ್ಣ ವಿವರವನ್ನು ಸ್ಥಳೀಯರಿಗೆ ತಿಳಿಸಿರಲಿಲ್ಲವಂತೆ. "ನಾವು ಅವರ ಮಾತನ್ನು ಕೇಳಿ ತಪ್ಪು ಮಾಡಿದೆವು" ಎಂದು ಅವರು ಪ್ರಾಯಶ್ವಿತದ ಮಾತುಗಳನ್ನು ಆಡಿದ್ದಾರೆ.
ಬೊಲಿವಿಯಾ ಸರ್ಕಾರ ಹೇಳಿದ್ದೇನು?
ಇದೀಗ ಬೊಲಿವಿಯಾ ಸರ್ಕಾರ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ'ದೊಂದಿಗೆ ಯಾವುದೇ ಅಧಿಕೃತ ಸಂಬಂಧವಿಲ್ಲವೆಂದು ಘೋಷಿಸಿದೆ. 'ದಿ ನ್ಯೂಯಾರ್ಕ್ ಟೈಮ್ಸ್' ವರದಿಯ ಪ್ರಕಾರ, ಈ ಗುತ್ತಿಗೆ ಅಮಾನ್ಯವೆಂದು ಪರಿಗಣಿಸಲಾಗಿದ್ದು, ತಕ್ಷಣವೇ ಕೈಲಾಸ ಪ್ರತಿನಿಧಿಗಳನ್ನು ಅವರವರಿಗೆ ಸಂಬಂಧಿಸಿದ ದೇಶಗಳಾದ ಭಾರತ, ಅಮೆರಿಕ, ಸ್ವೀಡನ್ ಮತ್ತು ಚೀನಾಗಳಿಗೆ ಗಡೀಪಾರು ಮಾಡಲಾಗಿದೆ. ಒಟ್ಟಿನಲ್ಲಿ ಮತ್ತೊಮ್ಮೆ ನಿತ್ಯಾನಂದ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದಾನೆ.
ಯಾರು ಈ ನಿತ್ಯಾನಂದ?
1978ರ ಜ. 1ರಂದು ತಮಿಳುನಾಡಿನ ತಿರುವಣ್ಣಮಲೈಯಲ್ಲಿ ಜನಿಸಿದ ನಿತ್ಯಾನಂದನ ಮೂಲ ಹೆಸರು ಅರುಣಾಚಲಮ್ ರಾಜಶೇಖರನ್. ಬಾಲ್ಯದಲ್ಲೇ ಆಧ್ಯಾತ್ಮಿಕದತ್ತ ಆಕರ್ಷಿತನಾಗಿದ್ದ ಈತ ಧಾರ್ಮಿಕ ನಾಯಕನಾಗಿ ಬೆಳೆದ. ಬೆಂಗಳೂರಿನ ಬಿಡದಿ ಸೇರಿದಂತೆ ದೇಶಾದ್ಯಂತ ವಿವಿಧ ಕಡೆಗಳಲ್ಲಿ ಆಶ್ರಮ ಸ್ಥಾಪಿಸಿದ. ಅಲ್ಲದೆ ಸುಮಾರು 47 ರಾಷ್ಟ್ರಗಳಲ್ಲಿ ಆಶ್ರಮ ವಿಸ್ತರಿಸಿದ. ಬೆಂಗಳೂರಿನಲ್ಲಿ ಆತನ ವಿರುದ್ದ ದೂರು ದಾಖಲಾದ ಹಿನ್ನೆಲೆಯಲ್ಲಿ 2010ರಲ್ಲಿ ಹಿಮಾಚಲ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಬಳಿಕ ಜಾಮೀನು ಲಭಿಸಿತ್ತು. ಅದಾದ ಬಳಿಕ ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ. ಹೀಗಾಗಿ ತಲೆಮರೆಸಿಕೊಂಡಿದ್ದಾನೆ.