ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nithyananda Swami: ಬಿಡದಿಯ ನಿತ್ಯಾನಂದ ಸ್ವಾಮಿ ನಿಧನ? ಭಾರೀ ವೈರಲಾಗ್ತಿದೆ ಈ ಸುದ್ದಿ

ನಿತ್ಯಾನಂದ ಸ್ವಾಮಿ(Nithyananda Swami) ಜೀವಂತವಾಗಿದ್ದಾನೆ ಎಂಬ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಆತನ ಪ್ರತಿನಿಧಿಗಳು ಮಾರ್ಚ್ 30ರಂದು ಯುಗಾದಿ ಆಚರಣೆಯಲ್ಲಿ ನಿತ್ಯಾನಂದ ಭಾಗವಹಿಸಿರುವ ನೇರಪ್ರಸಾರದ ಲಿಂಕ್ ಅನ್ನು ಕೂಡ ಹೇಳಿಕೆಯಲ್ಲಿ ನೀಡಿದ್ದಾರೆ. ಎಸ್‌ಪಿಎಚ್ ಅನ್ನು ದೂಷಿಸಲು ಮತ್ತು ಮಾನಹಾನಿ ಮಾಡಲು ಈ ರೀತಿ ದುರುದ್ದೇಶಪೂರಿತ ಅಪಪ್ರಚಾರ ನಡೆಸುವುದನ್ನು ಕೈಲಾಸ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಿತ್ಯಾನಂದ ಸ್ವಾಮಿ ಸಾವಿನ ಸುದ್ದಿ ಫುಲ್‌ ವೈರಲ್‌

Profile Vidhya Iravathur Apr 2, 2025 1:46 PM

ನವದೆಹಲಿ: ಸ್ವಯಂಘೋಷಿತ ದೇವಮಾನವ ಬಿಡದಿ ನಿತ್ಯಾನಂದ ಸ್ವಾಮಿ(Nithyananda Swami) ವಿಧಿವಶರಾಗಿದ್ದಾನೆ ಎಂಬ ಸುದ್ದಿ ಕೆಲವು ದಿನಗಳಿಂದ ಭಾರೀ ವೈರಲ್‌ ಆಗುತ್ತಿದೆ. ಇದೀಗ ಈ ಬಗ್ಗೆ ಸ್ವತಃ ಕೈಲಾಸ ಪ್ರಕಟಣೆ ಹೊರಡಿಸುವ ಮೂಲಕ ಸ್ಪಷ್ಟನೆ ಕೊಟ್ಟಿದೆ. ನಿತ್ಯಾನಂದ ಸ್ವಾಮಿ ಸುರಕ್ಷಿತವಾಗಿದ್ದಾರೆ ಎಂಬ ಹೇಳಿಕೆಯನ್ನು ಕೈಲಾಸ ಬಿಡುಗಡೆ ಮಾಡಿದ್ದು ಈ ಮೂಲಕ ಆತನ ಸಾವಿನ ಸುದ್ದಿಯನ್ನು ತಳ್ಳಿಹಾಕಿದೆ. ಸ್ವಾಮಿ ನಿತ್ಯಾನಂದನ ಸಾವಿನ ಹೇಳಿಕೆಗಳ ಅನಂತರ ಈ ಸುದ್ದಿಯನ್ನು ನಿರಾಕರಿಸುವ ಹೇಳಿಕೆಯನ್ನು ನಿತ್ಯಾನಂದನ ಪ್ರತಿನಿಧಿಗಳು ಬಿಡುಗಡೆ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪಿ ನಿತ್ಯಾನಂದ ಭಾರತದಿಂದ ಪಲಾಯನ ಮಾಡಿದ ಅನಂತರ ತಾನೇ ಸ್ಥಾಪಿಸಿದ ಕಾಲ್ಪನಿಕ 'ರಾಷ್ಟ್ರ' ಕೈಲಾಸದಲ್ಲಿ ವಾಸವಾಗಿದ್ದಾನೆ ಎನ್ನಲಾಗಿದೆ. ನಿತ್ಯಾನಂದ ಜೀವಂತವಾಗಿದ್ದಾನೆ ಎಂಬ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಆತನ ಪ್ರತಿನಿಧಿಗಳು ಮಾರ್ಚ್ 30ರಂದು ಯುಗಾದಿ ಆಚರಣೆಯಲ್ಲಿ ನಿತ್ಯಾನಂದ ಭಾಗವಹಿಸಿರುವ ನೇರಪ್ರಸಾರದ ಲಿಂಕ್ ಅನ್ನು ಕೂಡ ಪತ್ರಿಕಾ ಹೇಳಿಕೆಯಲ್ಲಿ ನೀಡಿದ್ದಾರೆ.

ಮಾನಹಾನಿ ಮಾಡಲು ಈ ರೀತಿ ದುರುದ್ದೇಶಪೂರಿತ ಅಪಪ್ರಚಾರ ನಡೆಸುವುದನ್ನು ಕೈಲಾಸ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನಿತ್ಯಾನಂದ ಅವರ ಸೋದರಳಿಯ ಸುಂದರೇಶ್ವರ್ ಅವರು ನಿತ್ಯಾನಂದ ನಿಧನರಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ ಬಳಿಕ ನಿತ್ಯಾನಂದನ ಸಾವಿನ ವದಂತಿಗಳು ಹರಡಿದ್ದವು. ಭಾರತದಾದ್ಯಂತ ಹಲವಾರು ಆಶ್ರಮಗಳನ್ನು ನಡೆಸುತ್ತಿದ್ದ ನಿತ್ಯಾನಂದ, ಲೈಂಗಿಕ ದೌರ್ಜನ್ಯ, ದೌರ್ಜನ್ಯ ಮತ್ತು ಮಕ್ಕಳ ಅಪಹರಣ ಆರೋಪಗಳಿಂದಾಗಿ 2019ರಲ್ಲಿ ದೇಶದಿಂದ ಪಲಾಯನ ಮಾಡಿದ್ದನು. ಈ ಸಂದರ್ಭದಲ್ಲಿ ಗುಜರಾತ್ ಪೊಲೀಸರು ತಮ್ಮ ಆಶ್ರಮದಿಂದ ಮಗುವನ್ನು ಅಪಹರಿಸಿದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದರು.

ಬಳಿಕ ಆತ ಸ್ವಯಂ ಘೋಷಿತ 'ರಾಷ್ಟ್ರ' ವನ್ನು ರಚಿಸಿರುವುದಾಗಿ ಘೋಷಿಸಿದ್ದ. ಅದರ ಮಾನ್ಯತೆಯನ್ನು ಪ್ರಶ್ನಿಸಲಾಗಿದ್ದರೂ ಆತ ಈಕ್ವೆಡಾರ್ ಕರಾವಳಿಯ ಆಚೆಗಿನ ದ್ವೀಪದಲ್ಲಿ ವಾಸಿಸುತ್ತಿರಬಹುದು ಎನ್ನಲಾಗುತ್ತಿದೆ. ಬೊಲಿವಿಯಾದ ವಲಸೆ ಸಚಿವಾಲಯವು ಮಾರ್ಚ್ 25 ರಂದು ಕೈಲಾಸದ 20 ಸದಸ್ಯರನ್ನು ಗಡೀಪಾರು ಮಾಡಿದೆ ಎಂದು ಹೇಳಿದೆ. ಬೊಲಿವಿಯಾದಲ್ಲಿನ ಸ್ಥಳೀಯ ಸಮುದಾಯಕ್ಕೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲು ಸದಸ್ಯರು ಪ್ರಯತ್ನಿಸಿದ್ದಾರೆ ಎನ್ನುವ ಆರೋಪವಿದೆ.

ನಿತ್ಯಾನಂದನ ಪ್ರತಿನಿಧಿಗಳು ಬೊಲಿವಿಯಾಕ್ಕೆ ಪ್ರವಾಸಿಗರಾಗಿ ಬಂದಿದ್ದು, 2024ರ ನವೆಂಬರ್ ತಿಂಗಳಿನಿಂದ ಬೊಲಿವಿಯಾದಲ್ಲಿದ್ದರು. ಆದರೆ ಹೆಚ್ಚಿನವರು 2025ರ ಜನವರಿಯಲ್ಲಿ ಪ್ರವೇಶಿಸಿದರು ಎಂದು ಬೊಲಿವಿಯಾದ ವಲಸೆ ನಿರ್ದೇಶಕಿ ಕ್ಯಾಥರೀನ್ ಕಾಲ್ಡೆರಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.



2010 ರಲ್ಲಿ ಕರ್ನಾಟಕ ಸೆಷನ್ಸ್ ನ್ಯಾಯಾಲಯವು ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತು. ಆತನ ಮಾಜಿ ಚಾಲಕ ಲೆನಿನ್ ಸಲ್ಲಿಸಿದ ದೂರಿನ ಆಧಾರದ ಮೇಲೆ ನಿತ್ಯಾನಂದನನ್ನು ಬಂಧಿಸಿ ಅನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ 2020ರಲ್ಲಿ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ ಎಂದು ಲೆನಿನ್ ಅರ್ಜಿ ಸಲ್ಲಿಸಿದಾಗ ಜಾಮೀನು ರದ್ದುಗೊಂಡಿತು. ನಿತ್ಯಾನಂದ ಗುಜರಾತ್ ಆಶ್ರಮದಲ್ಲಿ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಆರೋಪಗಳೂ ಇವೆ. 2023 ರಲ್ಲಿ ನಿತ್ಯಾನಂದನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿರುವುದನ್ನು ಇಂಟರ್‌ಪೋಲ್ ನಿರಾಕರಿಸಿದೆ.

ಇದನ್ನೂ ಓದಿ: Norovirus: ಐಷಾರಾಮಿ ಹಡಗಿನಲ್ಲಿದ್ದ ನೂರಾರು ಜನರ ಪ್ರಾಣಕ್ಕೆ ಸಂಚಕಾರ- ಅಷ್ಟಕ್ಕೂ ಆಗಿದ್ದೇನು?

ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ನಿತ್ಯಾನಂದನ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ಇಂಟರ್‌ಪೋಲ್‌ನ ಜನರಲ್ ಸೆಕ್ರೆಟರಿಯೇಟ್ ನೋಟಿಸ್ ನೀಡಿದೆ ಎಂದು ಗುಜರಾತ್ ಪೊಲೀಸರು ಹೇಳಿದ್ದರು.