Earthquake: ಭೂಕಂಪನದ ಸಂದರ್ಭದಲ್ಲಿ ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳುವುದು ಹೇಗೆ?
ಭೂಕಂಪನವೆಂಬುದು ಇದ್ದಕ್ಕಿದ್ದಂತೆ ಉಂಟಾಗುವ ಒಂದು ನೈಸರ್ಗಿಕ ವಿಪತ್ತು, ಈ ವಿಪತ್ತಿನ ಸಂದರ್ಭದಲ್ಲಿ ನಾವಿರುವ ಸ್ಥಳದಲ್ಲೇ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಮತ್ತು ನಮ್ಮೊಂದಿಗಿರುವವರನ್ನೂ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದ್ರೆ ಭೂಮಿ ಕಂಪಿಸಿದಾಗ ನಾವೇನ್ಮಾಡ್ಬೇಕು..? ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಮಿ ನಡುಗಿದ (Earthquake) ಅನುಭವ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ (Richter scale) 4.0 ಮ್ಯಾಗ್ನಿಟ್ಯೂಡ್ (Magnitude) ತೀವ್ರತೆಯ ಕಂಪನ ದಾಖಲಾಗಿದ್ದು, ದೆಹಲಿ (Delhi) ಮಾತ್ರವಲ್ಲದೇ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಕಂಪನದ ಅನುಭವ ಉಂಟಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರ (National Centre for Seismology)ದ ಹೇಳಿಕೆ ಪ್ರಕಾರ ಈ ಭೂಕಂಪನದ ಕೇಂದ್ರ ಬಿಂದು ದೆಹಲಿಯಾಗಿತ್ತು. ದೇಶದಲ್ಲಿ ಭೂಕಂಪನದ ಮೇಲೆ ನಿಗಾವಹಿಸುವ ನೋಡಲ್ ಏಜೆನ್ಸಿಯಾಗಿ ಎನ್.ಸಿ.ಎಸ್. (NCS) ಭಾರತ ಸರಕಾರದ (Government of India) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. 5 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪದ ತೀವ್ರತೆ ಅನುಭವಕ್ಕೆ ಬಂದಿದೆ ಎಂದು ಎನ್.ಸಿ.ಎಸ್. ಹೇಳಿದೆ. ಭೂಕಂಪ ಎನ್ನುವುದು ಇದ್ದಕ್ಕಿದ್ದಂತೆ ಸಂಭವಿಸಬಹುದಾದ ಒಂದು ಪ್ರಾಕೃತಿಕ ಘಟನೆಯಾಗಿರುವ ಕಾರಣ, ಭೂಕಂಪಗಳು ಸಂಭವಿಸುವ ಸಂದರ್ಭದಲ್ಲಿ ನಾವು ತಕ್ಷಣಕ್ಕೆ ಏನು ಮಾಡಬೇಕೆಂಬುದನ್ನು ನಾವು ತಿಳಿದುಕೊಂಡಿರಬೇಕಾಗಿರುವುದು ಅತ್ಯವಶ್ಯಕ. ಈ ಕುರಿತಾದ ಮಾಹಿತಿ ಇಲ್ಲಿದೆ.
ಹಾಗಾದರೆ, ಭೂಕಂಪದ ಸಂದರ್ಭದಲ್ಲಿ ನಮ್ಮನ್ನು ನಾವು ಸುರಕ್ಷಿತರಾಗಿಸಿಕೊಳ್ಳುವುದು ಹೇಗೆಂಬುದನ್ನು ತಿಳಿದುಕೊಳ್ಳೊಣ ಬನ್ನಿ.
- ನೆಲದಲ್ಲಿ ಮಲಗಿಕೊಳ್ಳಿ, ಕವರ್ ಮಾಡಿಕೊಳ್ಳಿ ಮತ್ತು ಗಟ್ಟಿಯಾಗಿ ಹಿಡಿದುಕೊಳ್ಳಿ
ಭೂಮಿ ಕಂಪಿಸುವ ಅನುಭವ ನಿಮಗಾದ ಕೂಡಲೇ ತಕ್ಷಣವೇ ನೀವಿರುವ ಜಾಗದಲ್ಲೇ ನೆಲದ ಮೇಲೆ ಮೊಣಕಾಲೂರಿ ಅಥವಾ ಕೈಗಳನ್ನು ಊರಿ ಕುಳಿತುಕೊಳ್ಳಿ. ಫರ್ನಿಚರ್ ಗಳ ಅಡಿಯನ್ನು ಆಶ್ರಯಿಸಿ. ಭೂಮಿ ನಡುಗುವಿಕೆ ನಿಲ್ಲುವವರೆಗೆ ಅದೇ ಸ್ಥಿತಿಯಲ್ಲಿರಿ, ಮತ್ತು ಒಂದು ವೇಳೆ ನಡುಕದ ತೀವ್ರತೆಗೆ ಫರ್ನಿಚರ್ ಚಲಿಸಲಾರಂಭಿಸಿದರೆ ಅಲ್ಲಿಂದ ಈಚೆಗೆ ಬರಲು ಸಿದ್ಧರಾಗಿರಿ.
2. ಮನೆಯಲ್ಲಿರುವ ಸಂದರ್ಭದಲ್ಲಿ:
ಒಂದುವೇಳೆ ನೀವು ಮನೆಯ ಒಳಗಡೆ ಇರುವ ಸಂದರ್ಭದಲ್ಲಿ ಭೂಮಿ ಕಂಪಿಸಲಾರಂಭಿಸಿದರೆ, ನೀವಿರುವಲ್ಲೇ ನಿಂತುಕೊಂಡುಬಿಡಿ. ಭೂಮಿ ಕಂಪಿಸುವ ಅನುಭವವಾದಾಗ ಮನೆಯಿಂದ ಹೊರಗೆ ಓಡಿ ಹೋಗುವ ಪ್ರಯತ್ನ ಮಾಡದಿರಿ. ಹೀಗೆ ಮಾಡಿದಲ್ಲಿ ಕಟ್ಟಡದ ಅವಶೇಷಗಳು ನಿಮ್ಮ ಮೇಲೆ ಬಿದ್ದು ಸಾವು-ನೋವಿನ ಅಪಾಯಗಳುಂಟಾಗಬಹುದು. ಕಿಟಕಿ, ಗಾಜಿನ ವಸ್ತುಗಳು ಮತ್ತು ಭಾರವಾದ ವಸ್ತುಗಳಿಂದ ಈ ಸಂದರ್ಭದಲ್ಲಿ ದೂರವಿರಿ.
3. ಹೊರಗಡೆ ಇರುವ ಸಂದರ್ಭದಲ್ಲಿ:
ಭೂಮಿ ಕಂಪಿಸುವ ಸಂದರ್ಭದಲ್ಲಿ ಒಂದು ವೇಳೆ ನೀವು ಹೊರಗಡೆಯಿದ್ದರೆ, ಕಟ್ಟಡಗಳು, ಮರಗಳು, ಬೀದಿ ದೀಪಗಳು, ವಿದ್ಯುತ್ ಲೈನ್ ಗಳು ಹಾಗೂ ಇನ್ನಿತರ ರಚನೆಗಳಿಲ್ಲದ ಬಯಲು ಪ್ರದೇಶಕ್ಕೆ ಬಂದುಬಿಡಿ. ಭೂಮಿ ಕಂಪಿಸುವುದು ನಿಲ್ಲುವವರೆಗೆ ಆ ಬಯಲು ಪ್ರದೇಶದಲ್ಲಿ ನಿಲ್ಲಿ. ನಿಮ್ಮ ಸುತ್ತ ಅವಶೇಷಗಳು ಬೀಳದಂತೆ ಎಚ್ಚರಿಕೆಯಿಂದ ಗಮನಿಸುತ್ತಿರಿ.
ಇದನ್ನೂ ಓದಿ:Delhi Earthquake : "ಹಿಂದೆದೂ ಈ ರೀತಿ ಅನುಭವವಾಗಿರಲಿಲ್ಲ" ಭೂಕಂಪಕ್ಕೆ ಬೆಚ್ಚಿ ಬಿದ್ದ ದೆಹಲಿ ಜನ
4. ಒಂದು ವೇಳೆ ವಾಹನ ಚಲಾಯಿಸುತ್ತಿದ್ದಲ್ಲಿ:
ನೀವು ವಾಹನದಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ ಭೂಮಿ ಕಂಪಿಸುವ ಅನುಭವ ಉಂಟಾದಲ್ಲಿ, ತಕ್ಷಣವೇ ನಿಮ್ಮ ವಾಹನವನ್ನು ಸುರಕ್ಷಿತ ಸ್ಥಳಕ್ಕೆ ಚಲಾಯಿಸಿ, ಓವರ್ ಪಾಸ್, ಸೇತುವೆಗಳು ಮತ್ತು ವಿದ್ಯುತ್ ಲೈನ್ ಗಳಿರುವ ಸಮೀಪ ವಾಹನಗಳನ್ನು ನಿಲ್ಲಿಸಬೇಡಿ. ಭೂಮಿ ಕಂಪಿಸುವುದು ನಿಲ್ಲುವವರೆಗೆ ನಿಮ್ಮ ವಾಹನದಲ್ಲೇ ಕುಳಿತಿರಿ, ಸೀಟ್ ಬೆಲ್ಟನ್ನು ಬಿಗಿಯಾಗಿ ಧರಿಸಿಕೊಳ್ಳಿ. ಭೂಮಿ ಕಂಪಿಸುವುದ ನಿಂತಿದೆ ಎಂದು ಖಚಿತವಾದ ಬಳಿಕವಷ್ಟೇ ವಾಹನವನ್ನು ಮೆಲ್ಲಗೆ ಚಲಾಯಿಸಿ.
5. ಮಾಹಿತಿಗಳನ್ನು ಪಡೆದುಕೊಳ್ಳುತ್ತಿರಿ:
ಭೂಕಂಪನದ ಸಂದರ್ಭದಲ್ಲಿ ತುರ್ತು ಮಾಹಿತಿಗಳಿಗಾಗಿ ಸುದ್ದಿಗಳನ್ನು ಫಾಲೋ ಮಾಡುತ್ತಿರಿ ಮತ್ತು ಸರಕಾರಿ ಸಂಸ್ಥೆಗಳು ಕೊಡುವ ಸೂಚನೆಗಳನ್ನು ನೋಡಿಕೊಳ್ಳುತ್ತಿರಿ. ಒಂದು ವೇಳೆ ನೀವು ಎಲ್ಲಿಯಾದರೂ ಸಿಲುಕಿಕೊಂಡಿದ್ದರೆ, ಮೆಸೇಜ್ ಅಥವಾ ಕರೆಯ ಮೂಲಕ ಮಾಹಿತಿ ನೀಡಲು ಪ್ರಯತ್ನಿಸಿ. ಮುಂದಿನ ಕೆಲವೇ ದಿನಗಳಲ್ಲಿ ಅಥವಾ ವಾರಗಳಲ್ಲಿ ಕಾಣಿಸಿಕೊಳ್ಳಬಹುದುದಾದ ಬಳಿಕದ ಕಂಪನದ ಬಗ್ಗೆ ಜಾಗೃತೆಯಾಗಿರಿ.
6. ಸಂವಹನದಲ್ಲಿರಿ:
ಭೂಕಂಪನದ ಸಂದರ್ಭದಲ್ಲಿ ನೀವು ಸುರಕ್ಷಿತವಾಗಿದ್ದೀರೆಂದು ನಿಮ್ಮ ಮನೆಯವರಿಗೆ ಮತ್ತು ಗೆಳೆಯರಿಗೆ ಮಾಹಿತಿ ನೀಡಿ. ಹೀಗೆ, ಭೂಕಂಪನದ ಸಂದರ್ಭದಲ್ಲಿ ಆಘಾತಕ್ಕೊಳಗಾಗದೇ ಮತ್ತು ಭಯಪಡದೆ ಕೆಲವೊಂದು ಸುರಕ್ಷತಾ ವಿಧಾನಗಳನ್ನು ಪಾಲಿಸುವ ಮೂಲಕ ಈ ನೈಸರ್ಗಿಕ ವಿಕೋಪದ ತಿವ್ರತೆಯಿಂದ ನಮ್ಮನ್ನು ಮತ್ತು ನಮ್ಮ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳಲು ಸಾಧ್ಯವಿದೆ.