ಡಿಎಂಕೆ, ಎಎಪಿ ಇಲ್ಲದೆ ನಡೆಯಲಿದೆ ಇಂಡಿಯಾ ಮೈತ್ರಿಕೂಟ ಸಭೆ
ಪಶ್ಚಿಮ ಬಂಗಾಳ, ತಮಿಳು ನಾಡು ಸೇರಿದಂತೆ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆ ಬಳಿಕ ಇಂಡಿಯಾ ಮೈತ್ರಿಕೂಟದ ಸಭೆ ಸೋಮವಾರ ಮಧ್ಯಾಹ್ನ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ 23 ಮಿತ್ರ ಪಕ್ಷಗಳು ಭಾಗಿಯಾಗಲಿದ್ದು, ಡಿಎಂಕೆ, ಎಎಪಿ ಗೈರುಹಾಜರಾಗಲಿವೆ. ವಿಪಕ್ಷಗಳ ಮೈತ್ರಿಯನ್ನು ಪುನರುಜ್ಜೀವನಗೊಳಿಸಲು ಈ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಪಶ್ಚಿಮ ಬಂಗಾಳ (west bengal), ತಮಿಳುನಾಡಿನ (tamil nadu) ವಿಧಾನ ಸಭಾ ಚುನಾವಣೆಯಲ್ಲಿ (assembly election) ಸೋತ ಬಳಿಕ ಇದೇ ಮೊದಲ ಬಾರಿಗೆ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್ (INDIA bloc meet) ಸೋಮವಾರ ಮಧ್ಯಾಹ್ನ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸಭೆ ಸೇರಲಿದೆ. ಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ಬಗೆ ಹರಿಸಲು ಮತ್ತು ಮೈತ್ರಿಕೂಟವನ್ನು ಗುಂಪನ್ನು ಪುನರುಜ್ಜೀವನಗೊಳಿಸಲು ಈ ಸಭೆಯನ್ನು ನಡೆಸಲಾಗುತ್ತಿದೆ. ಮುಂದೆ ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಈ ಸಂದರ್ಭದಲ್ಲಿ ವಿಪಕ್ಷಗಳು ಕಾರ್ಯತಂತ್ರವನ್ನು ಪುನಃ ರೂಪಿಸಲಿದೆ ಎನ್ನಲಾಗಿದ್ದು, ಸಭೆಯಲ್ಲಿ ಡಿಎಂಕೆ, ಎಎಪಿ ಹೊರತುಪಡಿಸಿ ಒಟ್ಟು 23 ರಾಜಕೀಯ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಇಂಡಿಯಾ ಬ್ಲಾಕ್ ಸಭೆಯ ಬಳಿಕ ಕಾರ್ಯಸೂಚಿಯನ್ನು ಬಹಿರಂಗಪಡಿಸಲಾಗುವುದು. ಸಭೆಯಲ್ಲಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದೇವೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಮನೋಭಾವಗಳನ್ನು ಹೇಗೆ ಕೆಡವುತ್ತಿದೆ ಮತ್ತು ವಿದ್ಯಾರ್ಥಿಗಳ ಸಮಸ್ಯೆ ಸೇರಿದಂತೆ ಸಾಕಷ್ಟು ವಿಷಯಗಳನ್ನು ಚರ್ಚಿಸಬೇಕಾಗಿದೆ. ಹೀಗಾಗಿ ಇದು ಒಂದು ಪ್ರಮುಖ ಸಭೆಯಾಗಿದೆ ಎಂದು ತಿಳಿಸಿದರು.
ಅಕ್ರಮ ವಲಸಿಗರ ವಿರುದ್ಧ ಪಶ್ಚಿಮ ಬಂಗಾಳದಲ್ಲಿ 'ಸರ್ಜಿಕಲ್ ಸ್ಟ್ರೈಕ್': 4,800 ಮಂದಿ ಬಾಂಗ್ಲಾದೇಶಕ್ಕೆ ವಾಪಸ್
ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಭಾನುವಾರವೇ ದೆಹಲಿಗೆ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಿದ್ದಾರೆ. ಅವರು ಸಭೆಯಲ್ಲಿ 2029 ರ ಲೋಕಸಭಾ ಚುನಾವಣೆ ಎದುರಿಸಲು ಒಗ್ಗಟ್ಟಿನ ಸ್ಪರ್ಧೆಗೆ ಸೂಚಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಸಭೆಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ 23 ರಾಜಕೀಯ ಪಕ್ಷಗಳು ಭಾಗವಹಿಸಿದ್ದನ್ನು ದೃಢಪಡಿಸಿವೆ. ಕೆಲವರು ನಿರ್ದಿಷ್ಟ ಕಾರಣಗಳಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರೂ ಕೇಂದ್ರ ಸರ್ಕಾರದ ನೀತಿಗಳಿಗೆ ಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ದೇಶದಂತೆ ಇಂಡಿಯಾ ಮೈತ್ರಿಕೂಟವೂ ವೈವಿಧ್ಯತೆಯ ಮೂಲಕ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಅವರೊಂದಿಗೆ ದೆಹಲಿಗೆ ಆಗಮಿಸಿರುವ ಅವರ ಸೋದರಳಿಯ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾದರು. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, ಮುಂದಿನ ಹಾದಿಯ ಕುರಿತು ಅವರ ನಡುವೆ ವ್ಯಾಪಕ ಚರ್ಚೆ ನಡೆಯಿತು ಎಂದು ಹೇಳಿದೆ.
ಬಿಜೆಪಿ ತೊರೆದ ಅಣ್ಣಾಮಲೈಗೆ ತಮಿಳಿಗರು ಸಾಥ್; ಹೊಸ ಆಂದೋಲನಕ್ಕೆ 24 ಗಂಟೆಗಳಲ್ಲಿ 15 ಲಕ್ಷ ಜನರು ಸೇರ್ಪಡೆ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಡಿ. ರಾಜಾ ಅವರು ಸಭೆಯ ಕಾರ್ಯಸೂಚಿ ಸ್ಪಷ್ಟವಾಗಿಲ್ಲ. ಬಹಳ ಸಮಯದ ಅನಂತರ ಇಂಡಿಯಾ ಬ್ಲಾಕ್‌ನ ಔಪಚಾರಿಕ ಸಭೆ ನಡೆಯುತ್ತಿದೆ. ನಾವು ಎತ್ತಲು ಬಯಸುವ ಸಮಸ್ಯೆಗಳಿವೆ ಎಂದು ತಿಳಿಸಿದರು.