Road Accident: ಹಸೆಮಣೆ ಏರಬೇಕಿದ್ದ ವರ ಮಸಣ ಸೇರಿದ; ಕಾಲೇಜಿನ ಗೋಡೆಗೆ ಕಾರು ಡಿಕ್ಕಿ ಹೊಡೆದು ಅವಘಡ
ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸಿದೆ. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಜೇವನೈ ಗ್ರಾಮದಲ್ಲಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವರ ಸೇರಿ ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 24 ವರ್ಷದ ವರ ಸೂರಜ್ ಸೇರಿದಂತೆ ಒಟ್ಟು ಹತ್ತು ಜನರಿದ್ದ ಬೊಲೆರೊ ಎಸ್‌ಯುವಿ, ಜನತಾ ಇಂಟರ್ ಕಾಲೇಜಿನ ಗೋಡೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಅಪಘಾತದ ದೃಶ್ಯ

ಲಖನೌ: ಮದುವೆಯ ಸಂಭ್ರಮದಲ್ಲಿದ್ದ (Wedding celebration) ಮನೆಯಲ್ಲಿ ಸೂತಕ ಆವರಿಸಿದೆ. ಉತ್ತರ ಪ್ರದೇಶದ (Uttar Pradesh) ಸಂಭಾಲ್ ಜಿಲ್ಲೆಯ ಜೇವನೈ ಗ್ರಾಮದಲ್ಲಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Accident) ವರ (Groom) ಸೇರಿ ಒಂದೇ ಕುಟುಂಬದ ಎಂಟು ಜನರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 24 ವರ್ಷದ ವರ ಸೂರಜ್ ಸೇರಿದಂತೆ ಒಟ್ಟು ಹತ್ತು ಜನರಿದ್ದ ಬೊಲೆರೊ ಎಸ್‌ಯುವಿ, ಜನತಾ ಇಂಟರ್ ಕಾಲೇಜಿನ ಗೋಡೆಗೆ ಡಿಕ್ಕಿ ಹೊಡೆದಿದೆ.
ಅಪಘಾತಕ್ಕೆ ಒಳಗಾದ ವಾಹನವು ಸಂಭಾಲ್‌ನ ಹರ್ ಗೋವಿಂದ್‌ಪುರ ಗ್ರಾಮದಿಂದ ಪಕ್ಕದ ಬುದಾನ್ ಜಿಲ್ಲೆಯ ಸಿರ್ಟೌಲ್ ಗ್ರಾಮದ ವಧುವಿನ ಮನೆಗೆ ತೆರಳುತ್ತಿತ್ತು. ವಾಹನದ ಅತಿಯಾದ ವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ವರ ಸೂರಜ್ (24), ಆತನ ಅತ್ತಿಗೆ ಆಶಾ (26), ಆಶಾಳ ಮಗಳು ಐಶ್ವರ್ಯಾ (2), ಮನೋಜ್ ಅವರ ಮಗ ವಿಷ್ಣು (6), ವರನ ಚಿಕ್ಕಮ್ಮ ಮತ್ತು ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಎಂಟು ಜನರು ಮೃತಪಟ್ಟಿದ್ದಾರೆ.
#WATCH | Sambhal, UP | On a car accident in the Junawai area, Sambhal SP KK Bishnoi says, "At around 7.30 pm, we received information that a Bolero Neo car has collided with the wall of Janta Inter College. Police reached the spot and removed the car with the help of a JCB. Five… pic.twitter.com/sAt9ndem8l
— ANI (@ANI) July 5, 2025
ಐದು ಜನರು ಘಟನಾ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ಅಲಿಘಡ್‌ನ ಉನ್ನತ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ. ಹೆಚ್ಚು ಜನರಿಂದ ತುಂಬಿದ್ದ ಬೊಲೆರೊ, ವಾಹನದ ಸಾಮರ್ಥ್ಯವನ್ನು ಮೀರಿದ್ದು ದುರಂತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ
ವಾಹನವು ಜನತಾ ಇಂಟರ್ ಕಾಲೇಜಿನ ಗೋಡೆಗೆ ಡಿಕ್ಕಿಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನುಕೃತಿ ಶರ್ಮಾ ತಿಳಿಸಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಸ್ಥಳೀಯ ಪೊಲೀಸರು ಮತ್ತು ವೈದ್ಯಕೀಯ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಐವರು ಜೇವನೈ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲುಪುವ ಮೊದಲೇ ಮೃತಪಟ್ಟಿದ್ದರು ಎಂದು ಅವರು ಹೇಳಿದರು. ಪ್ರತ್ಯಕ್ಷದರ್ಶಿಗಳು ರೆಕಾರ್ಡ್ ಮಾಡಿದ ವಿಡಿಯೊಗಳಲ್ಲಿ ಒಡೆದ ಗಾಜು, ರಕ್ತದ ಕಲೆಗಳು ಮತ್ತು ಜಕಂಗೊಂಡ ವಾಹನದ ದೃಶ್ಯಗಳು ಕಂಡುಬಂದಿವೆ. ಅಪಘಾತದ ನಿಖರ ಕಾರಣವನ್ನು ಪತ್ತೆ ಮಾಡಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.