ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Pakistan War: ಮುಗಿಯದ ಸಂಘರ್ಷ- 1947ರಿಂದಲೂ ಯುದ್ಧ ಭೂಮಿಯಲ್ಲಿ ಹೋರಾಡುತ್ತಲೇ ಇದೆ ಭಾರತ- ಪಾಕ್

ಎರಡು ದೇಶಗಳು ವಿಭಜನೆಯಾದ ಬಳಿಕ ಅಂದರೆ 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯಗೊಂಡ ಅನಂತರ ಹಲವು ಬಾರಿ ಮುಖಾಮುಖಿಯಾಗಿವೆ. ಇದೀಗ ಆಪರೇಷನ್ ಸಿಂಧೂರ್ ನಲ್ಲಿ ಭಾರತೀಯ ಸೇನೆ ತೊಡಗಿಕೊಂಡಿದ್ದು, ಯುದ್ಧ ಘೋಷಣೆಗಳು ಮೊಳಗಿವೆ. ಈ ಮಧ್ಯೆ, 1947ರಿಂದ ಈವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧಗಳು ಹೇಗಿತ್ತು ಎನ್ನುವ ಅವಲೋಕನ ಇಲ್ಲಿದೆ.

ರಣರಂಗದಲ್ಲಿ ಭಾರತ-ಪಾಕ್! ಇದು ಇಂದು ನಿನ್ನೆಯ ಯುದ್ಧವಲ್ಲ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ (India Pakistan War) ಸೈನ್ಯಗಳು ಮತ್ತೆ ರಣಾಂಗಣಕ್ಕೆ ಇಳಿದಿವೆ. ಉಗ್ರರ ವಿರುದ್ಧ ಭಾರತ ಪ್ರಾರಂಭಿಸಿರುವ ಆಪರೇಷನ್ ಸಿಂಧೂರ್ (Operation Sindoor) ವಿರುದ್ಧ ಪಾಕಿಸ್ತಾನವು ರಣಭೂಮಿಗೆ ಇಳಿಯುವುದಾಗಿ ಅಧಿಕೃತ ಘೋಷಣೆಯನ್ನು ಮಾಡಿದರೂ ವಿಶ್ವದ ಬಲಾಢ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಲು ಶಾಂತಿ ಮಂತ್ರ ಪಠನೆ ಮಾಡುತ್ತಿದೆ. ಎರಡು ದೇಶಗಳು ವಿಭಜನೆಯಾದ ಬಳಿಕ ಅಂದರೆ 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯಗೊಂಡ ಅನಂತರ ಹಲವು ಬಾರಿ ಸಂಘರ್ಷದಲ್ಲಿ (India pakistan conflicts) ತೊಡಗಿಕೊಂಡಿವೆ. ಭಾರತೀಯ ಸೇನೆಯ ಎದುರು ಮುಖಭಂಗವಾದರೂ ಮತ್ತೆ ಮತ್ತೆ ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ ಪಾಕಿಸ್ತಾನ.

ಬುಧವಾರ ಮಧ್ಯರಾತ್ರಿ ಪ್ರಾರಂಭವಾದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ ಒಟ್ಟು ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಈ ಮೂಲಕ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿದೆ. ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು 26 ಪ್ರವಾಸಿಗರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಈ ಕಾರ್ಯಾಚರಣೆಯನ್ನು ಕೈಗೊಂಡಿದೆ.

ಈ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿವೆ. ಈ ಸ್ಥಳಗಳಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸಲಾಗುತ್ತಿತ್ತು. ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯಗೊಂಡ ಬಳಿಕ ಎರಡು ರಾಷ್ಟ್ರಗಳ ನಡುವೆ ಸದಾ ಉದ್ವಿಗ್ನ ವಾತಾವರಣವೇ ಇದೆ. ಈ ಎರಡು ರಾಷ್ಟ್ರಗಳು ವಿಭಜನೆಯಾಗಿ ಸ್ವಾತಂತ್ರ್ಯಗೊಂಡ ಬಳಿಕ ಅಂದರೆ 1947ರಿಂದ ಹಲವಾರು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷಗಳು ನಡೆದಿವೆ. ಇದರಲ್ಲಿ ಪ್ರಮುಖ ಘಟನೆಗಳು ಇಂತಿವೆ.

wqar4

ಪಾಕ್ ಆಕ್ರಮಿತ ಕಾಶ್ಮೀರ ಹುಟ್ಟಿಗೆ ಕಾರಣವಾದ ಘಟನೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲು 1947ರಲ್ಲಿ ಯುದ್ಧ ಪ್ರಾರಂಭವಾಗಿತ್ತು. ಇದು ಎರಡು ದೇಶಗಳು ವಿಭಜನೆಯಾಗಿ ಸ್ವಾತಂತ್ರ್ಯಗೊಂಡ ಎರಡು ತಿಂಗಳ ಬಳಿಕ ಅಂದರೆ ಅಕ್ಟೋಬರ್ ನಲ್ಲಿ ಮೊದಲ ಕಾಶ್ಮೀರ ಯುದ್ಧ ಪ್ರಾರಂಭವಾಯಿತು. ಇದರಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು.

ಕಾಶ್ಮೀರದ ಮಹಾರಾಜ ಹರಿ ಸಿಂಗ್ ಭಾರತಕ್ಕೆ ಸೇರುತ್ತಾರೆ ಎನ್ನುವ ಪಾಕಿಸ್ತಾನದ್ದಾಗಿತ್ತು. ಎರಡು ದೇಶಗಳು ವಿಭಜನೆಯಾದ ಬಳಿಕ ರಾಜಪ್ರಭುತ್ವದ ರಾಜ್ಯಗಳಿಗೆ ಮೂರು ಆಯ್ಕೆಗಳನ್ನು ನೀಡಲಾಯಿತು. ಇದರಲ್ಲಿ ಒಂದು ಭಾರತಕ್ಕೆ ಸೇರುವುದು, ಇನ್ನೊಂದು ಪಾಕಿಸ್ತಾನಕ್ಕೆ ಸೇರುವುದು ಹಾಗೂ ಮತ್ತೊಂದು ಸ್ವತಂತ್ರವಾಗಿ ಉಳಿಯುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಇದ್ದರು. ಇಲ್ಲಿನ ಬುಡಕಟ್ಟು ಇಸ್ಲಾಮಿಕ್ ಪಡೆಗಳು ಪಾಕಿಸ್ತಾನ ಸೇನೆಯೊಂದಿಗೆ ಸೇರಿಕೊಂಡು ಕಾಶ್ಮೀರದ ಕೆಲವು ಭಾಗಗಳನ್ನು ವಶಪಡಿಸಿಕೊಂಡವು. ಆಗ ರಾಜ್ಯವನ್ನು ಉಳಿಸಿಕೊಳ್ಳಲು ಮಹಾರಾಜ ಹರಿ ಸಿಂಗ್ ಭಾರತಕ್ಕೆ ಸೇರ್ಪಡೆಗೊಂಡು ಮಿಲಿಟರಿ ಸಹಾಯ ಪಡೆದರು.

ಇದರ ನಿರ್ಣಯವನ್ನು ಕೈಗೊಳ್ಳಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಎರಡು ದೇಶಗಳ ಪ್ರತಿನಿಧಿಗಳು ಹಾಜರಾದರು. 1948ರ ಏಪ್ರಿಲ್ 22ರಂದು ನಿರ್ಣಯ 47 ಅನ್ನು ಅಂಗೀಕರಿಸಲಾಯಿತು ಮತ್ತು ಎರಡು ದೇಶಗಳ ನಡುವೆ ನಿಯಂತ್ರಣ ರೇಖೆಯನ್ನು ರಚಿಸಲಾಯಿತು. 1949ರ ಜನವರಿ 1ರಂದು ಕದನ ವಿರಾಮವನ್ನು ಘೋಷಿಸಲಾಯಿತು. ಭಾರತವು ಜಮ್ಮು ಮತ್ತು ಕಾಶ್ಮೀರದ ಮೂರನೇ ಎರಡರಷ್ಟು ಭಾಗವನ್ನು ಪಡೆದರೆ ಪಾಕಿಸ್ತಾನವು ಗಿಲ್ಗಿಟ್ ಬಾಲಿಸ್ತಾನ್ ಮತ್ತು ಆಜಾದ್ ಕಾಶ್ಮೀರದ ಮೇಲೆ ನಿಯಂತ್ರಣ ಪಡೆದುಕೊಂಡಿತು. ಇದನ್ನೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ.

ಆಪರೇಷನ್ ಜಿಬ್ರಾಲ್ಟರ್‌

1965ರ ಆಗಸ್ಟ್ ತಿಂಗಳಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ಯೋಜಿಸಿ ಕಾರ್ಯಗತಗೊಳಿಸಿದ ಮಿಲಿಟರಿ ಕಾರ್ಯಾಚರಣೆಯನ್ನು ಆಪರೇಷನ್ ಜಿಬ್ರಾಲ್ಟರ್ ಎಂದು ಗುರುತಿಸಲಾಯಿತು. ಈ ಕಾರ್ಯಾಚರಣೆಯ ಮುಖ್ಯ ತಂತ್ರವೆಂದರೆ ನಿಯಂತ್ರಣ ರೇಖೆಯನ್ನು ಗೌಪ್ಯವಾಗಿ ದಾಟಿ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರಿ ಜನರನ್ನು ಭಾರತ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಮಾಡುವುದಾಗಿತ್ತು. ಪಾಕಿಸ್ತಾನಿ ಸೇನೆಯು ಭಾರತ ಆಡಳಿತದ ಪ್ರದೇಶಗಳಿಗೆ ಪ್ರವೇಶಿಸಿ ದಂಗೆಯನ್ನು ಪ್ರಾರಂಭಿಸಲು ಪ್ರಯತ್ನಿಸಿದವು. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರವು ಪಶ್ಚಿಮ ಪಾಕಿಸ್ತಾನದ ವಿರುದ್ಧ ಪೂರ್ಣ ಪ್ರಮಾಣದ ಮಿಲಿಟರಿ ಪ್ರತಿಕ್ರಿಯೆಯನ್ನು ನೀಡಿತು. 17 ದಿನಗಳ ಕಾಲ ನಡೆದ ಯುದ್ಧದಲ್ಲಿ ಎರಡೂ ಕಡೆಗಳಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು. ಎರಡು ರಾಷ್ಟ್ರಗಳ ನಡುವಿನ ಸಂಘರ್ಷವನ್ನು ನಿಯಂತ್ರಿಸಲು ಸೋವಿಯತ್ ಒಕ್ಕೂಟ ಮತ್ತು ಯುಎಸ್ಎ ಮಧ್ಯಪ್ರವೇಶಿಸಿತು. ಇಲ್ಲಿ ಪಾಕಿಸ್ತಾನವೇ ದಂಗೆಯನ್ನು ಉಂಟುಮಾಡಿದ್ದರಿಂದ ಭಾರತದ ಎದುರು ಅದು ಮಂಡಿಯೂರಬೇಕಾಯಿತು.

ಬಾಂಗ್ಲಾ ವಿಮೋಚನೆ

1971ರ ಯುದ್ಧವನ್ನು ಬಾಂಗ್ಲಾ ವಿಮೋಚನಾ ಯುದ್ಧ ಎಂದು ಕರೆಯಲಾಗುತ್ತದೆ. ಈ ಯುದ್ಧದ ಕೊನೆಯಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನ ಬೇರೆಯಾಗಿ ಸ್ವತಂತ್ರ ರಾಷ್ಟ್ರವಾಗಿ ಬಾಂಗ್ಲಾದೇಶ ಎಂದು ಗುರುತಿಸಲ್ಪಟ್ಟಿತು.

ಪೂರ್ವ ಪಾಕಿಸ್ತಾನದಲ್ಲಿದ್ದ ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದ ಅವಾಮಿ ಲೀಗ್ ಪಕ್ಷವು ರಾಷ್ಟ್ರೀಯ ಚುನಾವಣೆಗಳಲ್ಲಿ ಗೆದ್ದ ಬಳಿಕ 1970ರ ಡಿಸೆಂಬರ್ ತಿಂಗಳಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಪಶ್ಚಿಮ ಪಾಕಿಸ್ತಾನ ಪಕ್ಷಗಳು ಅಂದರೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧಿಕಾರವನ್ನು ಹಸ್ತಾಂತರಿಸಲು ನಿರಾಕರಿಸಿತು. ಇದರಿಂದ ಬಂಗಾಳಿ ಮತ್ತು ಬಿಹಾರಿಗಳ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಬಳಿಕ ಭಾರತದ ವಿವಿಧ ಭಾಗಗಳಿಂದ ವಲಸೆ ಬಂದ ಉರ್ದು ಮಾತನಾಡುವ ಸಮುದಾಯಗಳು ಪೂರ್ವ ಪಾಕಿಸ್ತಾನದಲ್ಲಿ ಹೆಚ್ಚಾದವು. ಇದು ಕೆಲವು ಬಿಹಾರಿ ಸಮುದಾಯಗಳ ಮೇಲೆ ದಾಳಿ ನಡೆಸಿತ್ತು. 1971ರ ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನ ಸೇನೆಯು ಪೂರ್ವದಲ್ಲಿ ರಾಷ್ಟ್ರೀಯತಾವಾದಿ ಭಾವನೆಗಳ ಬೆಳವಣಿಗೆಯನ್ನು ತಡೆಯಲು ಮಧ್ಯಪ್ರವೇಶಿಸಿ ಸ್ಥಳೀಯ ಪಾಕಿಸ್ತಾನ ಪರ ಬಂಗಾಳಿಗಳು ಮತ್ತು ಇಸ್ಲಾಮಿಕ್ ಸಂಘಟನೆಯಾದ ಜಮಾತ್-ಇ-ಇಸ್ಲಾಮಿಯ ಸದಸ್ಯರನ್ನು ಒಳಗೊಂಡಂತೆ ಬಂಗಾಳಿಯೇತರರನ್ನು ನೇಮಿಸಿಕೊಂಡಿತು. ಇದರಿಂದ ಉಂಟಾದ ಗಲಭೆಯಲ್ಲಿ ಸುಮಾರು 5 ಲಕ್ಷದಿಂದ 30 ಲಕ್ಷಕ್ಕಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಇದರಿಂದ ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಪಲಾಯನ ಮಾಡಿದರು. ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯಕ್ಕಾಗಿ ಪೂರ್ವ ಪಾಕಿಸ್ತಾನದ ಜನರ ಹೋರಾಟಕ್ಕೆ ತಮ್ಮ ಸರಕಾರದ ಸಂಪೂರ್ಣ ಬೆಂಬಲವನ್ನು ನೀಡಿದರು. ಹೀಗೆ ಭಾರತ ಸರ್ಕಾರದ ಸಹಾಯದಿಂದ 1971ರ ಡಿಸೆಂಬರ್ 16ರಂದು ಪಶ್ಚಿಮ ಪಾಕಿಸ್ತಾನದಿಂದ ವಿಭಜನೆಯಾದ ಪೂರ್ವ ಪಾಕಿಸ್ತಾನ ಸ್ವಾತಂತ್ರ್ಯ ರಾಷ್ಟ್ರವಾಗಿ ನಿರ್ಮಾಣವಾಯಿತು. ಇದನ್ನು ಬಾಂಗ್ಲಾದೇಶ ಎಂದು ಕರೆಯಲಾಯಿತು.

wqar1

ಕಾರ್ಗಿಲ್ ಯುದ್ಧ

1999ರಲ್ಲಿ ಪಾಕಿಸ್ತಾನಿ ಪಡೆಗಳು ಭಾರತದ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಒಳನುಸುಳಿ ಬಂದು ಕಾಶ್ಮೀರದ ಕಾರ್ಗಿಲ್‌ನಲ್ಲಿ ಭಾರತೀಯ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಎರಡು ದೇಶಗಳ ಸೈನ್ಯಗಳು ಇಲ್ಲಿ ದೊಡ್ಡ ಪ್ರಮಾಣದಲ್ಲೇ ಮಿಲಿಟರಿ ಸಂಗ್ರಹಕ್ಕೆ ಮುಂದಾಗಿ ಸಂಘರ್ಷ ಏರ್ಪಟ್ಟಿತು. ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ನಡುವೆ 1999ರ ಮೇ ತಿಂಗಳಿನಿಂದ ಜುಲೈವರೆಗೆ ಲಡಾಖ್‌ನ ಕಾರ್ಗಿಲ್ ಜಿಲ್ಲೆ ಮತ್ತು ನಿಯಂತ್ರಣ ರೇಖೆಯ ಇತರೆಡೆಗಳಲ್ಲಿ ನಡೆಯಿತು ಈ ಯುದ್ಧದಲ್ಲಿ ಭಾರತೀಯ ವಾಯುಪಡೆಯು ಭಾರತೀಯ ಸೇನೆಯೊಂದಿಗೆ ಸೇರಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಥಾನಗಳಿಂದ ಪಾಕಿಸ್ತಾನ ಸೈನ್ಯ ಮತ್ತು ಅರೆಸೈನಿಕ ಪಡೆಗಳನ್ನು ಹೊರದಬ್ಬುವಲ್ಲಿ ಯಶಸ್ವಿಯಾಯಿತು.

ಪಾಕಿಸ್ತಾನ ಇಲ್ಲಿಂದ ಹಿಮ್ಮೆಟ್ಟುವಂತೆ ಅಮೆರಿಕ ಒತ್ತಾಯಿಸಿದ್ದರಿಂದ ಮತ್ತು ಅಂತಾರಾಷ್ಟ್ರೀಯ ಒಕ್ಕೂಟದಲ್ಲಿ ಒಂಟಿಯಾಗುವ ಭಯದಿಂದ ಪಾಕಿಸ್ತಾನ ಭಾರತೀಯ ಸೇನೆಯ ಮುಂದೆ ಶರಣಾಯಿತು. ಈ ಯುದ್ಧದಲ್ಲಿ ಪಾಕಿಸ್ತಾನದ ನಾರ್ದರ್ನ್ ಲೈಟ್ ಇನ್‌ಫೆಂಟ್ರಿಯ ಅನೇಕ ಘಟಕಗಳಲ್ಲಿ ಅಪಾರ ಪ್ರಮಾಣದ ಸಾವುನೋವುಗಳನ್ನು ಉಂಟಾಗಿದ್ದನ್ನು ಆಗಿನ ಪಾಕಿಸ್ತಾನ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅಂತರರಾಷ್ಟ್ರೀಯ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ 4,000 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಸೋತಿದೆ ಎಂದು ಅವರು ಹೇಳಿದ್ದರು.

ರಾಜತಾಂತ್ರಿಕ ಉದ್ವಿಗ್ನತೆ

2008ರ ನವೆಂಬರ್ 26ರಂದು ಮುಂಬೈಗೆ ಮುತ್ತಿಗೆ ಹಾಕಿದ ಉಗ್ರರು ಆರು ಅಮೆರಿಕನ್ನರು ಸೇರಿದಂತೆ 166 ಜನರನ್ನು ಕೊಂದರು. ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ನೇರ ಮಿಲಿಟರಿ ಘರ್ಷಣೆಯ ಭಯ ಹೆಚ್ಚಾಯಿತು. ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳು ಇದರ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಪಾತ್ರವಿದೆ ಎಂದು ಆರೋಪಿಸಿವೆ. ಎಲ್‌ಇಟಿಯು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಜೊತೆ ಸಂಬಂಧ ಹೊಂದಿರುವ ಭಯೋತ್ಪಾದಕರ ಸಂಘಟನೆಯಾಗಿದೆ. ಈ ಘಟನೆಯ ಬಳಿಕ ಮಿಲಿಟರಿ ಕಾರ್ಯಾಚರಣೆ ಬದಲು ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಭಾರತವು ಪಾಕಿಸ್ತಾನ ಸರ್ಕಾರದೊಂದಿಗೆ ಸಹಕಾರವನ್ನು ಕೋರಿ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಿತು. ಇದು ಎರಡು ರಾಷ್ಟ್ರಗಳ ನಡುವೆ ಸಂಬಂಧಗಳನ್ನು ಸುಧಾರಿಸಲು ದಾರಿ ಮಾಡಿಕೊಟ್ಟಿತು.

2014 ರಲ್ಲಿ ದೇಶದ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರು ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಅವರನ್ನು ತಮ್ಮ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದರು. ಇದು ಎಲ್ಲರಲ್ಲೂ ಎರಡು ರಾಷ್ಟ್ರಗಳ ನಡುವೆ ಸಂಬಂಧವನ್ನು ಸುಧಾರಿಸುವ ಆಶಾಭಾವನೆಯನ್ನು ಉಂಟು ಮಾಡಿತ್ತು. ಆದರೆ 2014ರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿನ ಪಾಕಿಸ್ತಾನಿ ಹೈಕಮಿಷನರ್ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರನ್ನು ಭೇಟಿಯಾದ ಬಳಿಕ ಭಾರತವು ಪಾಕಿಸ್ತಾನದ ವಿದೇಶಾಂಗ ಸಚಿವರೊಂದಿಗಿನ ಮಾತುಕತೆಯನ್ನು ರದ್ದುಗೊಳಿಸಿತ್ತು. ಇದು ಎರಡು ರಾಷ್ಟ್ರಗಳ ಸಂಬಂಧದ ಮೇಲೆ ಪರಿಣಾಮ ಬೀರಿತು.

ಸರ್ಜಿಕಲ್ ಸ್ಟ್ರೈಕ್

ಶಾಂತಿ ಮಾತುಕತೆಯಲ್ಲೇ ಮುಂದುವರಿದಿದ್ದ ಭಾರತವನ್ನು 2016ರ ಉರಿ ದಾಳಿ ಉರಿಯುವಂತೆ ಮಾಡಿತ್ತು. 2016ರ ಸೆಪ್ಟೆಂಬರ್ ತಿಂಗಳಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿಯ ಉರಿಯಲ್ಲಿರುವ ಭಾರತೀಯ ಸೇನಾ ನೆಲೆಯ ಮೇಲೆಭಯೋತ್ಪಾದಕರು ದಾಳಿ ನಡೆಸಿದರು. ಇದು ದಶಕಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿತ್ತು. ಇದರಲ್ಲಿ 18 ಭಾರತೀಯ ಸೈನಿಕರನ್ನು ಸಾವನ್ನಪ್ಪಿದ್ದರು. ಐಎಸ್‌ಐ ಜೊತೆ ಸಂಬಂಧ ಹೊಂದಿರುವ ಮತ್ತೊಂದು ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಇದರ ಹೊಣೆಯನ್ನು ಹೊತ್ತುಕೊಂಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಭಯೋತ್ಪಾದಕ ಶಿಬಿರಗಳ ಮೇಲೆ "ಸರ್ಜಿಕಲ್ ಸ್ಟ್ರೈಕ್" ನಡೆಸಿತು. ಆದರೆ ಪಾಕಿಸ್ತಾನಿ ಸೇನೆಯು ಅಂತಹ ಯಾವುದೇ ಕಾರ್ಯಾಚರಣೆ ನಡೆದಿಲ್ಲ ಎನ್ನುತ್ತಿದೆ.

ಇದನ್ನೂ ಓದಿ: Operation Sindoor: ಉಗ್ರರ 9 ನೆಲೆಗಳು ಉಡೀಸ್‌; ಧ್ವಂಸಗೊಂಡ ಜೈಶ್ ಪ್ರಧಾನ ಕಚೇರಿಯ ವಿಡಿಯೋ ವೈರಲ್‌

wqar2

ಪುಲ್ವಾಮಾ ದಾಳಿ

2019ರ ಫೆಬ್ರವರಿ ತಿಂಗಳಲ್ಲಿ ಪುಲ್ವಾಮಾದಲ್ಲಿ ಭಾರತೀಯ ಅರೆಸೈನಿಕ ಪಡೆಗಳ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಿದರು. ಇದರಲ್ಲಿ ಸುಮಾರು 40 ಭಾರತೀಯ ಸೈನಿಕರು ಸಾವನ್ನಪ್ಪಿದರು. ಪಾಕಿಸ್ತಾನ ಬೆಂಬಲಿತ ಜೈಶ್-ಎ-ಮೊಹಮ್ಮದ್ ಈ ದಾಳಿಯನ್ನು ನಡೆಸಿರುವುದಾಗಿ ಒಪ್ಪಿಕೊಂಡಿತು. ಈ ದಾಳಿಯು ಮೂರು ದಶಕಗಳಲ್ಲಿ ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಇದಕ್ಕೆ ಪ್ರತಿಕಾರವಾಗಿ ಭಾರತವು ಪಾಕಿಸ್ತಾನದ ಪ್ರದೇಶದೊಳಗಿನ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಕಾಶ್ಮೀರದ ಮೇಲೆ ವಾಯುದಾಳಿ ನಡೆಸಿತು. ಈ ಘಟನೆಯಲ್ಲಿ ಪಾಕಿಸ್ತಾನವು ಒಬ್ಬ ಭಾರತೀಯ ಪೈಲಟ್ ಅನ್ನು ಸೆರೆಹಿಡಿಡಿದ್ದು,ಅಂತಾರಾಷ್ಟ್ರೀಯ ಒತ್ತಡಗಳು ಹೆಚ್ಚಾದ ಬಳಿಕ ಅವರನ್ನು ಬಿಡುಗಡೆ ಮಾಡಿತು.

ಭಯೋತ್ಪಾದಕರನ್ನೇ ತನ್ನ ರಕ್ಷಕರು ಎಂದುಕೊಂಡಿರುವ ಪಾಕಿಸ್ತಾನಕ್ಕೆ ಭಾರತೀಯ ಸೈನ್ಯವು ಪದೇಪದೇ ಚಾಟಿ ಏಟು ನೀಡಿ ಮಂಡಿಯೂರುವಂತೆ ಮಾಡಿದರೂ ಅದು ಇನ್ನೂ ಪಾಠ ಕಲಿತಂತಿಲ್ಲ. ಮತ್ತೆಮತ್ತೆ ಕಾಲ್ಕೆರೆದು ಜಗಳಕ್ಕೆ ಮುಂದಾಗುತ್ತಿದೆ. ಶಾಂತಿ ಪ್ರಿಯ ರಾಷ್ಟ್ರವಾಗಿರುವ ಭಾರತವನ್ನು ಕೆರಳಿಸುವಂತೆ ಮಾಡಿ ಪೆಟ್ಟು ತಿನ್ನುತ್ತಲೇ ಇದೆ.