ʼʼವೈಫಲ್ಯ ಮರೆಮಾಚುವ ಯತ್ನʼʼ: ಯುದ್ಧ ಬೆದರಿಕೆ ಹಾಕಿದ ಪಾಕಿಸ್ತಾನದ ಖ್ವಾಜಾ ಆಸಿಫ್‌ಗೆ ಭಾರತ ತಿರುಗೇಟು
Khawaja Asif: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿದ ಯುದ್ಧದ ಬೆದರಿಕೆಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ತನ್ನ ದೇಶದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ವೈಫಲ್ಯಗಳಿಂದ ಜಾಗತಿಕ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಹತಾಶ ಯತ್ನ ನಡೆಸುತ್ತಿದೆ ಎಂದು ಭಾರತ ಆರೋಪಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ನಾಗರಿಕರ ಮೇಲಿನ ಕ್ರೂರ ಕ್ರಮಗಳಿಗೂ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಖ್ವಾಜಾ ಆಸಿಫ್ (ಸಂಗ್ರಹ ಚಿತ್ರ) -
ನವದೆಹಲಿ, ಜೂ. 23: ಪಾಕಿಸ್ತಾನ (Pakistan)ದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khawaja Asif) ಇತ್ತೀಚೆಗೆ ನೀಡಿದ್ದ ಯುದ್ಧದ ಬೆದರಿಕೆಗೆ ಭಾರತ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪಾಕಿಸ್ತಾನವು ತನ್ನ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜಗತ್ತಿನ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಹತಾಶ ಯತ್ನ ನಡೆಸುತ್ತಿದೆ ಎಂದು ಭಾರತ ಹೇಳಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸರ್ಕಾರಿ ವಿರೋಧಿ ಪ್ರತಿಭಟನೆಗಳ ವಿರುದ್ಧ ಅಲ್ಲಿನ ಆಡಳಿತ ನಡೆಸುತ್ತಿರುವ ಕ್ರೂರ ಕೃತ್ಯವನ್ನು ನವದೆಹಲಿ ಈ ವೇಳೆ ಎತ್ತಿ ತೋರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಪಾಕ್ ರಕ್ಷಣಾ ಸಚಿವರ ಹೇಳಿಕೆಗಳ ವರದಿಗಳನ್ನು ನಾವು ನೋಡಿದ್ದೇವೆ. ಇಂತಹ ಹೇಳಿಕೆಗಳು ಪಾಕಿಸ್ತಾನವು ತನ್ನದೇ ಆದ ವೈಫಲ್ಯಗಳನ್ನು ಮುಚ್ಚಿಡಲು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಮಾಡುತ್ತಿರುವ ಹತಾಶ ಪ್ರಯತ್ನಗಳಾಗಿವೆ. ಈ ಆಧಾರರಹಿತ ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ" ಎಂದರು.
ಅಲ್ಲದೇ "ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು, ಪಾಕಿಸ್ತಾನವು ದಶಕಗಳಿಂದ ಅಲ್ಲಿ ನಡೆಸುತ್ತಿರುವ ವ್ಯವಸ್ಥಿತ ಆರ್ಥಿಕ ಶೋಷಣೆ, ಮೂಲಭೂತ ಹಕ್ಕುಗಳ ನಿರಾಕರಣೆ ಮತ್ತು ಆಡಳಿತಾತ್ಮಕ ದಬ್ಬಾಳಿಕೆಯ ನೇರ ಪರಿಣಾಮವಾಗಿದೆ. ನಿರಾಯುಧ ನಾಗರಿಕರ ವಿರುದ್ಧ ಪಾಕ್ ಸರ್ಕಾರವು ಮಾರಕ ಶಸ್ತ್ರಾಸ್ತ್ರಗಳ ಬಳಕೆ, ಇಂಟರ್ನೆಟ್ ನಿಷೇಧ ಹಾಗೂ ಅಗತ್ಯ ವಸ್ತುಗಳ ಪೂರೈಕೆಯನ್ನು ತಡೆಯುವ ಮೂಲಕ ಕ್ರೂರ ಪೊಲೀಸ್ ದೌರ್ಜನ್ಯ ಎಸಗಿದೆ" ಎಂದು ಅವರು ತಿಳಿಸಿದರು.
ಏರ್ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಿದ್ದಂತೆ 8 ಪ್ರವಾಸಿಗರು ಸಜೀವ ದಹನ
ಪಿಒಕೆ ಪ್ರತಿಭಟನೆಗಳ ಮೇಲಿನ ಕ್ರೂರತೆಗಾಗಿ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಹೊಣೆಗಾರರನ್ನಾಗಿ ಮಾಡಲು ಅಂತರರಾಷ್ಟ್ರೀಯ ಸಮುದಾಯಕ್ಕೆ ಭಾರತ ಕರೆ ನೀಡಿದೆ. ಈ ದೌರ್ಜನ್ಯದಿಂದಾಗಿ ಈಗಾಗಲೇ ಹಲವು ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜೈಸ್ವಾಲ್ ವಿಷಾದಿಸಿದರು.
ಸಿಂಧೂ ನದಿ ನೀರು ಹಂಚಿಕೆ
ವ್ಯವಸ್ಥೆಯಲ್ಲಿ ಭಾರತದ ಕ್ರಮಗಳು ತನ್ನ ನೀರಿನ ಭದ್ರತೆಗೆ ಧಕ್ಕೆ ತಂದರೆ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಆಸಿಫ್ ಎಚ್ಚರಿಸಿದ ಮೂರು ದಿನಗಳ ನಂತರ ಭಾರತದ ಈ ಹೇಳಿಕೆ ಬಂದಿದೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಪಾಕಿಸ್ತಾನವು ತನ್ನ ಗಡಿಯಾಚೆಗಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವವರೆಗೆ ಈ ಪ್ರಮುಖ ಒಪ್ಪಂದವು ಅಮಾನತಿನಲ್ಲಿಯೇ ಇರುತ್ತದೆ ಎಂದು ಭಾರತ ಸ್ಪಷ್ಟಪಡಿಸಿದೆ.