ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India- Pakistan War: ಸಂಯಮದಿಂದಲೇ ಪಾಕ್ ವಿರುದ್ದದ ನಾಲ್ಕು ಯುದ್ಧಗಳನ್ನು ಗೆದ್ದಿತ್ತು ಭಾರತ

1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಬಳಿಕ ನಾಲ್ಕು ಬಾರಿ ಮುಖಾಮುಖಿ ಸಂಘರ್ಷ ಉಂಟಾಗಿತ್ತು. ಈ ಎಲ್ಲದರಲ್ಲೂ ಭಾರತದ ಪರ ನಿರ್ಣಯ ಕೈಗೊಳ್ಳುವ ಮೂಲಕ ಕೊನೆಯಾಗಿತ್ತು. ಭಾರತ ಮತ್ತು ಪಾಕಿಸ್ತಾನ 1948, 1965, 1971 ಮತ್ತು 1999 ಹೀಗೆ ನಾಲ್ಕು ಬಾರಿ ಮುಖಾಮುಖಿಯಾಗಿ ಸಂಘರ್ಷವನ್ನು ನಡೆಸಿವೆ. ಇದು ಕೊನೆಯಾಗಿದ್ದು ಹೇಗೆ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ನಾಲ್ಕು ಬಾರಿ ಮುಖಭಂಗವಾದರೂ ಬುದ್ದಿ ಕಲಿತಿಲ್ಲ ಪಾಕ್

ನವದೆಹಲಿ: ಕಾಶ್ಮೀರದ ಪಹಲ್ಗಾಮ್ (Pahalgam) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ (Terror Attack)ಬಳಿಕ ಉಂಟಾಗಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ (India Pakistan War) ಕಡಿಮೆಯಾಗುವ ಸೂಚನೆ ಕಾಣುತ್ತಿದೆ. ಈಗಾಗಲೇ ಪಾಕಿಸ್ತಾನ ಅಧಿಕಾರಿಗಳು ಭಾರತದೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಘೋಷಣೆಯನ್ನು ಹೊರಡಿಸಬೇಕಿದೆ. ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್‌ವರೆಗಿನ ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್ ದಾಳಿ ಪ್ರಾರಂಭಿಸಿದ ಕೆಲವೇ ಗಂಟೆಗಳ ಅನಂತರ ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನ ನಡೆಯುತ್ತಿದೆ.

1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಬಳಿಕ ನಾಲ್ಕು ಬಾರಿ ಮುಖಾಮುಖಿ ಸಂಘರ್ಷ ಉಂಟಾಗಿತ್ತು. ಈ ಎಲ್ಲದರಲ್ಲೂ ಭಾರತದ ಪರ ನಿರ್ಣಯ ಕೈಗೊಳ್ಳುವ ಮೂಲಕ ಕೊನೆಯಾಗಿತ್ತು. ಭಾರತ ಮತ್ತು ಪಾಕಿಸ್ತಾನ 1948, 1965, 1971 ಮತ್ತು 1999 ಹೀಗೆ ನಾಲ್ಕು ಬಾರಿ ಮುಖಾಮುಖಿಯಾಗಿ ಸಂಘರ್ಷವನ್ನು ನಡೆಸಿವೆ.

war

ಕಾಶ್ಮೀರ ಯುದ್ಧ

1947- 48ರಲ್ಲಿ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಕಾಶ್ಮೀರ ಯುದ್ಧದಲ್ಲಿ ಪಾಲ್ಗೊಂಡಿತ್ತು. ಪಾಕಿಸ್ತಾನ ಬೆಂಬಲಿತ ಬುಡಕಟ್ಟು ಸೇನಾಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜಪ್ರಭುತ್ವ ರಾಜ್ಯವನ್ನು ಆಕ್ರಮಿಸಿದ ಬಳಿಕ ಕಾಶ್ಮೀರದ ಮಹಾರಾಜ ಹರಿ ಸಿಂಗ್ ವಿಲೀನ ಒಪ್ಪಂದಕ್ಕೆ ಸಹಿ ಹಾಕಿ ಅಧಿಕೃತವಾಗಿ ಭಾರತವನ್ನು ಸೇರಿಕೊಂಡರು. ಬಳಿಕ ಭಾರತೀಯ ಸೇನೆಯನ್ನು ತ್ವರಿತವಾಗಿ ಶ್ರೀನಗರಕ್ಕೆ ವಿಮಾನದಲ್ಲಿ ಸಾಗಿಸಲಾಯಿತು. ಪಾಕ್ ಆಕ್ರಮಿತರನ್ನು ಹಿಮ್ಮೆಟ್ಟಿಸಲು ಪ್ರತಿದಾಳಿ ನಡೆಯಿತು. ಬಾರಾಮುಲ್ಲಾ, ಉರಿ ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ಭೀಕರ ಯುದ್ಧ ನಡೆಯುತ್ತಿದ್ದಂತೆ 1948ರ ಜನವರಿ 1ರಂದು ಭಾರತವು ವಿಶ್ವಸಂಸ್ಥೆಯನ್ನು ಸಂಪರ್ಕಿಸಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸಿ ಕಾಶ್ಮೀರ ಕಣಿವೆ, ಲಡಾಖ್ ಸೇರಿದಂತೆ ಸುಮಾರು ಮೂರನೇ ಎರಡರಷ್ಟು ಪ್ರದೇಶದ ಮೇಲೆ ಭಾರತ ನಿಯಂತ್ರಣವನ್ನು ಪಡೆಯಿತು. ಉಳಿದ ಮೂರನೇ ಒಂದು ಭಾಗ ಪಾಕಿಸ್ತಾನಕ್ಕೆ ಸೇರಿತು. ಇದನ್ನು ಭಾರತ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಎಂದು ಕರೆಯುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರವು ಎರಡು ದೇಶಗಳ ನಡುವಿನ ಗಡಿ ನಿಯಂತ್ರಣ ರೇಖೆಯಾಗಿ ಗುರುತಿಸಲ್ಪಟ್ಟಿದೆ.

war1

ಆಪರೇಷನ್ ಜಿಬ್ರಾಲ್ಟರ್

1965ರ ಆಗಸ್ಟ್ 1965ರಲ್ಲಿ ಪಾಕಿಸ್ತಾನವು ಆಪರೇಷನ್ ಜಿಬ್ರಾಲ್ಟರ್ ಪ್ರಾರಂಭಿಸಿ ಭಾರತಕ್ಕೆ ಯುದ್ಧದ ಆಹ್ವಾನ ನೀಡಿತು. ನಾಗರಿಕರಂತೆ ವೇಷ ಧರಿಸಿದ ಸೈನಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ದಂಗೆ ಎಬ್ಬಿಸಿದರು. ಇದು ಎರಡನೇ ಭಾರತ- ಪಾಕಿಸ್ತಾನ ಯುದ್ಧಕ್ಕೆ ಕಾರಣವಾಯಿತು. ಈ ಯುದ್ಧವು ಕಾಶ್ಮೀರದಲ್ಲಿ ಮಾತ್ರವಲ್ಲದೆ ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ನಡೆಯಿತು. ಆದರೆ ಭಾರತೀಯ ಪಡೆಗಳು ಪ್ರಮುಖ ಸ್ಥಾನಗಳನ್ನು ಮರು ವಶಪಡಿಸಿಕೊಂಡು ಲಾಹೋರ್ ಕಡೆಗೆ ಪ್ರಯಾಣ ಮಾಡಿ ಯುದ್ಧದಲ್ಲಿ ಯಶಸ್ಸು ಸಾಧಿಸಿತ್ತು. ಬಳಿಕ ಸೋವಿಯತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಮಧ್ಯಸ್ಥಿಕೆಯಲ್ಲಿ 1965ರ ಸೆಪ್ಟೆಂಬರ್ ನಲ್ಲಿ ಕದನ ವಿರಾಮವನ್ನು ಘೋಷಿಸಲಾಯಿತು. 1966ರ ಜನವರಿಯಲ್ಲಿ ಸಹಿ ಹಾಕಲಾದ ತಾಷ್ಕೆಂಟ್ ಒಪ್ಪಂದವು ಎರಡೂ ರಾಷ್ಟ್ರಗಳು ಯುದ್ಧಪೂರ್ವ ಸ್ಥಾನಗಳಿಗೆ ಮರಳುವಂತೆ ಮಾಡಿತು.

ಈ ಯುದ್ಧದಲ್ಲಿ ಭಾರತವು ತನ್ನ ಮಿಲಿಟರಿ ಶಕ್ತಿ ಮತ್ತು ರಾಜಕೀಯ ಏಕತೆಯನ್ನು ಪ್ರದರ್ಶಿಸಿತ್ತು ಮತ್ತು ಪಾಕಿಸ್ತಾನ ನಾಯಕತ್ವದ ತಪ್ಪು ಲೆಕ್ಕಾಚಾರಗಳನ್ನು ಬಹಿರಂಗಪಡಿಸಿತ್ತು.

war3

ಬಾಂಗ್ಲಾದೇಶ ವಿಮೋಚನಾ ಯುದ್ಧ

1971ರ ಭಾರತ- ಪಾಕಿಸ್ತಾನ ಯುದ್ಧವು ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಪೂರ್ವ ಪಾಕಿಸ್ತಾನದಲ್ಲಿ 1970ರ ಸಾರ್ವತ್ರಿಕ ಚುನಾವಣೆಯಿಂದ ರಾಜಕೀಯ ಬಿಕ್ಕಟ್ಟು ಉಂಟಾಗಿ ಗಲಭೆ ಆರಂಭವಾಯಿತು. ಪರಿಣಾಮ 10 ಮಿಲಿಯನ್‌ಗಿಂತಲೂ ಹೆಚ್ಚು ಜನರು ಭಾರತಕ್ಕೆ ನಿರಾಶ್ರಿತರಾಗಿ ವಲಸೆ ಬಂದರು. ಇದನ್ನು ಹತ್ತಿಕ್ಕಲು ಭಾರತವು ಅಂತಿಮವಾಗಿ ಮಿಲಿಟರಿ ಬೆಂಬಲವನ್ನು ನೀಡಿತು. ಇದರಿಂದ ಪಾಕಿಸ್ತಾನವು 1971ರ ಡಿಸೆಂಬರ್ 3ರಂದು ಭಾರತೀಯ ವಾಯುನೆಲೆಗಳ ಮೇಲೆ ವಾಯುದಾಳಿಗಳನ್ನು ಪ್ರಾರಂಭಿಸಿತು. ಇದರ ಪರಿಣಾಮ ಭಾರತ ಯುದ್ಧವನ್ನು ಘೋಷಿಸಿಟ್ಟು.

1971ರ ಡಿಸೆಂಬರ್ 16ರಂದು, ಪಾಕಿಸ್ತಾನದ ಪೂರ್ವ ಕಮಾಂಡ್ ಢಾಕಾದಲ್ಲಿ ಭಾರತಕ್ಕೆ ಶರಣಾಯಿತು. ಇದರ ಪರಿಣಾಮವಾಗಿ ಬಾಂಗ್ಲಾದೇಶ ರಚನೆಯಾಯಿತು. 93,000ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಯುದ್ಧ ಕೈದಿಗಳಾಗಿ ತೆಗೆದುಕೊಳ್ಳಲಾಯಿತು. ಇದು ಎರಡನೇ ಮಹಾಯುದ್ಧದ ಅನಂತರದ ಅತಿದೊಡ್ಡ ಮಿಲಿಟರಿ ಶರಣಾಗತಿಯಾಗಿದೆ. 1972ರಲ್ಲಿ ಶಿಮ್ಲಾ ಒಪ್ಪಂದದೊಂದಿಗೆ ಯುದ್ಧ ಕೊನೆಯಾಯಿತು.

ಇದನ್ನೂ ಓದಿ: India Pakistan Ceasefire: ಭಾರತ- ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ; ಡೊನಾಲ್ಡ್‌ ಟ್ರಂಪ್‌ ಹೇಳಿಕೆ

war4

ಕಾರ್ಗಿಲ್ ಯುದ್ಧ

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ 1999ರಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರರು ನಿಯಂತ್ರಣ ರೇಖೆಯನ್ನು ದಾಟಿ ಆಪರೇಷನ್ ಬದ್ರ್ ಎಂಬ ಹೆಸರಿನಲ್ಲಿ ಭಾರತದ ಕೊನೆಯ ಎತ್ತರದ ಪರ್ವತ ಪ್ರದೇಶವನ್ನು ಆಕ್ರಮಿಸಿಕೊಂಡಾಗ ಯುದ್ಧ ಘೋಷಣೆ ಮಾಡಲಾಯಿತು. ಶ್ರೀನಗರವನ್ನು ಲೇಹ್‌ಗೆ ಸಂಪರ್ಕಿಸುವ ಹೆದ್ದಾರಿಯನ್ನು ಕಡಿತಗೊಳಿಸಿ ಆ ಮೂಲಕ ಲಡಾಖ್ ಅನ್ನು ಪ್ರತ್ಯೇಕಿಸುವುದು ಅವರ ಗುರಿಯಾಗಿತ್ತು.

1999ರ ಜುಲೈ 26ರ ವೇಳೆಗೆ ಭಾರತವು ಎಲ್ಲಾ ಆಕ್ರಮಿತ ಪ್ರದೇಶಗಳನ್ನು ಮರಳಿ ಪಡೆಯಿತು. ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗಿದ್ದರಿಂದ ಅದು ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಂಡಿತು. ಇಲ್ಲಿ ನಿಯಂತ್ರಣ ರೇಖೆಯನ್ನು ದಾಟದೆ ಸಂಯಮ ಪಾಲಿಸಿದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಬೆಂಬಲ ದೊರೆಯಿತು. ಇದು ಮತ್ತೊಮ್ಮೆ ಭಾರತದ ಮಿಲಿಟರಿ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿತ್ತು.