ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indigo Flight Issues: ಇಂಡಿಗೋ ಅವ್ಯವಸ್ಥೆಗೆ ಪ್ರಯಾಣಿಕರ ಹಿಡಿಶಾಪ; ಕಣ್ಣೀರಿಡುತ್ತಿರುವ ವಿಡಿಯೋ ವೈರಲ್‌

ಶುಕ್ರವಾರ ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗಿದೆ. ಪ್ರಯಾಣಿಕರು ನಿಲ್ದಾಣದಲ್ಲೇ ಕಣ್ಣೀರಾಕುತ್ತಾ ಪರದಾಡಿದ್ದು, ವಿಮಾನಯಾನ ಸಿಬ್ಬಂದಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಂಡಿಗೋ ವಿಮಾನ ರದ್ದತಿಯಿಂದ ವಿಮಾನ ನಿಲ್ದಾಣದಲ್ಲಿ ಉಂಟಾಗಿದ್ದ ಅವ್ಯವಸ್ಥೆಯ ನಡುವೆ ಸರ್ಕಾರ ಮಧ್ಯಪ್ರವೇಶಿಸಿ ಇತ್ತೀಚಿಗೆ ಜಾರಿ ಮಾಡಲಾಗಿದ್ದ ವಿಮಾನ ಕರ್ತವ್ಯ ಸಮಯ ಮಿತಿಗಳು (ಎಫ್‌ಡಿಟಿಎಲ್)‌ ನಿಯಮಗಳ ನಿಬಂಧನೆಯನ್ನು ಹಿಂತೆಗೆದುಕೊಂಡಿತು.

ಇಂಡಿಗೋ ಅವ್ಯವಸ್ಥೆಗೆ ಪ್ರಯಾಣಿಕರ ಹಿಡಿಶಾಪ

ಸಂಗ್ರಹ ಚಿತ್ರ -

Vishakha Bhat
Vishakha Bhat Dec 6, 2025 3:11 PM

ಮುಂಬೈ: ಶುಕ್ರವಾರ ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಅಡಚಣೆ ಉಂಟಾಗಿದೆ. ಈ ವೇಳೆ ವಿಮಾನಕ್ಕಾಗಿ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲಿ ಕಾದು ಹತಾಶರಾಗಿದ್ದಾರೆ. ಇನ್ನೂ ಕೆಲವರು ನಿಲ್ದಾಣದಲ್ಲೇ ಕಣ್ಣೀರಾಕಿದ್ದು, ಕೆಲವು ಕಡೆ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಘರ್ಷಣೆಗಳಾಗಿವೆ ಎನ್ನಲಾಗಿದೆ. ಈ ನಡುವೆ ವಿಮಾನಯಾನ ಸಂಸ್ಥೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದು ಮಾಹಿತಿ ನೀಡಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಗಂಟೆಗಟ್ಟಲೆ ವಿಮಾನಕ್ಕಾಗಿ ಕಾಯ್ದ ಬಳಿಕ ವಿಮಾನ ವಿಳಂಬದ ಕುರಿತು ಮಾಹಿತಿ ಪಡೆಯಲು ವಿಮಾನ ಸಂಸ್ಥೆಯ ಕೌಂಟರ್‌ಗಳ ಮೆಲೆ ಕೂಗುತ್ತಾ ಜೋರು ಗಲಾಟೆ ಮಾಡಿರುವುದರಿಂದ ನಿಲ್ದಾಣದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ವೇಳೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಂಡಿಗೋ ಸಿಬ್ಬಂದಿ ಹೇಳಿದರೂ, ಪ್ರಯಾಣಿಕರು ಕೋಪ ತಾಳದೆ ವಿಮಾನಯಾನ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇಂಡಿಗೋ ವಿಮಾನ ರದ್ದತಿಯಿಂದ ವಿಮಾನ ನಿಲ್ದಾಣದಲ್ಲಿ ಉಂಟಾಗಿದ್ದ ಅವ್ಯವಸ್ಥೆಯ ನಡುವೆ ಸರ್ಕಾರ ಮಧ್ಯಪ್ರವೇಶಿಸಿ ಇತ್ತೀಚಿಗೆ ಜಾರಿ ಮಾಡಲಾಗಿದ್ದ ವಿಮಾನ ಕರ್ತವ್ಯ ಸಮಯ ಮಿತಿಗಳು (ಎಫ್‌ಡಿಟಿಎಲ್)‌ ನಿಯಮಗಳ ನಿಬಂಧನೆಯನ್ನು ಹಿಂತೆಗೆದುಕೊಂಡಿತು. ಜುಲೈ 1 ರಿಂದ ಜಾರಿಗೆ ಬಂದ ಈ ನಿಬಂಧನೆಯಲ್ಲಿ ವಾರದ ವಿಶ್ರಾಂತಿಯನ್ನು ರಜೆಯೊಂದಿಗೆ ಬದಲಿಸುವುದಿಲ್ಲ ಎಂದು ಆದೇಶಿಸಿದ್ದು, ವಿಮಾನಯಾನ ಸಂಸ್ಥೆಗಳು ಸಿಬ್ಬಂದಿ ಲಭ್ಯತೆಯನ್ನು ಬಿಗಿಗೊಳಿಸಿವೆ ಎಂದು ಹೇಳಲಾಗಿದೆ.



ಭುಗಿಲೆದ್ದ ಪ್ರಯಾಣಿಕರ ಆಕ್ರೋಶ:

ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಆರಂಭಿಸುವುದನ್ನೇ ಎದುರು ನೋಡುತ್ತಾ ಕುಳಿತಿದ್ದ ಪ್ರಯಾಣಿಕರೊಬ್ಬರು ಕಾದು, ಕಾದು ಕೋಪಗೊಂಡು, "ನನ್ನ ವಿಮಾನ ರದ್ದಾಗಿದೆ. ಸಿಬ್ಬಂದಿ ಹೊಸ ಟಿಕೆಟ್‌ ಅಥವಾ ಹಣವನ್ನು ಮರುಪಾವತಿ ಮಾಡುವ ಆಯ್ಕೆ ನೀಡಿದರು. ನಾನು ಮರು ಪಾವತಿ ಮಾಡಿ ಎಂದು ಹೇಳಿದೆ. ಆದರೆ, ಅವರು ಬದಲಾಗಿ ಮತ್ತೊಂದು ಟಿಕೆಟ್‌ ನೀಡಿದರು. ಈಗ ಅದನ್ನು ಕೂಡ ರದ್ದುಗೊಳಿಸಲಾಗಿದೆ. ನಾವು ಸತತ 17 ಗಂಟೆಗಳಿಂದ ಇಲ್ಲಿ ಕಾಯುತ್ತಿದ್ದೇವೆ. ಎರಡೂ ಟಿಕೆಟ್‌ ರದ್ದಾಗಿದ್ದು, ಇದೀಗ ಮೂರನೆಯ ಟಿಕೆಟ್‌ ಕೂಡ ರದ್ದಾಗಿದೆ," ಎಂದು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

ಅಹಮದಾಬಾದ್‌ನಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತೊಂದು ಸುತ್ತಿನ ಪರದಾಟ ನಡೆಸಿದ್ದಾರೆ. ಸುಮಾರು ಹೊತ್ತು ಕಾಯ್ದು ವಿಮಾನ ರದ್ದಾದ ಕಾರಣ ಮಹಿಳೆಯೊಬ್ಬರು ನಿಲ್ದಾಣದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಪ್ರಯಾಣಿಕರು ಸಿಬ್ಬಂದಿಯವರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯ ಅವ್ಯವಸ್ಥೆ ಮತ್ತು ಪ್ರಯಾಣಿಕರ ಹತ್ತಿರ ಕಳಪೆ ಸಂವಹನ ಎನ್ನಲಾಗುತ್ತಿದೆ.

ಇಂಡಿಗೋ ಸಂಸ್ಥೆ ಸಿಇಒ ಪ್ರತಿಕ್ರಿಯೆ:

ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಉಂಟಾದ ಅವ್ಯವಸ್ಥೆಯ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಸಿಇಒ ಎಲ್ಬರ್ಸ್‌ ಆಡಚಣೆಯಿಂದಾಗಿ ಪ್ರಯಾಣಿಕರಿಗೆ ಉಂಟಾದ ತೊಂದರೆಗಳನ್ನು ಒಪ್ಪಿಕೊಂಡಿದ್ದಾರೆ. ಸಂಸ್ಥೆಯ ಕಾರ್ಯಾಚರಣೆ ಪುನಃ ಸಹಜ ಸ್ಥಿತಿಗೆ ಮರಳಲು ಕನಿಷ್ಠ 10 ದಿನಗಳು ಬೇಕಾಗಬಹುದು. ಶುಕ್ರವಾರ 1000ಕ್ಕೂ, ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಇದರಿಂದಾಗಿ ಕೆಲವು ಕಡೆ ಅವ್ಯವಸ್ಥೆ ಉಂಟಾಗಿದೆ ಎಂದು ಅವರು ಹೇಳಿದರು.