ಮಕ್ಕಳಿಲ್ಲದವರನ್ನು ಗರ್ಭಿಣಿಯಾಗಿಸಲು 10 ಲಕ್ಷ ರುಪಾಯಿ ಆಫರ್; ಅಮಾಯಕ ಮಹಿಳೆಯರು, ಪುರುಷರೇ ಟಾರ್ಗೆಟ್
Cyber crime: ಅಮಾಯಕ ಮಹಿಳೆಯರು ಹಾಗೂ ಪುರುಷರನ್ನು ಟಾರ್ಗೆಟ್ ಮಾಡಿಕೊಂಡಿರುವ ಗುಂಪೊಂದು ದೇಶದಲ್ಲಿ ಸಕ್ರಿಯವಾಗಿದೆ. ಮಹಿಳೆಯನ್ನು ಗರ್ಭಿಣಿ ಮಾಡಲು 10 ಲಕ್ಷ ರುಪಾಯಿ ಆಫರ್ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣದ ಆಮಿಷವೊಡ್ಡಿ ಜನರನ್ನು ವಂಚಿಸಲಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಾಗೂ ತ್ವರಿತ ಹಣ ಗಳಿಸುವ ಕನಸು ಕಾಣುತ್ತಿರುವ ಜನರನ್ನು ಈ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು.
ಸಾಂದರ್ಭಿಕ ಚಿತ್ರ -
ಪಾಟ್ನಾ, ಜ. 11: ದೇಶವೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಬಿಹಾರದಲ್ಲಿ (Bihar) ನಡೆದಿದೆ. ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯಾಗಿಸುವ ಆಮಿಷ ಒಡ್ಡಿ ಭಾರತದಾದ್ಯಂತ ನೂರಾರು ಪುರುಷರನ್ನು ವಂಚಿಸುತ್ತಿದ್ದ ಗ್ಯಾಂಗ್ ಅನ್ನು ನವಾಡಾ ಜಿಲ್ಲೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ಭರ್ಜರಿ ಮೊತ್ತದ ಹಣ ನೀಡುವುದಾಗಿ ಸುಳ್ಳು ಭರವಸೆಗಳನ್ನು ನೀಡಿದ ಈ ಹಗರಣವು ನವಾಡಾದ ಸೈಬರ್ ಸೆಲ್ (cyber crime)ನ ತನಿಖೆಯ ನಂತರ ಬೆಳಕಿಗೆ ಬಂದಿತು.
ಮಕ್ಕಳಿಲ್ಲದ ದಂಪತಿಯ ಭಾವನೆಗಳು ಮತ್ತು ಅಗತ್ಯಗಳನ್ನು ಗುರಿಯಾಗಿಸಿಕೊಂಡು ಅಖಿಲ ಭಾರತ ಗರ್ಭಧಾರಣೆಯ ಉದ್ಯೋಗ ಸೇವೆ ಎಂಬ ಹೆಸರಿಟ್ಟುಕೊಂಡು ವಂಚಕರು ವಂಚಿಸುತ್ತಿದ್ದರು. ಯುವ ಜನರಿಗೆ ಕರೆ ಮಾಡಿದ ವಂಚಕರು ಮಗು ಹೆರದ ಮಹಿಳೆಯರಿಗೆ ಗರ್ಭ ಧರಿಸುವ ತಂತ್ರ ತಮ್ಮ ಬಳಿ ಇದೆ ಎಂದು ಹೇಳಿಕೊಳ್ಳುತ್ತಿದ್ದರು. ಮಕ್ಕಳಿಲ್ಲದ ಮಹಿಳೆಗೆ ಗರ್ಭ ಧರಿಸಲು ಸಹಾಯ ಮಾಡಿದವರಿಗೆ ಪ್ರತಿಯಾಗಿ 10 ಲಕ್ಷ ರುಪಾಯಿವರೆಗೆ ಕೊಡುವುದಾಗಿ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ಅನೇಕ ಜನರು ಈ ಬಲೆಗೆ ಬಿದ್ದು ನೋಂದಣಿ ಶುಲ್ಕವನ್ನು ಪಾವತಿಸಿದ್ದರು ಎನ್ನಲಾಗಿದೆ.
ಸೈಬರ್ ಕ್ರೈಮ್ ಹೊಸ ತಂತ್ರ.. ಸೈಲೆಂಟ್ ಕಾಲ್ ಮೂಲಕವೂ ವಂಚಿಸ್ತಾರೆ ಎಚ್ಚರ
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಾಗೂ ತ್ವರಿತ ಹಣ ಗಳಿಸುವ ಕನಸು ಕಾಣುತ್ತಿರುವ ಜನರನ್ನು ಈ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು. ಫೋನ್‍ನಲ್ಲಿ ಬರೀ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ನಂಬಿಸಿದ್ದರು. ಇದನ್ನು ನಂಬಿದ ಹಲವರು ನೋಂದಣಿ ಶುಲ್ಕ ಪಾವತಿಸಿದರು. ಈ ಮೂಲಕ ವಂಚಕರು ನೋಂದಣಿ ಶುಲ್ಕದ ಹೆಸರಿನಲ್ಲಿ ಲಕ್ಷ-ಲಕ್ಷ ರುಪಾಯಿ ವಂಚಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಸೈಬರ್ ವಂಚನೆ ಬಗ್ಗೆ ನವಾಡಾ ಪೊಲೀಸರಿಗೆ ಸುಳಿವು ಸಿಕ್ಕಿದೆ. ವಿಷಯ ತಿಳಿದ ಕೂಡಲೇ, ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧಿಮಾನ್ ಅವರ ನಿರ್ದೇಶನದಲ್ಲಿ ತಂಡವನ್ನು ರಚಿಸಲಾಯಿತು. ಖಚಿತ ಮಾಹಿತಿಯ ಮೇರೆಗೆ ಮನ್ವಾ ಗ್ರಾಮದ ಮನೆಯೊಂದರ ಮೇಲೆ ತನಿಖಾಧಿಕಾರಿಗಳು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬಾತ ಅಪ್ರಾಪ್ತ ವಯಸ್ಕನಾಗಿದ್ದರೆ, ಮತ್ತೊಬ್ಬನನ್ನು ರಂಜನ್ ಕುಮಾರ್ ಎಂದು ಗುರುತಿಸಲಾಗಿದೆ.
ಎಂಜಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಸೈಬರ್ ಕ್ರೈಂ.... ಇವ್ರು ಕೊಳ್ಳೆ ಹೊಡೆದಿದ್ದು ಎಷ್ಟು ಗೊತ್ತಾ?
ಆರೋಪಿಗಳನ್ನು ಬಂಧಿಸಿ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಹಲವು ವಿಚಾರಗಳನ್ನು ಅವರು ಬಾಯ್ಬಿಟ್ಟಿದ್ದಾರೆ. ಆಲ್ ಇಂಡಿಯಾ ಪ್ರೆಗ್ನೆನ್ಸಿ ಜಾಬ್ಸ್ ಸೋಗಿನಲ್ಲಿ ಜನರಿಗೆ ಕರೆ ಮಾಡಿ ವಂಚಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪುರುಷರುವ ಮಾತ್ರವಲ್ಲ ಮಕ್ಕಳಿಲ್ಲದ ಗರ್ಭಿಣಿಯರು ಕೂಡ ಹಣ ಕಳೆದುಕೊಂಡಿದ್ದಾರೆ. ಅವರ ವಿಶೇಷ ತಂತ್ರಗಳು ಗರ್ಭ ಧಾರಣೆಗೆ ಕಾರಣವಾಗಬಹುದು ಎಂದು ಮಹಿಳೆಯರು ನಂಬಿದ್ದರು. ಹೀಗಾಗಿ ಕಂತುಗಳಲ್ಲಿ ಅವರು ಹಣ ಪಾವತಿ ಮಾಡಿದ್ದರು. ವಂಚನೆಗೊಳಗಾಗಿರುವುದು ಗೊತ್ತಾದ ಬಳಿಕವೂ ಪೊಲೀಸರಿಗೆ ದೂರು ನೀಡಲೂ ಅವರು ಹಿಂಜರಿದಿದ್ದಾರೆ ಎನ್ನಲಾಗಿದೆ.
ಇನ್ನು ಈ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.