ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

International WomensDay: ಮಾರ್ಚ್‌ 8 ಮಹಿಳಾ ದಿನಾಚರಣೆ: ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್ ಇಲ್ಲಿದೆ

ಪ್ರತಿ ವರ್ಷ ಮಾರ್ಚ್‌ 8ರಂದು ಆಚರಿಸುವ ಅಂತರರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆಗಳನ್ನು ಗೌರವಿಸುವ ಹಾಗೂ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ದಿನವಾಗಿದೆ. ಈ ದಿನದ ಇತಿಹಾಸ, ಆಚರಣೆಯ ಉದ್ದೇಶ ಮತ್ತು 2026ರ ಥೀಮ್ ಕುರಿತು ಮಾಹಿತಿ ನೀಡಲಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನ: ಮಾರ್ಚ್‌ 8ರ ಮಹತ್ವವೇನು..?

ಮಹಿಳಾ ದಿನಾಚರಣೆ -

Profile
Sushmitha Jain Mar 8, 2026 8:42 AM

ಬೆಂಗಳೂರು: ಜಗತ್ತಿನಾದ್ಯಂತ ಪ್ರತಿವರ್ಷ ಮಾರ್ಚ್‌ 8 ರಂದು ಅಂದರೆ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರ ಸಾಧನೆಗಳನ್ನು ಕೊಂಡಾಡಲು, ಸಮಾಜದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಲು ಹಾಗೂ ಲಿಂಗ ಸಮಾನತೆ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ವಿಶ್ವದಾದ್ಯಂತ ಅನೇಕ ಮಹಿಳೆಯರು ವೈಯಕ್ತಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ನಿರಂತರವಾಗಿ ಸಾಧನೆಗಳನ್ನು ಮಾಡುತ್ತಾ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಅವರು ವಿವಿಧ ಕ್ಷೇತ್ರಗಳಲ್ಲಿ ಮೆಚ್ಚುಗೆ ಗಳಿಸುತ್ತಿದ್ದಾರೆ. ಇಂತಹ ಮಹಿಳಾ ಸಾಧಕರನ್ನು ಗುರುತಿಸಿ ಗೌರವಿಸುವುದಕ್ಕಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸ, ಅದರ ಆಚರಣೆಯ ಉದ್ದೇಶ ಹಾಗೂ ಈ ವರ್ಷದ ಥೀಮ್ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಹಿಳಾ ದಿನದ ಇತಿಹಾಸ

ಅಂತಾರಾಷ್ಟ್ರೀಯ ಮಹಿಳಾ ದಿನದ ಮೂಲವು 20ನೇ ಶತಮಾನದ ಆರಂಭದ ಕಾರ್ಮಿಕ ಚಳುವಳಿಗಳಲ್ಲಿ ಕಾಣಬಹುದು. 1908ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಗಾರ್ಮೆಂಟ್ ಕಾರ್ಮಿಕ ಮಹಿಳೆಯರು ಕೆಲಸದ ಪರಿಸ್ಥಿತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಇದರ ಸ್ಮರಣಾರ್ಥವಾಗಿ 1909ರ ಫೆಬ್ರವರಿ 28ರಂದು ಅಮೆರಿಕಾದ ಸಮಾಜವಾದಿ ಪಕ್ಷ ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು.

ನಂತರ 1910ರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹ್ಯಾಗನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಜರ್ಮನಿಯ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಲ್ಪನೆಯನ್ನು ಮುಂದಿಟ್ಟರು. ಈ ಪ್ರಸ್ತಾಪಕ್ಕೆ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಸರ್ವಾನುಮತದಿಂದ ಒಪ್ಪಿಗೆ ನೀಡಿದರು. ಅದರ ಫಲವಾಗಿ 1911ರಲ್ಲಿ ಯುರೋಪಿನ ಹಲವು ದೇಶಗಳಲ್ಲಿ ಮೊದಲ ಬಾರಿ ಮಹಿಳಾ ದಿನವನ್ನು ಆಚರಿಸಲಾಯಿತು.

ಮಹಿಳಾ ದಿನದ ಮಹತ್ವ

ಅಂತಾರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಕುರಿತು ಮಹತ್ವದ ಸಂದೇಶವನ್ನು ನೀಡುತ್ತದೆ. ವಿಶ್ವದಾದ್ಯಂತ ಮಹಿಳೆಯರು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಾಧಿಸಿರುವ ಯಶಸ್ಸುಗಳನ್ನು ಗೌರವಿಸುವುದಕ್ಕೆ ಈ ದಿನ ವೇದಿಕೆಯಾಗಿದೆ. ಇದು ಕೇವಲ ಆಚರಣೆಯ ದಿನವಲ್ಲ, ಮಹಿಳಾ ಸಬಲೀಕರಣ ಮತ್ತು ಸಮಾನ ಹಕ್ಕುಗಳಿಗಾಗಿ ಒಗ್ಗಟ್ಟಿನ ಕರೆ ಕೂಡ ಆಗಿದೆ.

International Women's Day 2026: ಅಂತಾರಾಷ್ಟ್ರೀಯ ಮಹಿಳಾ ದಿನ; ನಾಡಿನ ಮಹಿಳೆಯರಿಗೆ ಶುಭಾಶಯ ಕೋರಿದ ಲಕ್ಷ್ಮಿ ಹೆಬ್ಬಾಳ್ಕರ್

2026ರ ಮಹಿಳಾ ದಿನದ ಥೀಮ್

2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಥೀಮ್ “ಗಿವ್ ಟು ಗೇನ್” (Give to Gain) ಆಗಿದೆ. ಪರಸ್ಪರ ಸಹಕಾರ, ಜ್ಞಾನ ಹಂಚಿಕೆ ಮತ್ತು ಒಗ್ಗಟ್ಟಿನ ಮೂಲಕ ಮಹಿಳೆಯರ ಸಬಲೀಕರಣವನ್ನು ಬಲಪಡಿಸುವುದು ಈ ಥೀಮ್‌ನ ಉದ್ದೇಶವಾಗಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ ಸಮಾನತೆಯತ್ತ ಸಾಗುವ ಸಂದೇಶವನ್ನು ಇದು ನೀಡುತ್ತದೆ.

ವಿಶ್ವಸಂಸ್ಥೆಯ ಘೋಷಣೆ

ಈ ವರ್ಷದ ವಿಶ್ವಸಂಸ್ಥೆಯ ಘೋಷಣೆ “ಹಕ್ಕುಗಳು, ನ್ಯಾಯ ಮತ್ತು ಕ್ರಿಯೆ – ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ” ಎಂಬುದಾಗಿದೆ. ಮಹಿಳೆಯರ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಲಿಂಗ ಸಮಾನತೆಯನ್ನು ಸಾಧಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಮಾರ್ಚ್ 8ರ ಅಂದೇ ಆಚರಣೆ ಯಾಕೆ?

ಆರಂಭದಲ್ಲಿ ಮಹಿಳಾ ದಿನಾಚರಣೆಗೆ ನಿಶ್ಚಿತ ದಿನ ಇರಲಿಲ್ಲ. ಆದರೆ 1917ರಲ್ಲಿ ರಷ್ಯಾದ ಮಹಿಳೆಯರು ಆಹಾರ ಮತ್ತು ಶಾಂತಿಗಾಗಿ ನಾಲ್ಕು ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಇದರ ಪರಿಣಾಮವಾಗಿ ಸರ್ಕಾರ ರಾಜೀನಾಮೆ ನೀಡಿತು ಹಾಗೂ ಮಹಿಳೆಯರಿಗೆ ಮತದಾನದ ಹಕ್ಕು ದೊರೆಯಿತು.

ಅಂದು ರಷ್ಯಾದಲ್ಲಿ ಬಳಸುತ್ತಿದ್ದ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಪ್ರತಿಭಟನೆ ಫೆಬ್ರವರಿ 23ರಂದು ಆರಂಭವಾಗಿತ್ತು. ಆದರೆ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಅದು ಮಾರ್ಚ್ 8ಕ್ಕೆ ಸರಿಹೊಂದಿತು. ಈ ಹಿನ್ನೆಲೆಯಲ್ಲಿ ಮಾರ್ಚ್ 8ನ್ನು ಅಂತರರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸುವ ಪದ್ಧತಿ ಆರಂಭವಾಯಿತು.