70 ಲಕ್ಷ ರುಪಾಯಿ ಲಂಚ, ಸಂದರ್ಶನದಲ್ಲೂ ಪ್ರಭಾವ; ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ನೇಮಕಾತಿ ಅಕ್ರಮ ಒಂದೊಂದಾಗಿ ಬಯಲಿಗೆ
JPSC Exam Scam: ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಬಂಧಿತ ಆರೋಪಿಯೋರ್ವ ನೇಮಕಾತಿ ದಂಧೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯದ ಅಪರಾಧ ತನಿಖಾ ಇಲಾಖೆ ಇದುವರೆಗೆ 20 ಜನರನ್ನು ಬಂಧಿಸಿದೆ.
ಜಾರ್ಗಂಡ್ ಉದ್ಯೋಗ ನೇಮಕಾತಿಯಲ್ಲಿ ಅಕ್ರಮ ಎಸಗಿದ ಅಧಿಕಾರಿಗಳು (ಸಂಗ್ರಹ ಚಿತ್ರ) -
ರಾಂಚಿ, ಆ. 13: ಜಾರ್ಖಂಡ್ (Jharkhand) ಸಾರ್ವಜನಿಕ ಸೇವಾ ಆಯೋಗದ ನೇಮಕಾತಿ ಪರೀಕ್ಷೆಗಳಲ್ಲಿ (JPSC Exam Scam) ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಬಂಧಿತ ಆರೋಪಿಯೊಬ್ಬ ನೇಮಕಾತಿ ದಂಧೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಇತ್ತೀಚಿನ ಜೆಪಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜಾರ್ಖಂಡ್ ವಿದ್ಯಾರ್ಥಿಗಳು ಕೆಲವು ವಾರಗಳಿಂದ ರಾಂಚಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯದ ಅಪರಾಧ ತನಿಖಾ ಇಲಾಖೆ (CID) ಇದುವರೆಗೆ 20 ಜನರನ್ನು ಬಂಧಿಸಿದೆ.
ಪರೀಕ್ಷೆಗಳನ್ನು ನಡೆಸಿದ ಸಂಸ್ಥೆಯಾದ ಟಿಡಿಪಿಎಲ್‌ನ ಬಂಧಿತ ಮಾರ್ಕೆಟಿಂಗ್ ಮ್ಯಾನೇಜರ್ ಅಭಯ್ ತಿವಾರಿ, ಸಿಐಡಿ ಮುಂದೆ ಸಂಪೂರ್ಣ ಹಗರಣವನ್ನು ಬಯಲು ಮಾಡಿದ್ದಾನೆ ಎಂದು ಹೇಳಲಾಗಿದೆ. ಟಿಡಿಪಿಎಲ್ ನಿರ್ದೇಶಕ ರಾಮವೀರ್ ಸಿಂಗ್, ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ಟೆ, ಆಯೋಗದ ಸದಸ್ಯರಾದ ಡಾ. ಅಜಿತಾ ಭಟ್ಟಾಚಾರ್ಯ, ಡಾ. ಜಮಾಲ್ ಅಹ್ಮದ್ ಮತ್ತು ಡಾ. ಅನಿಮಾ ಹಸ್ದಾ ಸೇರಿ ಉನ್ನತ ಅಧಿಕಾರಿಗಳು ಅಕ್ರಮ ಜಾಲದಲ್ಲಿ ಭಾಗಿಯಾಗಿದ್ದರು ಎಂದು ತಿವಾರಿ ಹೇಳಿದ್ದಾನೆ. ಆ ಮೂಲಕ ಬೃಹತ್ ಜಾಲದ ವಿವರ ಎಳೆ ಎಳೆಯಾಗಿ ಬಯಲಾಗುತ್ತಿದೆ.
ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳನ್ನು ಅಧಿಕಾರಿಗಳ ಬಳಿ ಕಳುಹಿಸಲಾಗುತ್ತಿತ್ತು ಎಂದು ತಿವಾರಿ ಸಿಐಡಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಆದಿತ್ಯ ಪಾಂಡೆ ಎಂಬ ಏಜೆಂಟ್ ಉದ್ಯೋಗಾಕಾಂಕ್ಷಿಗಳನ್ನು ಟಿಡಿಪಿಎಲ್ ನಿರ್ದೇಶಕ ರಾಮ್‌ವೀರ್ ಸಿಂಗ್‌ಗೆ ಪರಿಚಯಿಸುತ್ತಿದ್ದ. ನಂತರ ಆತ ಅವರನ್ನು ಆಯೋಗದ ಸದಸ್ಯರ ಬಳಿಗೆ ಕಳುಹಿಸುತ್ತಿದ್ದ. ಸಂದರ್ಶನ ಮಂಡಳಿಯ ಮೇಲೆ ಪ್ರಭಾವ ಬೀರುವ ಮೂಲಕ ಅಭ್ಯರ್ಥಿಗಳ ಅಂತಿಮ ಅಂಕಗಳನ್ನು ಹೆಚ್ಚಿಸಲು ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ ವಿದ್ಯಾರ್ಥಿ ಪ್ರತಿಭಟನೆ ನಿರ್ಲಕ್ಷಿಸಿದ ಮಲ್ಲಿಕಾರ್ಜುನ ಖರ್ಗೆ; ಭುಗಿಲೆದ್ದ ಆಕ್ರೋಶ
ತಿವಾರಿ ಹೇಳಿಕೆಯ ಪ್ರಕಾರ, ಪರೀಕ್ಷಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳಿಂದ ಬೇರೆ ಬೇರೆ ಮೊತ್ತದ ಹಣವನ್ನು ವಸೂಲಿ ಮಾಡಲಾಗುತ್ತಿತ್ತು. ಆಯ್ಕೆಯ ಬೋರ್ಡ್‌ನಲ್ಲಿ ಸಂದರ್ಶನವನ್ನು ಹೊಂದಿಸಲು ಏಜೆಂಟ್‌ಗಳು ಮತ್ತು ಅಧಿಕಾರಿಗಳು ಅಭ್ಯರ್ಥಿಯೊಬ್ಬರಿಂದ ಗರಿಷ್ಠ 15 ಲಕ್ಷ ರುಪಾಯಿ ಪಡೆದಿದ್ದರು.
12ನೇ ಮತ್ತು 13ನೇ ಜೆಪಿಎಸ್‌ಸಿ ಪರೀಕ್ಷೆಗಳ ಸಂದರ್ಭದಲ್ಲಿ, ಅಭ್ಯರ್ಥಿಯ ಆಯ್ಕೆಯ ವೇಳೆಗೆ ಆ ವ್ಯಕ್ತಿಯಿಂದ ವಸೂಲಿ ಮಾಡಲಾಗುತ್ತಿದ್ದ ಒಟ್ಟು ಮೊತ್ತ 60 ಲಕ್ಷ ರುಪಾಯಿಯಿಂದ 70 ಲಕ್ಷ ರುಪಾಯಿ ಎಂದು ತಿವಾರಿ ಸಿಐಡಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಆಯ್ಕೆಯಾದವರ ವಿವರ
ತಮ್ಮ ಹೇಳಿಕೆಯಲ್ಲಿ, ಅಭಯ್ ತಿವಾರಿ ಈ ದಂಧೆಯ ಮೂಲಕ ಉದ್ಯೋಗಗಳಿಗೆ ಆಯ್ಕೆಯಾದ ಮೂವರು ಅಧಿಕಾರಿಗಳನ್ನು ಹೆಸರಿಸಿದ್ದಾರೆ: ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಸಿಂಗ್ ಮತ್ತು ಉಪ ಜೈಲರ್ ರಾಜೇಶ್ ಕುಮಾರ್ ರಜಕ್. ಕೊಡೆರ್ಮಾ ನಿವಾಸಿ ಲಾಲು ಯಾದವ್ ಈ ಮೂವರು ಅಭ್ಯರ್ಥಿಗಳಿಗೆ ಏಜೆಂಟ್ ಆಗಿ ಕೆಲಸ ಮಾಡಿದ್ದ ಎಂದು ತಿವಾರಿ ಸಿಐಡಿಗೆ ತಿಳಿಸಿದ್ದಾರೆ. ಲಾಲು ಯಾದವ್ ಅಭ್ಯರ್ಥಿಗಳನ್ನು ತನ್ನ ಬಳಿಗೆ ಕರೆತಂದಿದ್ದ. ನಂತರ ಟಿಡಿಪಿಎಲ್‌ನ ರಾಮ್‌ವೀರ್ ಸಿಂಗ್ ಸಂದರ್ಶನವನ್ನು ಅಜಿತಾ ಭಟ್ಟಾಚಾರ್ಯನನ್ನು ಒಳಗೊಂಡ ಮಂಡಳಿಯೊಂದಿಗೆ ನಿಗದಿಪಡಿಸಿದರು ಎಂದು ತಿವಾರಿ ವಿವರಿಸಿದ್ದಾನೆ
ಟಿಡಿಪಿಎಲ್ ಮತ್ತು ಜೆಪಿಎಸ್‌ಸಿ ಅಧಿಕಾರಿಗಳಲ್ಲದೆ, ಪರೀಕ್ಷಾ ನಿಯಂತ್ರಕಿ ಶ್ವೇತಾ ಗುಪ್ತಾ ಮತ್ತು ಪತಂಜಲಿ ಕೋಚಿಂಗ್ ಆಪರೇಟರ್ ರವಿ ಕುಮಾರ್ ಸೇರಿ ಇತರರು ಕೂಡ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಿದ್ದಾನೆ.