2026ರ ತಮಿಳುನಾಡು ಚುನಾವಣೆಯಿಂದ ಹೊರಗುಳಿದ ಕಮಲ್ ಹಾಸನ್; ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ
MNM opts out of polls: 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ನಟ-ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಆದರೆ ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ತಾದ ಬೆಂಬಲ ನೀಡುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.
ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಕಮಲ್ ಹಾಸನ್ ಬೆಂಬಲ -
ಚೆನ್ನೈ, ಮಾ.25: 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ (Tamil Nadu Polls) ಮುನ್ನ ಮಹತ್ವದ ಬೆಳವಣಿಗೆ ನಡೆದಿದೆ. ನಟ-ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರ ಮಕ್ಕಳ್ ನೀಧಿ ಮಯ್ಯಮ್ (MNM) ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಬದಲಾಗಿ ಡಿಎಂಕೆ (DMK) ನೇತೃತ್ವದ ಮೈತ್ರಿಕೂಟಕ್ಕೆ ಬೇಷರತ್ತಾದ ಬೆಂಬಲವನ್ನು ನೀಡಲಿದೆ.
ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು ಕ್ಷೇತ್ರ ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿ, ಮೈತ್ರಿ ಸಹಭಾಗಿಗಳ ನಡುವೆ ಕ್ಷೇತ್ರಗಳ ಹಂಚಿಕೆಯನ್ನು ಘೋಷಿಸಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಂದಿದೆ. ಡಿಎಂಕೆಯ ಉದಯಿಸುತ್ತಿರುವ ಸೂರ್ಯ ಚಿಹ್ನೆಯಡಿಯಲ್ಲಿ ಸ್ಪರ್ಧಿಸುವ ಪ್ರಸ್ತಾವನೆ ಮತ್ತು ನೀಡಲಾದ ಸ್ಥಾನಗಳ ಸಂಖ್ಯೆಯಿಂದ ಪಕ್ಷವು ತೃಪ್ತವಾಗಿಲ್ಲ ಎಂದು ಎಂಎನ್‌ಎಂ ಅಧ್ಯಕ್ಷ ಕಮಲ್ ಹಾಸನ್ ಹೇಳಿದ್ದಾರೆ.
ಪ್ರಸ್ತುತ ಸವಾಲಿನ ರಾಜಕೀಯ ಪರಿಸ್ಥಿತಿಯಲ್ಲಿ ನಮಗೆ ನೀಡಲಾದ ಸ್ಥಾನಗಳ ಸಂಖ್ಯೆ ಹಾಗೂ ರೈಸಿಂಗ್ ಸನ್ ಚಿಹ್ನೆಯಡಿ ಸ್ಪರ್ಧಿಸುವಂತೆ ನೀಡಿದ ಸಲಹೆ ನನಗೂ, ಮಕ್ಕಳ್ ನೀಧಿ ಮಯ್ಯಮ್ ಸದಸ್ಯರಿಗೂ ಸ್ವೀಕಾರಾರ್ಹವಲ್ಲ ಎಂದು ಕಮಲ್ ಹಾಸಲ್ ಹೇಳಿದ್ದಾರೆ.
ಚುನಾವಣಾ ಕಣದಿಂದ ದೂರವಿರಲು ಪಕ್ಷವು ಸ್ಪಷ್ಟ ನಿಲುವನ್ನು ತೆಗೆದುಕೊಂಡಿದೆ. ಆದ್ದರಿಂದ, 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಕ್ಕಳ್ ನೀಧಿ ಮಯ್ಯಮ್ ನೇರವಾಗಿ ಸ್ಪರ್ಧಿಸುವುದಿಲ್ಲ ಎಂದು ನಾವು ಬಹಿರಂಗವಾಗಿ ಮತ್ತು ಸ್ಪಷ್ಟವಾಗಿ ಘೋಷಿಸುತ್ತೇವೆ. ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ತಾದ ಬೆಂಬಲವನ್ನು ನೀಡುತ್ತೇವೆ ಎಂದು ಕಮಲ್ ಹಾಸನ್ ಹೇಳಿದರು.
ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಹಾಸನ್, ಅವರ ಭಾವನೆಗಳು ಮತ್ತು ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ನೀವು ಪ್ರತಿಯೊಬ್ಬರೂ ನಿಸ್ವಾರ್ಥ ರಾಜಕೀಯದ ಉಜ್ವಲ ಉದಾಹರಣೆ. ಈ ನಿರ್ಧಾರವು ನಿಮ್ಮ ಭಾವನೆಗಳು ಮತ್ತು ನಿಮ್ಮ ನಂಬಿಕೆಗೆ ಗೌರವದ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.
ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಶೀಘ್ರದಲ್ಲೇ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭೇಟಿಯಾಗಿ ಅಭಿನಂದಿಸುವುದಾಗಿ ಹೇಳಿದರು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕಮಲ್ ಹಾಸನ್ ಅರಿವಲಯಂನಲ್ಲಿ ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಂ ಸ್ಪರ್ಧಿಸುವುದಿಲ್ಲ. ಆದರೆ ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ತಾದ ಬೆಂಬಲ ನೀಡುವುದಾಗಿ ತಿಳಿಸಿರುವುದಾಗಿ ಹೇಳಿದರು.
ಚುನಾವಣೆಯಲ್ಲಿ ಜಯಗಳಿಸಲು ಡಿಎಂಕೆ ಮತದಾರರಿಗೆ ಉಚಿತ ಪತ್ನಿಯರನ್ನೂ ಘೋಷಿಸಲಿದೆ; ವಿವಾದ ಹುಟ್ಟುಹಾಕಿದ ಎಐಎಡಿಎಂಕೆ ನಾಯಕ
ನಾವು ಎರಡು ರಾಜಕೀಯ ಪಕ್ಷಗಳ ನಾಯಕರಾಗಿ ಮಾತ್ರವಲ್ಲದೆ, ಉತ್ತಮ ಸ್ನೇಹಿತರಂತೆ ಮಾತುಕತೆ ನಡೆಸಿದ್ದು, ನಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು. ಇದು ತ್ಯಾಗವಲ್ಲ, ಕರ್ತವ್ಯ ಎಂಬುದಾಗಿ ಹೇಳಬಹುದು. ಆದರೆ ವಾಸ್ತವದಲ್ಲಿ, ಅವರು ಮಾಡಿದ್ದು ನಿಜಕ್ಕೂ ತ್ಯಾಗ ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಡಿಎಂಕೆ ಮೈತ್ರಿಕೂಟ ತನ್ನ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್ 28 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) 8, ದೇಶಿಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) 10 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (ಸಿಪಿಎಂ) ತಲಾ ಐದು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.