ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸತತ 2ನೇ ವರ್ಷ ಕೆಂಪುಕೋಟೆ ಸ್ವಾತಂತ್ರ್ಯೋತ್ಸವಕ್ಕೆ ಖರ್ಗೆ, ರಾಹುಲ್ ಗಾಂಧಿ ಗೈರು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸತತ ಎರಡನೇ ವರ್ಷವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೆಂಪುಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಸ್ವಾತಂತ್ರ್ಯೋತ್ಸವಕ್ಕೆ ಖರ್ಗೆ, ರಾಹುಲ್ ಗೈರು

ಮಲ್ಲಿಕಾರ್ಜುನ ಖರ್ಗೆ - ರಾಹುಲ್ ಗಾಂಧಿ -

Profile
Sushmitha Jain Aug 15, 2026 3:52 PM

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸತತ ಎರಡನೇ ವರ್ಷವೂ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೆಂಪುಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ (80th Independence Day) ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. 2024ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ಆಸನ ವ್ಯವಸ್ಥೆ ಮಾಡಿದ್ದ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನವಿದ್ದರೂ, ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಎರಡನೇ ಸಾಲಿನ ಕೊನೆಯ ಭಾಗದಲ್ಲಿ ಕೂರಿಸಲಾಗಿತ್ತು ಇದು ಸಂಪ್ರದಾಯ ಮತ್ತು ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ವಿರೋಧ ಪಕ್ಷವು ಈ ಆಸನ ವ್ಯವಸ್ಥೆಯನ್ನು ಕಾಂಗ್ರೆಸ್ ಹಾಗೂ ಜನರಿಗೆ ಮಾಡಿದ ಅವಮಾನ ಎಂದು ಟೀಕಿಸಿತ್ತು. ಆದರೆ ಕಾರ್ಯಕ್ರಮ ಆಯೋಜಿಸಿದ್ದ ರಕ್ಷಣಾ ಸಚಿವಾಲಯ, ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಆಸನ ಕಲ್ಪಿಸಲು ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿತ್ತು. ಶಿಷ್ಟಾಚಾರದ ಪ್ರಕಾರ, ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಮುಂಭಾಗದ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ.
ಈ ಬಾರಿ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಗೈರುಹಾಜರಿಯನ್ನು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ “ದುರದೃಷ್ಟಕರ” ಎಂದು ಹೇಳಿದ್ದಾರೆ.

ದೇಶಾದ್ಯಂತ ಇಂದು 80 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ಸತತ 13 ನೇ ಬಾರಿಗೆ ಧ್ವಜಾರೋಹಣ ಮಾಡಲಿರುವ ಪ್ರಧಾನಿ ಮೋದಿ

ಸಂಸತ್ ಅಧಿವೇಶನದಲ್ಲೂ ಹೆಚ್ಚಿದ ಸಂಘರ್ಷ

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಸಂಬಂಧಗಳು ಇತ್ತೀಚೆಗೆ ಮತ್ತಷ್ಟು ಹದಗೆಟ್ಟಿವೆ. ಗುರುವಾರ ಅಂತ್ಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸದನದ ಕಾರ್ಯನಿರ್ವಹಣೆ ಮತ್ತು ಉತ್ಪಾದಕತೆ ವಿಚಾರವಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದವು.
ಅಧಿವೇಶನದಲ್ಲಿ ಒಟ್ಟು 12 ಮಸೂದೆಗಳು ಅಂಗೀಕಾರಗೊಂಡಿದ್ದು, ಅವುಗಳಲ್ಲಿ ಒಂದಾದ ಪೇಪರ್ ಲೀಕ್ ವಿರೋಧಿ ಮಸೂದೆಯ ಕುರಿತು ಮಾತ್ರ ವಿಸ್ತೃತ ಚರ್ಚೆ ನಡೆಯಿತು.

ಅಧಿವೇಶನದ ಮೊದಲ ದಿನವಾದ ಜುಲೈ 20ರಂದು ವಿದ್ಯಾರ್ಥಿಗಳು ಸಂಸತ್ತಿನತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಘಟನೆಯೂ ರಾಜಕೀಯ ವಾತಾವರಣವನ್ನು ಮತ್ತಷ್ಟು ಬಿಸಿಗೊಳಿಸಿತ್ತು. ಅಧಿವೇಶನ ಮುಕ್ತಾಯಗೊಂಡ ಬಳಿಕ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಆಯೋಜಿಸಿದ್ದ ಸಾಂಪ್ರದಾಯಿಕ ಚಹಾ ಕೂಟವನ್ನೂ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಬಹಿಷ್ಕರಿಸಿದ್ದವು.