ಕೋಲ್ಕತ್ತಾದ ಪ್ರತಿಷ್ಠಿತ ಕಾಲೇಜಿನಲ್ಲಿ 1 ಕೋಟಿ ರುಪಾಯಿಗೂ ಅಧಿಕ ನಗದು ಪತ್ತೆ; ಬಯಲಾಯ್ತು ‘ರಹಸ್ಯ ಕೊಠಡಿ’, ಸಿಕ್ಕಿತು ಗನ್!
ಪಶ್ಚಿಮ ಬಂಗಾಳದ ಕೋಲ್ಕತ್ತಾ ಸುರೇಂದ್ರನಾಥ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯಾಚರಣೆ ವೇಳೆ ಗೆದ್ದಲು ತಿಂದ 1 ಕೋಟಿ ರುಪಾಯಿಗೂ ಅಧಿಕ ನಗದು ಎರಡು ಸೂಟ್‌ಕೇಸ್‌ಗಳಲ್ಲಿ ಪತ್ತೆಯಾಗಿದೆ. ಮರುದಿನ ಕಾಲೇಜಿನ ಮೇಲ್ಛಾವಣಿ ಬಳಿ ಎಸಿ, ಹಾಸಿಗೆ ಮತ್ತು ಆಧುನಿಕ ಶೌಚಾಲಯ ಹೊಂದಿದ್ದ ರಹಸ್ಯ ಕೊಠಡಿ ಪತ್ತೆಯಾಗಿದೆ. ಅಲ್ಲದೆ ಒಂದು ಗನ್ ಕೂಡ ಸಿಕ್ಕಿರುವುದಾಗಿ ವರದಿಯಾಗಿದೆ. ಹಣದ ಮೂಲ ಹಾಗೂ ಕೊಠಡಿಯ ಬಳಕೆ ಬಗ್ಗೆ ತನಿಖೆ ನಡೆಯುತ್ತಿದೆ.
ಕೋಲ್ಕತ್ತಾದ ಕಾಲೇಜು ಕ್ಯಾಂಪಸ್‌ನಲ್ಲಿ ಪತ್ತೆಯಾದ ನಗದು ಮತ್ತು ಗನ್ -
ನವದೆಹಲಿ, ಜೂ. 3: ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾದ ಪ್ರಸಿದ್ಧ ಸುರೇಂದ್ರನಾಥ ಕಾಲೇಜಿನಲ್ಲಿ (Surendranath College) ನಡೆದ ಎರಡು ಅಚ್ಚರಿಯ ಬೆಳವಣಿಗೆಗಳು ರಾಜ್ಯ ರಾಜಕೀಯ ಹಾಗೂ ಶಿಕ್ಷಣ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಕಾಲೇಜಿನ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಟಿಎಂಸಿಒಇ (TMCP)ಯ ಕೊಠಡಿಯಲ್ಲಿ1 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನಗದು ಪತ್ತೆಯಾದ ಬೆನ್ನಲ್ಲೇ, ಕಾಲೇಜಿನ ಮೇಲ್ಛಾವಣಿಯ ಬಳಿ ‘ರಹಸ್ಯ ಕೊಠಡಿ’ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಳೆಗಾಲ ಆರಂಭವಾಗುವ ಮುನ್ನ ಶಿಕ್ಷಣ ಸಂಸ್ಥೆಗಳನ್ನು ಸ್ವಚ್ಛಗೊಳಿಸುವಂತೆ ನಗರಾಡಳಿತ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿ ಸಂಘದ ಕೊಠಡಿಯಲ್ಲಿದ್ದ ಕಪಾಟನ್ನು ತೆರೆಯುವಾಗ ಎರಡು ಹಳೆಯ ಸೂಟ್‌ಕೇಸ್‌ಗಳು ಪತ್ತೆಯಾಗಿವೆ. ಸೂಟ್‌ಕೇಸ್‌ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ 100 ರುಪಾಯಿ ಹಾಗೂ 500 ರುಪಾಯಿ ಮುಖಬೆಲೆಯ ನೋಟುಗಳ ಕಂತೆಗಳು ಕಂಡುಬಂದಿವೆ.
ಆದರೆ ಬಹುತೇಕ ನೋಟುಗಳು ವರ್ಷಗಳ ಕಾಲ ನಿರ್ಲಕ್ಷ್ಯದಿಂದ ಬಿದ್ದಿದ್ದ ಕಾರಣ ಗೆದ್ದಲು ತಿಂದು ಸಂಪೂರ್ಣ ಹಾಳಾಗಿದ್ದವು. ಕೆಲವು ನೋಟುಗಳು ಗುರುತಿಸಲಾಗದಷ್ಟು ಹಾನಿಗೊಳಗಾಗಿದ್ದರೆ, ಇನ್ನೂ ಕೆಲವು ಕಂತೆಗಳು ಮಾತ್ರ ಭಾಗಶಃ ಉಳಿದಿದ್ದವು. ಅಧಿಕಾರಿಗಳು ಪ್ರಾಥಮಿಕ ಅಂದಾಜಿನ ಪ್ರಕಾರ ಹಣದ ಮೌಲ್ಯ 1 ಕೋಟಿ ರುಪಾಯಿಗೂ ಅಧಿಕ ಇರಬಹುದು ಎಂದು ತಿಳಿಸಿದ್ದಾರೆ. ನೋಟುಗಳ ನಿಖರ ಮೌಲ್ಯ ಹಾಗೂ ಅವುಗಳ ಮೂಲವನ್ನು ಪತ್ತೆಹಚ್ಚಲು ಪರಿಶೀಲನೆ ನಡೆಯುತ್ತಿದೆ.
1 ಕೋಟಿ ರುಪಾಯಿ ಪತ್ತೆಯಾದ ಘಟನೆ:
#Watch | A stack of termite-infested cash worth over Rs 1 lakh was found in two suitcases in a college union room in Kolkata this week.
— NDTV (@ndtv) June 3, 2026
Read more: https://t.co/C0lDWkXt9D pic.twitter.com/xC4pZEegGv
ಈ ಬೆಳವಣಿಗೆಯ ನಂತರ ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿ ಸಂಘದ ಕೊಠಡಿಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ವರ್ಷಗಳ ಕಾಲ ಯಾರಿಗೂ ಗೊತ್ತಾಗದೆ ಹೇಗೆ ಉಳಿಯಿತು ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಇನ್ನೂ ಕಾಲೇಜು ಆಡಳಿತವು ಈ ವಿಚಾರವಾಗಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: 10 ಮಂದಿ ಸಾವು
ಮರುದಿನ ಬಯಲಾಯ್ತು ‘ರಹಸ್ಯ ಕೊಠಡಿ’
ನಗದು ಪತ್ತೆಯಾದ ಮರುದಿನವೇ ಅಧಿಕಾರಿಗಳು ಕಾಲೇಜಿನ ಮೇಲ್ಛಾವಣಿಗೆ ತೆರಳುವ ದಾರಿಯಲ್ಲಿ ರಹಸ್ಯವಾಗಿ ನಿರ್ಮಿಸಲಾದ ಕೊಠಡಿಯೊಂದನ್ನು ಪತ್ತೆಹಚ್ಚಿದ್ದಾರೆ. ಸಾಮಾನ್ಯವಾಗಿ ಬಳಕೆಯಲ್ಲಿಲ್ಲದ ಪ್ರದೇಶದಲ್ಲಿ ಇದ್ದ ಈ ಕೊಠಡಿ ಸಂಪೂರ್ಣ ಸೌಲಭ್ಯಗಳಿಂದ ಕೂಡಿದ್ದು ಅಧಿಕಾರಿಗಳನ್ನು ಅಚ್ಚರಿಗೊಳಿಸಿದೆ. ಕೊಠಡಿಯೊಳಗೆ ಏರ್ ಕಂಡೀಷನರ್, ಮೆತ್ತೆಯ ಹಾಸಿಗೆ, ಗೋಡೆ ಚಿತ್ರಗಳು, ಗಡಿಯಾರ ಹಾಗೂ ಇತರ ಸೌಲಭ್ಯಗಳು ಇದ್ದವು. ಅದರ ಪಕ್ಕದಲ್ಲೇ ಆಧುನಿಕ ಶೌಚಾಲಯವನ್ನೂ ನಿರ್ಮಿಸಲಾಗಿತ್ತು. ಈ ಕೊಠಡಿಯನ್ನು ಯಾರು ಬಳಸುತ್ತಿದ್ದರು ಹಾಗೂ ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಗನ್ ಪತ್ತೆ
ಅತ್ಯಂತ ಆತಂಕದ ಸಂಗತಿಯೆಂದರೆ, ಈ ಕೊಠಡಿಯೊಳಗೆ ಒಂದು ಗನ್ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಶಸ್ತ್ರಾಸ್ತ್ರಕ್ಕೆ ಪರವಾನಗಿ ಇದೆಯೇ, ಅದು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ರಾಜಕೀಯ ಸಂಚಲನ
ನಗದು, ರಹಸ್ಯ ಕೊಠಡಿ ಮತ್ತು ಗನ್ ಪತ್ತೆಯಾದ ಘಟನೆಗಳು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿವೆ. ಹಣದ ಮೂಲ, ಕೊಠಡಿಯ ಬಳಕೆ ಮತ್ತು ಶಸ್ತ್ರಾಸ್ತ್ರದ ಸಂಪರ್ಕದ ಬಗ್ಗೆ ತನಿಖೆ ನಡೆಯುತ್ತಿದ್ದು, ಪ್ರಕರಣವು ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.