ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ladakh Statehood Protest: ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ: ಹಿಂಸಾಚಾರಕ್ಕೆ ನಾಲ್ವರು ಸಾವು, 70 ಮಂದಿಗೆ ಗಾಯ

ರಾಜ್ಯ ಸ್ಥಾನಮಾನಕ್ಕೆ ಒತ್ತಾಯಿಸಿ ಲೇಹ್ ಅಪೆಕ್ಸ್ ಬಾಡಿಯ ಯುವ ವಿಭಾಗವು ಕರೆ ನೀಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ತೀವ್ರ ಘರ್ಷಣೆ ಉಂಟಾಗಿದ್ದು, ಇದರಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಲಡಾಖ್‌ನಲ್ಲಿ ಹಿಂಸಾಚಾರದಿಂದ ನಾಲ್ವರು ಸಾವು

-

ಲೇಹ್‌: ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ (Ladakh statehood protest) ನಡೆಸುತ್ತಿದ್ದ ಪ್ರತಿಭಟನೆಯು ಹಿಂಸೆಯ ರೂಪ ತಾಳಿ ನಾಲ್ವರು ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ಸಂಪೂರ್ಣ ಬಂದ್‌ಗೆ (protest) ಕರೆ ನೀಡಲಾಗಿತ್ತು. ಈ ವೇಳೆ ಲಡಾಖ್‌ನ ಲೇಹ್ ಪಟ್ಟಣದಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ತೀವ್ರ ಘರ್ಷಣೆ ಉಂಟಾಗಿದೆ. ಘರ್ಷಣೆಯ ಸಂದರ್ಭದಲ್ಲಿ ಬಿಜೆಪಿ ಕಚೇರಿ, ಪೊಲೀಸರ ವಾಹನ ಸೇರಿದಂತೆ ಹಲವಾರು ವಾಹನಗಳ ಮೇಲೆ ದಾಳಿ ಮಾಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಬೇಕಾಯಿತು.

ಲೇಹ್ ಅಪೆಕ್ಸ್ ಬಾಡಿ (LAB) ಯ ಯುವ ವಿಭಾಗವು ಕರೆ ನೀಡಿದ್ದ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ. ಅಧಿಕಾರಿಗಳು ನಗರದಲ್ಲಿ ಕರ್ಫ್ಯೂ ವಿಧಿಸಿದ್ದು, ಐದಕ್ಕೂ ಹೆಚ್ಚು ಜನರು ಸಭೆ ಸೇರುವುದನ್ನು ನಿಷೇಧಿಸಿದ್ದಾರೆ.

ಸಂಘರ್ಷದ ವೇಳೆ ಸ್ಥಳೀಯ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಹಲವು ವಾಹನಗಳನ್ನು ಸುಟ್ಟು ಹಾಕಲಾಗಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನೆ ಉಗ್ರ ಸ್ವರೂಪ ಪಡೆದುದರಿಂದ ಲೇಹ್ ಲಡಾಖ್‌ನಲ್ಲಿ ಕೇಂದ್ರ ಆಡಳಿತವು ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ (BNSS), 2023ರ ಸೆಕ್ಷನ್ 163ರ ಅಡಿಯಲ್ಲಿ ಕರ್ಫ್ಯೂ ವಿಧಿಸಿತು. ಇದರಿಂದ ತಕ್ಷಣದಿಂದ ಜಾರಿಯಾಗುವಂತೆ ಪ್ರತಿಭಟನೆ ಮತ್ತು ಸಭೆ ಸೇರುವುದನ್ನು ನಿಷೇಧಿಸಲಾಯಿತು. ಪೂರ್ವ ಲಿಖಿತ ಅನುಮೋದನೆ ಇಲ್ಲದೆ ಯಾವುದೇ ರೀತಿಯ ಮೆರವಣಿಗೆ, ರ‍್ಯಾಲಿ ನಡೆಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯಾಕೆ ಪ್ರತಿಭಟನೆ ?

ಈ ಕುರಿತು ಪ್ರತಿಕ್ರಿಯಿಸಿರುವ ಲಡಾಖ್‌ನ ಅಪೆಕ್ಸ್ ಬಾಡಿ ಅಧ್ಯಕ್ಷ ಥುಪ್ಸನ್ ತ್ಸ್ವಾಂಗ್, ಲಡಾಖ್‌ನ ನಾಲ್ಕು ವಿಷಯಗಳ ಕುರಿತು ನಾವು ಬಹಳ ಹಿಂದಿನಿಂದಲೂ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಈ ಬಾರಿ ಹಿಂಸಾಚಾರಕ್ಕೆ ಕಾರಣವಾದ ಕೆಲವು ಘಟನೆಗಳು ನಡೆದಿವೆ. ಈ ವೇಳೆ ಯುವಕರು ನಮ್ಮ ಕಾರಣಕ್ಕಾಗಿ ಹುತಾತ್ಮರಾಗಿದ್ದಾರೆ. ಇವರ ತ್ಯಾಗಗಳನ್ನು ನಾವು ವ್ಯರ್ಥ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ಲಡಾಖ್ ಹಿಂದಿನಿಂದಲೂ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿತ್ತು. 2019ರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಂಡ ಬಳಿಕ ಕೇಂದ್ರಾಡಳಿತ ಪ್ರದೇಶವಾಯಿತು. ಈಗ ಇದು ಕೇಂದ್ರದ ನಿಯಂತ್ರಣಕ್ಕೆ ನೇರವಾಗಿ ಒಳಪಟ್ಟಿದೆ. ರಾಜ್ಯದಿಂದ ಬೇರ್ಪಡಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಕ್ರಮವನ್ನು ಸ್ವಾಗತಿಸಿದ ಲಡಾಖ್, ಈಗ ರಾಜ್ಯ ಸ್ಥಾನಮಾನವನ್ನು ಕೋರುತ್ತಿರುವುದಾಗಿ ಹೇಳಿದರು.

ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ನೇತೃತ್ವದಲ್ಲಿ ಸೆಪ್ಟೆಂಬರ್ 10ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದ್ದು, 15 ಜನರಲ್ಲಿ ಇಬ್ಬರ ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಳಿಕ ಬಂದ್‌ಗೆ ಕರೆ ನೀಡಲಾಗಿತ್ತು.

ಹಿಂಸಾಚಾರವನ್ನು ತಪ್ಪಿಸುವಂತೆ ಬೆಂಬಲಿಗರನ್ನು ಒತ್ತಾಯಿಸುತ್ತಿರುವ ವಾಂಗ್‌ಚುಕ್ ಮಂಗಳವಾರ ತಮ್ಮ 15 ದಿನಗಳ ಉಪವಾಸವನ್ನು ಕೊನೆಗೊಳಿಸಿದ್ದಾರೆ. ಲಡಾಖ್‌ನಲ್ಲಿನ ಇತ್ತೀಚಿನ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಾಂಗ್‌ಚುಕ್, ಶಾಂತಿಯುತ ಮಾರ್ಗದ ತಮ್ಮ ಸಂದೇಶ ವಿಫಲವಾಗಿದೆ ಎಂದು ಹೇಳಿದರು.

ಬಂದ್ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಇಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಬಿಗಿ ಭದ್ರತೆಗಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 6ರಂದು ಮಾತುಕತೆ

ಕೇಂದ್ರ ಸರ್ಕಾರ, ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಸದಸ್ಯರು ಸೇರಿದಂತೆ ಲಡಾಖ್ ಪ್ರತಿನಿಧಿಗಳ ನಡುವೆ ಹೊಸ ಸುತ್ತಿನ ಮಾತುಕತೆ ಅಕ್ಟೋಬರ್ 6ರಂದು ನಡೆಯಲಿದೆ. ಆದರೆ ದೀರ್ಘಕಾಲದ ಉಪವಾಸ ಸತ್ಯಾಗ್ರಹ, ಲಡಾಖ್‌ನ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಕಳವಳವನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರದಲ್ಲಿ ಈ ಸಭೆ ನಡೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಬುಧವಾರ ದಿನವಿಡೀ ನಡೆದ ಅಶಾಂತಿಯ ಕಾರಣದಿಂದ ಭಾನುವಾರ ಪ್ರಾರಂಭವಾಗಿಡ್ಡ ನಾಲ್ಕು ದಿನಗಳ ವಾರ್ಷಿಕ ಲಡಾಖ್ ಉತ್ಸವದ ಸಮಾರೋಪ ಸಮಾರಂಭವನ್ನು ರದ್ದುಗೊಳಿಸಲಾಗಿದೆ.



ಇದನ್ನೂ ಓದಿ: S L Bhyrappa: ಶುಕ್ರವಾರ ಸರ್ಕಾರಿ ಗೌರವಗಳೊಂದಿಗೆ ಎಸ್‌.ಎಲ್‌. ಭೈರಪ್ಪ ಅಂತ್ಯ ಸಂಸ್ಕಾರ: ಪ್ರತಾಪ್‌ ಸಿಂಹ

ಬಿಜೆಪಿ ವಿರುದ್ಧ ಒಮರ್ ಅಬ್ದುಲ್ಲಾ ವಾಗ್ದಾಳಿ

ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅದ್ಬುಲ್ಲಾ, ಕಾಶ್ಮೀರದ ಜನರಿಗೆ ರಾಜ್ಯ ಸ್ಥಾನಮಾನದ ಭರವಸೆ ನೀಡಲಾಗಿತ್ತು. ಈಗ ಅವರಿಗೆ ದ್ರೋಹ ಮಾಡಲಾಗಿದೆ. ಇದರಿಂದ ಇಲ್ಲಿನ ಜನರು ಕೋಪಗೊಂಡಿದ್ದಾರೆ. ಈಗ ನಾವು ಪ್ರಜಾಸತ್ತಾತ್ಮಕವಾಗಿ, ಶಾಂತಿಯುತವಾಗಿ ಮತ್ತು ಜವಾಬ್ದಾರಿಯುತವಾಗಿ ಅದನ್ನು ಒತ್ತಾಯಿಸುತ್ತಿದ್ದರೂ ಭರವಸೆ ಈಡೇರದೇ ಇರುವಾಗ ನಾವು ಎಷ್ಟು ದ್ರೋಹ ಮತ್ತು ನಿರಾಶೆಗೊಂಡಿದ್ದೇವೆ ಎಂದು ಊಹಿಸಿ ಎಂದು ತಿಳಿಸಿದ್ದಾರೆ.