ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್‌ ಯಾದವ್‌ ರಾಜಕೀಯ, ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ ಆ 1 ಫೇಸ್‌ಬುಕ್‌ ಪೋಸ್ಟ್‌; ಮನೆ, ಪಕ್ಷದಿಂದ ಉಚ್ಚಾಟನೆ

Tej Pratap Yadav: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಅವರ 12 ವರ್ಷಗಳ ಹಿಂದಿನ ರಹಸ್ಯ ವಿವಾಹದ ಫೋಟೊ ಮತ್ತು ವಿಡಿಯೊ ಆನ್‌ಲೈನ್‌ನಲ್ಲಿ ಹರಿದಾಡಿದ ಬೆನ್ನಲ್ಲೇ ಪಕ್ಷ ಮತ್ತು ಮನೆಯಿಂದ ಹೊರ ಹಾಕಲಾಗಿದೆ.

ತೇಜ್‌ ಪ್ರತಾಪ್‌ನನ್ನು ಪಕ್ಷದಿಂದ ಉಚ್ಚಾಟಿಸಿದ ಲಾಲು ಪ್ರಸಾದ್‌ ಯಾದವ್‌

Profile Ramesh B May 25, 2025 11:57 PM

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ (Tej Pratap Yadav) ಅವರ
12 ವರ್ಷಗಳ ಹಿಂದಿನ ರಹಸ್ಯ ವಿವಾಹದ ಫೋಟೊ ಮತ್ತು ವಿಡಿಯೊ ಆನ್‌ಲೈನ್‌ನಲ್ಲಿ ಹರಿದಾಡಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಜನತಾ ದಳ (RJD)ದ ಮುಖ್ಯಸ್ಥರೂ ಆದ ಲಾಲೂ ಪ್ರಸಾದ್ ಯಾದವ್ ಅವರು ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. ಬೇಜವಾಬ್ದಾರಿಯುತ ನಡವಳಿಕೆ ಕಾರಣ ನೀಡಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ. ಜತೆಗೆ ಕೌಟುಂಬಿಕ ಮೌಲ್ಯಗಳಿಗೆ ಬೆಲೆ ಕೊಟ್ಟಿಲ್ಲವೆಂದು ಕುಟುಂಬದಿಂದಲೂ ಹೊರ ಹಾಕಲಾಗಿದೆ. ಆ ಮೂಲಕ ತೇಜ್‌ ಪ್ರತಾಪ್‌ ಯಾದವ್‌ಗೆ ಒಂದೇ ಬಾರಿಗೆ ಎರಡೆರಡು ಶಾಕ್‌ ಎದುರಾಗಿದೆ.

"ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ನ ಚಟುವಟಿಕೆ ಮತ್ತು ಬೇಜವಾಬ್ದಾರಿಯುತ ನಡವಳಿಕೆ ನಮ್ಮ ಕುಟುಂಬದ ಮೌಲ್ಯಗಳಿಗೆ, ಪಕ್ಷಕ್ಕೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ ನಾನು ಅವರನ್ನು ಮನೆಯಿಂದ ಹೊರ ಹಾಕುತ್ತಿದ್ದೇನೆ ಮತ್ತು 6 ವರ್ಷ ಪಕ್ಷದಿಂದ ಉಚ್ಚಾಟಿಸುತ್ತಿದ್ದೇನೆ. ಇಂದಿನಿಂದ ಅವರಿಗೂ ಪಕ್ಷ ಮತ್ತು ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಲಾಲು ಪ್ರಸಾದ್‌ ಯಾದವ್‌ ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Pahalgam Terror Attack: ಮಹಿಳೆಯರಿಗೆ ಗಂಡನನ್ನು ಉಳಿಸಿಕೊಳ್ಳುವ ವೀರತೆ ಇರಲಿಲ್ಲ; ಪಹಲ್ಗಾಮ್‌ ದಾಳಿ ಸಂತ್ರಸ್ತರ ಕುರಿತು ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

ಘಟನೆಯ ವಿವರ

ತೇಜ್‌ ಪ್ರತಾಪ್‌ ಯಾದವ್‌ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನಲಾದ ಫೋಟೊ, ವಿಡಿಯೊ ಹೊರಬಿದ್ದ ಬೆನ್ನಲ್ಲೇ ನಿರ್ಧಾರ ಕೈಗೊಳ್ಳಲಾಗಿದೆ. ಶನಿವಾರ (ಮೇ 24) ತೇಜ್ ಪ್ರತಾಪ್ ಯಾದವ್ ಅವರ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಅವರು ಒಬ್ಬ ಮಹಿಳೆಯೊಂದಿಗೆ ಇರುವ ಫೋಟೋವನ್ನು ಹಂಚಿಕೊಳ್ಳಲಾಗಿತ್ತು. ಪೋಸ್ಟ್‌ನಲ್ಲಿ ಆ ಮಹಿಳೆಯನ್ನು ಅನುಷ್ಕಾ ಯಾದವ್ ಎಂದು ಉಲ್ಲೇಖಿಸಲಾಗಿತ್ತು. ಅದರಲ್ಲಿ ತಾನು ಅನುಷ್ಕಾ ಯಾದವ್ ಜತೆಗೆ 12 ವರ್ಷಗಳಿಂದ ಪ್ರೀತಿಯಲ್ಲಿದ್ದೇನೆ ಎಂದು ಬರೆದಿದ್ದರು.

"ನಾನು ತೇಜ್ ಪ್ರತಾಪ್ ಯಾದವ್ ಮತ್ತು ಈ ಚಿತ್ರದಲ್ಲಿ ನನ್ನೊಂದಿಗೆ ಇರುವ ಹುಡುಗಿ ಅನುಷ್ಕಾ ಯಾದವ್. ನಾವಿಬ್ಬರೂ ಕಳೆದ 12 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಇದನ್ನು ನಿಮ್ಮೆಲ್ಲರೊಂದಿಗೆ ಬಹಳ ಸಮಯದಿಂದ ಹಂಚಿಕೊಳ್ಳಲು ಬಯಸಿದ್ದೆ. ಆದರೆ ಸಾಧ್ಯವಾಗಿರಲಿಲ್ಲʼʼ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಬಿಹಾರದ ಮಾಜಿ ಸಚಿವೆ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯಾ ರೈ ಅವರೊಂದಿಗೆ ತೇಜ್‌ ಪ್ರತಾಪ್‌ 2018ರಲ್ಲಿ ಸಪ್ತಪದಿ ತುಳಿದಿದ್ದರು. ಅದಾಗ್ಯೂ ಕೆಲವೇ ತಿಂಗಳಲ್ಲಿ ಈ ಸಂಬಂಧ ಮುರಿದು ಬಿದ್ದಿತ್ತು. ಹೀಗಾಗಿ ತೇಜ್‌ ಪ್ರತಾಪ್‌ ಪೋಸ್ಟ್‌ ವಿವಾದ ಹುಟ್ಟು ಹಾಕಿತ್ತು. ಫೇಸ್‌ಬುಕ್ ಪೋಸ್ಟ್ ಚರ್ಚೆಗೆ ಗ್ರಾಸವಾದ ಸ್ವಲ್ಪ ಸಮಯದ ನಂತರ, ತೇಜ್ ಪ್ರತಾಪ್ ತಮ್ಮ ಪ್ರೊಫೈಲ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿ ಡಿಲೀಟ್‌ ಮಾಡಿದ್ದರು.

ತೇಜ್ ಪ್ರತಾಪ್ ಸಹೋದರ ಮತ್ತು ಆರ್‌ಜೆಡಿಯ ಮುಖಸ್ಥ ತೇಜಸ್ವಿ ಯಾದವ್ ಈ ಬಗ್ಗೆ ಪ್ರತಿಕ್ರಿಯಿಸಿ, "ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ನಾವು ಬಿಹಾರಕ್ಕೆ, ಇಲ್ಲಿನ ಜನತೆಗೆ ನಮ್ಮನ್ನು ಸಮರ್ಪಿಸಿಕೊಂಡಿದ್ದೇವೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದೇವೆ. ರಾಜಕೀಯ ಜೀವನ ಮತ್ತು ವೈಯಕ್ತಿಕ ಜೀವನ ವಿಭಿನ್ನವಾದುದು. ತೇಜ್ ಪ್ರತಾಪ್ ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅವರಿಗೂ ನಮಗೂ ಸಂಬಂಧವಿಲ್ಲʼʼ ಎಂದು ತಿಳಿಸಿದ್ದಾರೆ.

ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಲಾಲೂ ಪ್ರಸಾದ್ ಯಾದವ್ ಕ್ರಮವನ್ನು ಪುತ್ರ ತೇಜಸ್ವಿ ಯಾದವ್ ಹಾಗೂ ಪುತ್ರಿ ರೋಹಿಣಿ ಆಚಾರ್ಯ ಸಮರ್ಥಿಸಿಕೊಂಡಿದ್ದಾರೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಮಧ್ಯೆ ತೇಜ್ ಪ್ರತಾಪ್ ಅವರ ಫೇಸ್‌ಬುಕ್ ಪೋಸ್ಟ್ ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ನಡೆಯುತ್ತಿರುವ ಚರ್ಚೆ ಆರ್‌ಜೆಡಿಯನ್ನು ಮುಜುಗರಕ್ಕೀಡು ಮಾಡಿದೆ. ಹೀಗಾಗಿಯೇ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿ ಅವರನ್ನು ಉಚ್ಚಾಟಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.