ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಉಗ್ರ ಲತೀಫ್ ಭಟ್ ಎನ್ಕೌಂಟರ್; ಯಾರೀತ? ಹಿನ್ನೆಲೆಯೇನು?
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಅಂಗಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ನ (TRF)ಮೋಸ್ಟ್ ವಾಂಟೆಡ್ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ ಸೇರಿದಂತೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಸಂಗ್ರಹ ಚಿತ್ರ -
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಅಂಗಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ನ (TRF)ಮೋಸ್ಟ್ ವಾಂಟೆಡ್ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ (Latif Bhat) ಸೇರಿದಂತೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಳೆದ ವಾರ ಸಿಆರ್ಪಿಎಫ್ (CRPF) ಯೋಧರ ಮೇಲೆ ನಡೆದ ಗುಂಡಿನ ದಾಳಿಯ ಬೆನ್ನಲ್ಲೇ ಸೇನೆ ಈ ಕಾರ್ಯಾಚರಣೆ ನಡೆಸಿದೆ.
ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಉಗ್ರ ಕಮಾಂಡರ್ ಎಂದು ಭದ್ರತಾ ಸಂಸ್ಥೆಗಳು ಲತೀಫ್ ಭಟ್ನನ್ನು ಗುರುತಿಸಿದ್ದವು. ಕುಲ್ಗಾಮ್ ಜಿಲ್ಲೆಯ ಖ್ರೆವಾನ್ ಚಡ್ಡರ್ ಗ್ರಾಮದ ನಿವಾಸಿಯಾಗಿದ್ದ 22 ವರ್ಷದ ಲತೀಫ್ ಭಟ್, ಅಶ್ಮುಜಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 12ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದನು. ನಂತರ ಕುಲ್ಗಾಮ್ನ ಸರ್ಕಾರಿ ಪದವಿ ಕಾಲೇಜಿಗೆ ಸೇರಿದನಾದರೂ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದನು. ಬಳಿಕ ತನ್ನ ಗ್ರಾಮದಲ್ಲೇ ಬಡಗಿಯಾಗಿ ಕೆಲಸ ಮಾಡುತ್ತಿದ್ದನು.
ಸಕ್ರಿಯಾವಾಗಿ ಉಗ್ರ ಸಂಘಟನೆಗೆ ಸೇರಿಕೊಳ್ಳುವ ಮೊದಲು ಐದು ವರ್ಷ ಭಯೋತ್ಪಾದಕ ಸಂಘಟನೆಗಳ ಜೊತೆಯಲ್ಲಿ ಸಂಪರ್ಕದಲ್ಲಿದ್ದನು. 2025ರ ನವೆಂಬರ್ 19ರಂದು ಮನೆಯಿಂದ ನಾಪತ್ತೆಯಾದ ಈತ ಭೂಗತನಾಗಿ ಲಷ್ಕರ್-ಎ-ತೊಯ್ಬಾ ಮತ್ತು TRF ಸಂಘಟನೆಯನ್ನು ಸೇರಿದ್ದನು. ಈತನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನೂ ದಾಖಲಿಸಿದ್ದರು. ನಾಪತ್ತೆ ಬಳಿಕ ಲಷ್ಕರ್-ಎ-ತೊಯ್ಬಾ ಕಮಾಂಡರ್ ಜಾಕಿರ್ ಅಹ್ಮದ್ ಗನೈ ಜೊತೆ ಸೇರಿಕೊಂಡಿದ್ದ.
ಜಾಕಿರ್ ಗನೈ ಜೊತೆ ನಂಟು
ಜಾಕಿರ್ ಗನೈ ಮತ್ತು ಲತೀಫ್ ಭಟ್ ದಕ್ಷಿಣ ಕಾಶ್ಮೀರದ ಕಾಡು ಮತ್ತು ತೋಟಗಳ ಪ್ರದೇಶದಲ್ಲಿ ಒಟ್ಟಾಗಿ ಸಂಚರಿಸುತ್ತಿದ್ದರು. 2026ರ ಜುಲೈ ಆರಂಭದಲ್ಲಿ ಶೋಪಿಯಾನ್ ಜಿಲ್ಲೆಯ ದಟ್ಟವಾದ ಸೇಬಿನ ತೋಟಗಳಲ್ಲಿ ಇವರಿಬ್ಬರೂ ಒಟ್ಟಾಗಿ ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಸಿಸಿಟಿವಿ ಸುಳಿವಿನ ಆಧಾರದ ಮೇಲೆ 2026ರ ಜುಲೈ 3ರಂದು ಭದ್ರತಾ ಪಡೆಗಳು ಶೋಪಿಯಾನ್ನಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದವು. ಐದು ದಿನಗಳ ಕಾಲ ನಡೆದ ಈ ಸುದೀರ್ಘ ಎನ್ಕೌಂಟರ್ನಲ್ಲಿ ಜಾಕಿರ್ ಗನೈ ಮತ್ತು ಲತೀಫ್ ಭಟ್ ಇಬ್ಬರೂ ಸೇನೆಯ ಬಲೆಗೆ ಬಿದ್ದಿದ್ದರು. ಜುಲೈ 8ರಂದು ಜಾಕಿರ್ ಗನೈನನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಯಿತು. ಆದರೆ ಲತೀಫ್ ಭಟ್ ಭದ್ರತಾ ಪಡೆಗಳ ಕಣ್ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದನು.
ಜಾಕಿರ್ ಗನೈ ಹತ್ಯೆಯ ನಂತರ ದಕ್ಷಿಣ ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಸ್ಥಳೀಯ ಜಾಲವನ್ನು ಲತೀಫ್ ಮುನ್ನಡೆಸುತ್ತಿದ್ದ. ಲತೀಫ್ ಭಟ್ ಹೆಗಲಿಗೆ ಬಿತ್ತು. ಜಾಕಿರ್ ಸಾವಿನ ಬಳಿಕ ತಲೆಮರೆಸಿಕೊಂಡಿದ್ದ ಲತೀಫ್, ಗಡಿಯಾಚೆಗಿನ ಹ್ಯಾಂಡ್ಲರ್ಗಳ ಸೂಚನೆಯಂತೆ ಸ್ಲೀಪರ್ ಸೆಲ್ಗಳನ್ನು ಪುನಃ ಸಕ್ರಿಯಗೊಳಿಸಿ ಸರಣಿ ದಾಳಿಗಳನ್ನು ನಡೆಸಿದ್ದ. ಅನಂತನಾಗ್ನ ಲಾಲ್ ಚೌಕ್ ಪ್ರದೇಶದಲ್ಲಿ ಜಮ್ಮು-ಕಾಶ್ಮೀರ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆಶಿಕ್ ಹುಸೇನ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಕುಲ್ಗಾಮ್ನ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರನ್ನು ಹತ್ಯೆಗೈದಿದ್ದ.
ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ನನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಇತ್ತೀಚೆಗೆ ನವೆಂಬರ್ 11 ರಂದು ಕುಲ್ಗಾಮ್ನ ಮೀರ್ ಬಜಾರ್ ಬಳಿ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ಎಕೆ-47 ರೈಫಲ್ಗಳಿಂದ 25 ರಿಂದ 30 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದನು. ಲತೀಫ್ ಭಟ್ ಪತ್ತೆಗೆ ಭದ್ರತಾ ಪಡೆಗಳು ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದಾದ್ಯಂತ ಪೋಸ್ಟರ್ಗಳನ್ನು ಅಂಟಿಸಿದ್ದವು. ಈತನ ಸುಳಿವು ನೀಡಿದವರಿಗೆ 15 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಘೋಷಿಸಲಾಗಿತ್ತು. ಇದೀಗ ಸೇನೆ ಆತನನ್ನು ಹೊಡೆದುರುಳಿಸಿದೆ.