‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್‌ಗೆ ಜೋಡಿಯಾದ ʻಪ್ರೇಮದ ಊರಲಿʼ ನಟಿ ತಪಸ್ವಿನಿ ಪೂಣಚ್ಚ; ʻಮಿಸ್ಟರ್ ಜಾಕ್ʼ ಟ್ರೇಲರ್ ರಿಲೀಸ್
ʻಮಿ. ಜಾಕ್ʼ ಸಿನಿಮಾದ ಟ್ರೇಲರ್ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಗುರುನಂದನ್ ನಾಯಕನಾಗಿ ನಟಿಸುವುದರ ಜೊತೆಗೆ ಮಂಡಿಮನೆ ಟಾಕೀಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ನಾಯಕಿಯಾಗಿ ತಪಸ್ವಿನಿ ಪೂಣಚ್ಚ ಕಾಣಿಸಿಕೊಂಡಿದ್ದಾರೆ.
-
‘ಫಸ್ಟ್ ರ‍್ಯಾಂಕ್ ರಾಜು’ ಚಿತ್ರದ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟ ಗುರುನಂದನ್ ಅಭಿನಯದ ‘MR ಜಾಕ್’ (ಮಿಸ್ಟರ್ ಜಾಕ್) ಸಿನಿಮಾದ ಟ್ರೇಲರ್ ಇತ್ತೀಚೆಗೆ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ಮಂಡಿಮನೆ ಟಾಕೀಸ್ ಲಾಂಛನದಲ್ಲಿ ನಟ ಗುರುನಂದನ್ ಅವರು ತಮ್ಮ ಸ್ನೇಹಿತರ ಸಹನಿರ್ಮಾಣದೊಂದಿಗೆ ನಿರ್ಮಿಸಿರುವ ಈ ಚಿತ್ರಕ್ಕೆ ಸುಮಂತ್ ಆಕ್ಷನ್-ಕಟ್ ಹೇಳಿದ್ದಾರೆ. ‘ಪ್ರೇಮದ ಊರಲಿ’ ಸಿನಿಮಾದ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನಟಿ ತಪಸ್ವಿನಿ ಪೂಣಚ್ಚ ಈ ಚಿತ್ರದಲ್ಲಿ ಗುರುನಂದನ್ ಅವರಿಗೆ ನಾಯಕಿಯಾಗಿ ಜೋಡಿಯಾಗಿದ್ದು, ಡಿಸೆಂಬರ್ 4ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
‘ಮಿಸ್ಟರ್ ಜಾಕ್’ ಟ್ರೇಲರ್ ಲಾಂಚ್ ಮಾಡಿದ ಗಣ್ಯರು
ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ. ರವಿ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ್, ಉದ್ಯಮಿ ಪ್ರಕಾಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮೆರುಗು ನೀಡಿದರು. ವಿಶೇಷವಾಗಿ ನಟಿ ತಪಸ್ವಿನಿ ಪೂಣಚ್ಚ ಅವರ ಹಿಂದಿನ ಚಿತ್ರ ‘ಪ್ರೇಮದ ಊರಲಿ’ ತಂಡದ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಮಿಸ್ಟರ್ ಜಾಕ್’ ತಂಡಕ್ಕೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ವೇದಿಕೆಯ ಮೇಲೆ ಗಣ್ಯರೆಲ್ಲರೂ ಸೇರಿ ಟ್ರೇಲರ್ ಅನಾವರಣಗೊಳಿಸಿ, ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಡಿ.4ರಂದು ನಮ್ಮ ಸಿನಿಮಾ ರಿಲೀಸ್, ನಿಮ್ಮ ಬೆಂಬಲವಿರಲಿ
ಚಿತ್ರದ ಕುರಿತು ಸಂತಸ ಹಂಚಿಕೊಂಡ ನಿರ್ದೇಶಕ ಸುಮಂತ್, "ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡಬೇಕೆಂಬುದು ಬಹುದಿನಗಳ ಕನಸಾಗಿತ್ತು. ಆ ಕನಸು ಈಗ ‘MR ಜಾಕ್’ ಮೂಲಕ ನನಸಾಗಿದೆ. ನನ್ನ ಈ ಕನಸಿಗೆ ಬೆನ್ನೆಲುಬಾಗಿ ನಿಂತ ಮಂಡಿಮನೆ ಟಾಕೀಸ್ ಹಾಗೂ ಇಡೀ ಚಿತ್ರತಂಡದ ಸಹಕಾರಕ್ಕೆ ನಾನು ಸದಾ ಚಿರಋಣಿ. ಎಲ್ಲರ ಪರಿಶ್ರಮದಿಂದ ಒಂದು ಉತ್ತಮ ಸದಭಿರುಚಿಯ ಸಿನಿಮಾವನ್ನು ರೂಪಿಸಲು ಸಾಧ್ಯವಾಗಿದೆ. ಡಿಸೆಂಬರ್ 4ರಂದು ನಮ್ಮ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಕನ್ನಡ ಪ್ರೇಕ್ಷಕರು ಪ್ರೀತಿಯಿಂದ ಸ್ವೀಕರಿಸಿ, ಪ್ರೋತ್ಸಾಹಿಸಬೇಕು" ಎಂದು ಮನವಿ ಮಾಡಿದರು.
Kannada New Movie: ʻಪ್ರೇಮದ ಊರಲಿ' ಚಿತ್ರದ ಸಾಂಗ್ ಔಟ್; ಕಣ್ಮನ ಸೆಳೆದ ತಪಸ್ವಿನಿ ಪೂಣಚ್ಚ–ಶ್ರೀರಾಮ್ !
ನಾಯಕ ನಟ ಹಾಗೂ ನಿರ್ಮಾಪಕ ಗುರುನಂದನ್ ಮಾತನಾಡಿ, "ಇಂದು ನಮ್ಮ ಚಿತ್ರಕ್ಕೆ ಶುಭ ಹಾರೈಸಲು ಆಗಮಿಸಿರುವ ಎಲ್ಲ ಗಣ್ಯರಿಗೆ, ‘ಪ್ರೇಮದ ಊರಲಿ’ ಚಿತ್ರತಂಡದ ಆತ್ಮೀಯರಿಗೆ ಹಾಗೂ ಇಲ್ಲಿ ನೆರೆದಿರುವ ಸಾವಿರಾರು ಕನ್ನಡದ ಮನಸ್ಸುಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಮಂಡಿಮನೆ ಟಾಕೀಸ್ ಮೂಲಕ ನನ್ನ ಸ್ನೇಹಿತರು ಸಹನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ವಿಶೇಷ ತಂತ್ರಜ್ಞರು ಹಾಗೂ ಪ್ರತಿಭಾವಂತ ಕಲಾವಿದರ ಸಹಕಾರದೊಂದಿಗೆ ಇಡೀ ಕುಟುಂಬ ಸಮೇತ ಕುಳಿತು ನೋಡಬಹುದಾದ ಉತ್ತಮ ಮನರಂಜನಾತ್ಮಕ ಹಾಗೂ ಸದಭಿರುಚಿಯ ಚಿತ್ರವನ್ನು ನಿರ್ಮಿಸಿದ್ದೇವೆ. ಟ್ರೇಲರ್ ಈಗಾಗಲೇ ನಿಮ್ಮ ಮುಂದಿದ್ದು, ಡಿಸೆಂಬರ್ 4ರಂದು ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಹರಸಿ" ಎಂದರು.
ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಆಭಾರಿ
ನಾಯಕಿ ತಪಸ್ವಿನಿ ಪೂಣಚ್ಚ ಮಾತನಾಡಿ, "ನಾನು ‘ಪ್ರೇಮದ ಊರಲಿ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತಳಾಗಿದ್ದೇನೆ. ಆ ಚಿತ್ರದ ನನ್ನ ಆತ್ಮೀಯ ತಂಡದ ಸದಸ್ಯರು ಇಂದು ‘ಮಿಸ್ಟರ್ ಜಾಕ್’ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಬಂದು ಬೆಂಬಲ ನೀಡಿರುವುದು ನನಗೆ ಅತೀವ ಸಂತಸ ತಂದಿದೆ. ಅವರ ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಆಭಾರಿಯಾಗಿದ್ದೇನೆ. ಡಿಸೆಂಬರ್ 4ರಂದು ನಮ್ಮ ಸಿನಿಮಾ ತೆರೆಗೆ ಬರುತ್ತಿದ್ದು, ನಿಮ್ಮೆಲ್ಲರ ಬೆಂಬಲ ನಮ್ಮ ಮೇಲಿರಲಿ" ಎಂದು ಆಶಿಸಿದರು. ಇದೇ ವೇಳೆ ಹಿರಿಯ ನಟ ರಂಗಾಯಣ ರಘು ಸೇರಿದಂತೆ ಚಿತ್ರರಂಗದ ಹಲವು ಪ್ರಮುಖರು ಚಿತ್ರತಂಡಕ್ಕೆ ಶುಭ ಕೋರಿದರು.
ಧರ್ಮಣ್ಣ ಕಡೂರು, ಸುಷ್ಮಿತಾ ಮುಂತಾದವರು ‘MR ಜಾಕ್’ ಚಿತ್ರದಲ್ಲಿ ನಟಿಸಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ನಿರ್ದೇಶನ, ಶಿವಸೇನ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ, ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಮಾಡಿದ್ದಾರೆ.