‘ಮರಳಿ ಬಂದರೆ ಸ್ವಾಗತ, ಇಲ್ಲದಿದ್ದರೆ ಜಾಗವಿಲ್ಲ’ – ಬಂಡಾಯ ನಾಯಕರಿಗೆ ಮಮತಾ ಖಡಕ್ ವಾರ್ನಿಂಗ್
ತೃಣಮೂಲ ಕಾಂಗ್ರೆಸ್ ತೊರೆದು ಬಂಡಾಯ ಬಣ ಸೇರಿರುವ ಸಂಸದರು ಹಾಗೂ ಶಾಸಕರು 15 ದಿನಗಳೊಳಗೆ ಪಕ್ಷಕ್ಕೆ ಮರಳಬೇಕು ಎಂದು ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ. ಇಲ್ಲವಾದರೆ ಪಕ್ಷದಲ್ಲಿ ಯಾವುದೇ ಸ್ಥಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗ ಮತ್ತು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತೃಣಮೂಲ ಕಾಂಗ್ರೆಸ್ ಅನ್ನು ಮತ್ತೆ ತಳಮಟ್ಟದಿಂದ ಬಲಪಡಿಸುವುದಾಗಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ -
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ತೊರೆದು ಬಂಡಾಯ ಬಣ ಸೇರಿರುವ ಸಂಸದರು ಮತ್ತು ಶಾಸಕರಿಗೆ ಪಕ್ಷದ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) 15 ದಿನಗಳ ಗಡುವು ನೀಡಿದ್ದಾರೆ. ಪಕ್ಷವನ್ನು ಮತ್ತೆ ಸಂಘಟಿಸಿ ಬಲಿಷ್ಠಗೊಳಿಸುವುದಾಗಿ ಅವರು ಘೋಷಿಸಿದ್ದಾರೆ.
ಉತ್ತರ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ನಡೆದ ಬೃಹತ್ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮೊಬೈಲ್ ಮೂಲಕ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಪಕ್ಷ ತೊರೆದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ನಾವು ಗೆಲ್ಲಲು ಸಹಾಯ ಮಾಡಿದ ಅನೇಕ ಶಾಸಕರು ಮತ್ತು ಸಂಸದರು ದ್ರೋಹಿಗಳಾಗಿದ್ದಾರೆ. ಅವರಿಗೆ ಇಲ್ಲಿ ಯಾವುದೇ ಸ್ಥಾನವಿಲ್ಲ. ಅವರು 15 ದಿನಗಳೊಳಗೆ ಮರಳಿ ಬಂದರೆ ಸರಿ; ಇಲ್ಲವಾದರೆ ಅವರಿಗೆ ಇಲ್ಲಿ ಯಾವುದೇ ಜಾಗವಿಲ್ಲ” ಎಂದು ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ. 1998ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದ ಸಂದರ್ಭದಲ್ಲಿ ಪಕ್ಷವನ್ನು ಕಟ್ಟಲು ಸಾಮಾನ್ಯ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ ಅವರು, ಮತ್ತೊಮ್ಮೆ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ವಿಶ್ವಾಸ ವ್ಯಕ್ತಪಡಿಸಿದರು. ನಾಯಕರುಗಿಂತಲೂ ಪಕ್ಷದ ಸಾಮಾನ್ಯ ಕಾರ್ಯಕರ್ತರೇ ತೃಣಮೂಲ ಕಾಂಗ್ರೆಸ್‌ನ ನಿಜವಾದ ಶಕ್ತಿ ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ
ಚುನಾವಣಾ ಆಯೋಗದ ವಿರುದ್ಧವೂ ಮಮತಾ ಬ್ಯಾನರ್ಜಿ ತೀವ್ರ ಆರೋಪ ಮಾಡಿದರು. ಜ್ಞಾನೇಶ್ ಕುಮಾರ್ ಚುನಾವಣಾ ಆಯೋಗದ ನೇತೃತ್ವದಲ್ಲಿ ಇರುವವರೆಗೆ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ರಾಷ್ಟ್ರೀಯ ರಾಜಕೀಯದಲ್ಲಿ ತೃಣಮೂಲ ಕಾಂಗ್ರೆಸ್‌ನ ಪಾತ್ರವನ್ನು ಒತ್ತಿಹೇಳಿದ ಮಮತಾ, “ತೃಣಮೂಲ ಕಾಂಗ್ರೆಸ್ ಇಲ್ಲದೆ ಇಂಡಿಯಾ ಮೈತ್ರಿಕೂಟ ಬಲಿಷ್ಠವಾಗಲು ಸಾಧ್ಯವಿಲ್ಲ. ಬಿಜೆಪಿಯನ್ನು ಎದುರಿಸಬೇಕಾದರೆ ತೃಣಮೂಲ ಕಾಂಗ್ರೆಸ್ ಅನ್ನು ಬಲಪಡಿಸಬೇಕು” ಎಂದು ಕರೆ ನೀಡಿದ್ದಾರೆ.
ಸೋಲಿನ ಬಳಿಕ ಪಕ್ಷದಲ್ಲಿ ಬಿರುಕು
35 ವರ್ಷಗಳ ಎಡಪಂಥೀಯ ಆಡಳಿತದ ಕೋಟೆಯನ್ನು ಕೆಡವಿ ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್, ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿನ ಭರ್ಜರಿ ಸೋಲಿನ ಬಳಿಕ ಆಂತರಿಕ ಬಿಕ್ಕಟ್ಟಿಗೆ ಸಿಲುಕಿದೆ.
ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಹಲವು ಶಾಸಕರು ಬಂಡಾಯ ಎದ್ದು ತಾವೇ “ನಿಜವಾದ ತೃಣಮೂಲ ಕಾಂಗ್ರೆಸ್” ಎಂದು ಘೋಷಿಸಿಕೊಂಡಿದ್ದಾರೆ. ಇದೇ ವೇಳೆ 28 ಸಂಸದರಲ್ಲಿ 20 ಮಂದಿ ಪಕ್ಷ ತೊರೆದು ಪ್ರಾದೇಶಿಕ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಸೇರಿದ್ದಾರೆ ಎಂದು ವರದಿಯಾಗಿದೆ.
ಚುನಾವಣಾ ಚಿಹ್ನೆಗಾಗಿ ಕಾನೂನು ಹೋರಾಟ
ತೃಣಮೂಲ ಕಾಂಗ್ರೆಸ್‌ನ ‘ಟ್ವಿನ್ ಫ್ಲವರ್’ (ಎರಡು ಹೂವು) ಚುನಾವಣಾ ಚಿಹ್ನೆ ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಮಮತಾ ಬಣ ಮತ್ತು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಣದ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ಈ ವಿವಾದದ ಕುರಿತು ನಿರ್ಧಾರ ಕೈಗೊಳ್ಳಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿದೆ.
ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಹಾಗೂ ಇಟಾಹಾರ್ ಶಾಸಕ ಮೊಶರಫ್ ಹುಸೇನ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.