Terrorist Arrested: ಭದ್ರತಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ; ಮಣಿಪುರದಲ್ಲಿ ನಾಲ್ವರು ಉಗ್ರರ ಬಂಧನ
ಮಣಿಪುರದ ಇಂಫಾಲ್ ಪಶ್ಚಿಮ ಮತ್ತು ತೆಂಗ್ನೌಪಾಲ್ ಜಿಲ್ಲೆಗಳಿಂದ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಬಂಧಿಸಿವೆ ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ನಿಷೇಧಿತ ಸಂಘಟನೆಯಾದ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷದ ಇಬ್ಬರು ಉಗ್ರರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಕಾರ್ಯಾಚರಣೆಯಲ್ಲಿ, ಭದ್ರತಾ ಪಡೆಗಳು ಭಾನುವಾರ ಟೆಂಗ್ನೌಪಾಲ್ ಜಿಲ್ಲೆಯ ಗಡಿ ಸ್ತಂಭ 85 ರಿಂದ ನಿಷೇಧಿತ ಸಂಘಟನೆಯಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಕೊಯಿರೆಂಗ್) ಮತ್ತು ಪ್ರೆಪಾಕ್‌ಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಿವೆ.
![ಮಣಿಪುರದಲ್ಲಿ ನಾಲ್ವರು ಉಗ್ರರ ಬಂಧನ](https://cdn-vishwavani-prod.hindverse.com/media/original_images/Manipur_Terror.jpg)
Manipur Terror
![Profile](https://vishwavani.news/static/img/user.png)
ಇಂಫಾಲ್: ಮಣಿಪುರದ ಇಂಫಾಲ್ ಪಶ್ಚಿಮ ಮತ್ತು ತೆಂಗ್ನೌಪಾಲ್ ಜಿಲ್ಲೆಗಳಿಂದ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಬಂಧಿಸಿವೆ ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ನಿಷೇಧಿತ ಸಂಘಟನೆಯಾದ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷದ ಇಬ್ಬರು ಉಗ್ರರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ರೂಪಮಹಲ್ ಟ್ಯಾಂಕ್ ಪ್ರದೇಶದಿಂದ ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಭದ್ರತಾ ಪಡೆಗಳು ಭಾನುವಾರ ಟೆಂಗ್ನೌಪಾಲ್ ಜಿಲ್ಲೆಯ ಗಡಿ ಸ್ತಂಭ 85 ರಿಂದ ನಿಷೇಧಿತ ಸಂಘಟನೆಯಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಕೊಯಿರೆಂಗ್) ಮತ್ತು ಪ್ರೆಪಾಕ್‌ಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಿವೆ. ಬಂಧಿತ ವ್ಯಕ್ತಿಗಳಿಂದ ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳು, ಒಂದು ದ್ವಿಚಕ್ರ ವಾಹನ ಮತ್ತು ಒಂದು ಸೈಡ್ ಬ್ಯಾಗ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 9 ರಂದು ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಭದ್ರತಾ ಪಡೆಗಳು ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF-K) ಮತ್ತು ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೈಪಾಕ್ (PREPAK) ನ ತಲಾ ಒಬ್ಬರನ್ನು ಬಂಧಿಸಿದ್ದವು. ಇದಕ್ಕೂ ಮೊದಲು, ಭದ್ರತಾ ಪಡೆಗಳು ಚುರಾಚಂದ್‌ಪುರದ ಕೌನ್‌ಪುಯಿ ಪ್ರದೇಶದಲ್ಲಿ ಒಬ್ಬನನ್ನು ಬಂಧಿಸಿದ್ದವು.
ತೌಬಲ್ ಜಿಲ್ಲೆಯ ಮಣಿಪುರ ರೈಫಲ್ಸ್‌ನ ಹೊರಠಾಣೆಯಿಂದ ಉಗ್ರಗಾಮಿ ಸಂಘಟನೆಯಾದ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿಯ (KPC) ಉಗ್ರರು ಲೂಟಿ ಮಾಡಿದ್ದ ಶಸ್ತ್ರಾಸ್ತ್ರಗಳ ಜೊತೆಗೆ ಅವರ ಬಳಿ ಇದ್ದ ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ಮಣಿಪುರದ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದು, ಒಬ್ಬ ಉಗ್ರನನ್ನು ಬಂಧಿಸಿದ್ದಾರೆ. ಪೊಲೀಸರ ಹೇಳಿಕೆಯ ಪ್ರಕಾರ, ಸುಮಾರು 30 ಶಸ್ತ್ರಸಜ್ಜಿತ ಉಗ್ರರ ಗುಂಪೊಂದು ಶನಿವಾರ ರಾತ್ರಿ , ತೌಬಲ್ ಜಿಲ್ಲೆಯ ಕಾಕ್ಮಯೈನಲ್ಲಿರುವ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ, ಠಾಣೆಯಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಉಗ್ರರು ಠಾಣೆಯಲ್ಲಿದ್ದ 9 ಶಸ್ತ್ರಾಸ್ತ್ರಗಳನ್ನು ಕದ್ದೊಯ್ದಿದ್ದರು. ಆರು ಎಸ್‌ಎಲ್‌ಆರ್‌ಗಳು, ಮೂರು ಎಕೆ ರೈಫಲ್‌ಗಳು ದೋಚಿದ್ದರು.
ಈ ಸುದ್ದಿಯನ್ನೂ ಓದಿ: Biren Singh: ಮಣಿಪುರದ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿರುವ ಬಿರೇನ್ ಸಿಂಗ್!
ಘಟನೆಯ ನಂತರ ತಕ್ಷಣವೇ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ ಪೊಲೀಸರು ಕೆಸಿಪಿ ಉಗ್ರರಲ್ಲಿ ಒಬ್ಬನಾದ ಹಿಜಾಮ್ ನಿಂಗ್ಥೆಮ್ ಸಿಂಗ್ (49) ಎಂಬಾತನನ್ನು ಬಂಧಿಸಿದ್ದಾರೆ. ವಿವಿಧ ಸ್ಥಳಗಳಲ್ಲಿ ನಿರಂತರ ಶೋಧದ ನಂತರ ಭಾನುವಾರ ಮಧ್ಯಾಹ್ನ ನ್ಗಮುಖೋಂಗ್ ತಪ್ಪಲಿನಲ್ಲಿ ಲೂಟಿ ಮಾಡಿದ ಒಂಬತ್ತು ಶಸ್ತ್ರಾಸ್ತ್ರಗಳಲ್ಲಿ ಮೂರು ಎಕೆ ರೈಫಲ್‌ಗಳು ಮತ್ತು ಐದು ಎಸ್‌ಎಲ್‌ಆರ್ ರೈಫಲ್ ಸೇರಿದಂತೆ ಕೆಸಿಪಿಯ ಒಂದು ಅಡಗುತಾಣದಲ್ಲಿ ಅಪಾರ ಪ್ರಮಾಣದ ಗ್ರೇನೇಡ್ , ಸಿಡಿ ಮದ್ದುಗಳು ಹಾಗೂ ಒಂದು ಬೈನಾಕ್ಯುಲರ್, ಒಂದು ಜಿಪ್ಸಿ ಕಾರು, ಮೂರು ರಕ್ಷಾಕವಚ ಹೆಲ್ಮೆಟ್‌ಗಳು ಮತ್ತು ವಿವಿಧ ಮಿಲಿಟರಿ ಸಮವಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.