Biren Singh: ಮಣಿಪುರದ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿರುವ ಬಿರೇನ್ ಸಿಂಗ್!
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಭಾನುವಾರ(ಫೆ.9) ರಾಜೀನಾಮೆ ಸಲ್ಲಿಸಿದ್ದರು. ಬಿಜೆಪಿ ಪಕ್ಷದ ಒಟ್ಟು 14 ಶಾಸಕರ ಜೊತೆಗೂಡಿ ಬಿರೇನ್ ಸಿಂಗ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ನೀಡಿದ್ದರು.ರಾಜೀನಾಮೆ ನೀಡಿದ ನಂತರವೂ ಬಿರೇನ್ ಮಣಿಪುರದ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Biren Singh

ಇಂಫಾಲ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಣಿಪುರದ(Manipur) ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್(N Biren Singh) ಭಾನುವಾರ(ಫೆ.9) ರಾಜೀನಾಮೆ ಸಲ್ಲಿಸಿದ್ದರು. ಬಿಜೆಪಿ(BJP) ಪಕ್ಷದ ಒಟ್ಟು 14 ಶಾಸಕರ ಜೊತೆಗೂಡಿ ಬಿರೇನ್ ಸಿಂಗ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ(Ajay Kumar Bhalla) ಅವರಿಗೆ ನೀಡಿದ್ದರು. ರಾಜೀನಾಮೆ ನೀಡಿದ ನಂತರವೂ ಬಿರೇನ್ ಮಣಿಪುರದ ಹಂಗಾಮಿ(Caretaker CM) ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಣಿಪುರದ ಬಿಜೆಪಿ ಸರ್ಕಾರದ ಬಗ್ಗೆ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಪ್ರತಿಪಕ್ಷಗಳು ಚರ್ಚೆಯಲ್ಲಿ ತೊಡಗಿದ್ದಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಎನ್. ಬಿರೇನ್ ಸಿಂಗ್ ದಿಢೀರ್ ರಾಜೀನಾಮೆ ಸಲ್ಲಿಸಿದ್ದರು.
ಈಶಾನ್ಯ ರಾಜ್ಯವು ಕಳೆದ ಮೇ 2023 ರಿಂದ ಜನಾಂಗೀಯ ಹಿಂಸಾಚಾರದಿಂದ ನರಳುತ್ತಿದೆ. ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಬಿರೇನ್ ಸಿಂಗ್ ಭೇಟಿಯಾದ ಸ್ವಲ್ಪ ಸಮಯದ ನಂತರ ಇಂಫಾಲ್‌ನಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಇದಕ್ಕೂ ಮೊದಲು ಸಿಂಗ್ ಅವರು ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಶಾಸಕರೊಂದಿಗೆ ಸಿಎಂ ಸೆಕ್ರೆಟರಿಯೇಟ್‌ನಲ್ಲಿ ಸಭೆ ನಡೆಸಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಹೆಸರು ಘೋಷಣೆಯಾಗುವವರೆಗೂ ಮಣಿಪುರದ ಹಂಗಾಮಿ ಮುಖ್ಯಮಂತ್ರಿಯಾಗಿ ಬಿರೇನ್ ಸಿಂಗ್ ಅವರೇ ಮುಂದುವರೆಯಲಿದ್ದಾರೆ.
ಈ ಸುದ್ದಿಯನ್ನೂ ಓದಿ:Delhi CM: ದೆಹಲಿ ಮುಖ್ಯಮಂತ್ರಿ ಪಟ್ಟ ಮಹಿಳೆಗೆ? ಬಿಜೆಪಿ ಹೈಕಮಾಂಡ್‌ನಲ್ಲಿ ಗುಸುಗುಸು!
ಬಿರೇನ್ ಸಿಂಗ್ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಕಾಂಗ್ರೆಸ್ ಶುಕ್ರವಾರ(ಫೆ.7) ಘೋಷಿಸಿತ್ತು. ಇದರ ಬೆನ್ನಲ್ಲೇ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳು ಸಾಕಷ್ಟು ಕುತುಹೂಲ ಮೂಡಿಸಿವೆ.
ಬಿರೇನ್ ಸಿಂಗ್ ರಾಜೀನಾಮೆ: ಸಭೆ ನಡೆಸಿದ ಸಂಬಿತ್ ಪಾತ್ರ
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರ ಸೋಮವಾರ(ಫೆ.10) ಖಾಸಗಿ ಹೋಟೆಲ್‌ವೊಂದರಲ್ಲಿ ಕೆಲವು ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿದ್ದು, ಮುಂದಿನ ಕ್ರಮವನ್ನು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಹಿನ್ನೆಲೆ ಸೋಮವಾರ ಆರಂಭವಾಗಬೇಕಿದ್ದ ರಾಜ್ಯದ ಬಜೆಟ್ ಅಧಿವೇಶನವನ್ನು ಭಾನುವಾರ ರಾತ್ರಿ ರದ್ದುಗೊಳಿಸಲಾಗಿದೆ. ಅಧಿವೇಶನದ ಸಮಯದಲ್ಲಿ ಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿದ್ದವು.