ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುವ ಜನತೆಯ ಸಾಧನೆಗೆ ಡ್ರಗ್ಸ್‌ ದೊಡ್ಡ ಸವಾಲು: ಮನ್‌ ಕೀ ಬಾತ್‌ನಲ್ಲಿ ಜೆನ್‌ ಝೀ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತು

Mann Ki Baat: ದೇಶದ ಯುವ ಜನತೆ ದೊಡ್ಡದಾಗಿ ಕನಸು ಕಾಣುತ್ತಿದ್ದು, ಅದನ್ನು ನೆರವೇರಿಸಲು ಸಾಕಷ್ಟು ಪರಿಶ್ರಮ ಪಡುತ್ತಿದೆ. ಆದರೆ ಮಾದಕ ವಸ್ತುಗಳ ಹಾವಳಿ ಇದಕ್ಕೆ ತಡೆ ಒಡ್ಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್‌ ಕೀ ಬಾತ್‌ನಲ್ಲಿ ತಿಳಿಸಿದರು.

ಭಾರತದ ಪ್ರತಿಭೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ: ಮೋದಿ

ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 29, 2026 3:43 PM

ದೆಹಲಿ, ನ. 29: ದೇಶದ ಯುವ ಜನತೆ ದೊಡ್ಡದಾಗಿ ಕನಸು ಕಾಣುತ್ತಿದ್ದು, ಅದನ್ನು ನೆರವೇರಿಸಲು ಸಾಕಷ್ಟು ಪರಿಶ್ರಮ ಪಡುತ್ತಿದೆ. ಆದರೆ ಮಾದಕ ವಸ್ತುಗಳ ಹಾವಳಿ ಇದಕ್ಕೆ ತಡೆ ಒಡ್ಡುತ್ತಿದೆ. ಯುವ ಜನತೆಯಿಂದ ಡ್ರಗ್ಸ್‌ ದೂರ ಮಾಡುವುದೇ ದೋಡ್ಡ ಸವಾಲು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ತಮ್ಮ ಮಾಸಿಕ ಮನ್‌ ಕೀ ಬಾತ್‌ನ (Mann Ki Baat) 140ನೇ ಸಂಚಿಕೆಯಲ್ಲಿ ಅವರು ಭಾನುವಾರ (ನವೆಂಬರ್‌ 29) ಮಾತನಾಡಿದರು.

ಸಮಾಜದಲ್ಲಿ ಮಾದಕ ವಸ್ತುಗಳ ವಿರುದ್ಧ ಹೋರಾಡುತ್ತಿರುವವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವ ಭಾರತದ ಅಪ್ಲಿಕೇಷನ್‌, ಭಾರತೀಯ ವಸ್ತುಸಂಗ್ರಹಾಲಯಗಳ ಸಾಧನೆ, ದೇಶದ ಚಾಕೊಲೇಟ್ ಉದ್ಯಮದ ಬೆಳವಣಿಗೆ, ದೈಹಿಕ ಕ್ಷಮತೆ (ಫಿಟ್‌ನೆಸ್) ಹಾಗೂ ಚಿತ್ರ ಕಲಾವಿದ ಶೋಭಾ ಸಿಂಗ್ ಅವರ ಕುರಿತಾಗಿಯೂ ಮೋದಿ ಮಾತನಾಡಿದರು.

ಪ್ರಧಾನಿ ಮೋದಿ ಅವರ ಮನ್‌ ಕೀ ಬಾತ್‌:



ʼʼಭಾರತದ ಪ್ರತಿಭೆಗಳ ಬಗ್ಗೆ ಇಂದು ಜಗತ್ತೇ ಮಾತನಾಡುತ್ತಿದೆ. ನಮ್ಮ ಯುವ ಜನತೆ ದೊಡ್ಡದಾಗಿ ಕನಸು ಕಂಡು ಅದನ್ನು ನನಸಾಗಿಸಲು ಕಷ್ಟಪಡುತ್ತಿದೆ. ಅದಾಗ್ಯೂ ಮಾದಕ ವಸ್ತು ಇದಕ್ಕೆಲ್ಲ ದೊಡ್ಡ ಸವಾಲಾಗಿದೆʼʼ ಎಂದು ತಿಳಿಸಿದರು.

ಸೇನೆ ಉಗ್ರರನ್ನು ಸೆದೆಬಡೆದಿದೆ; ಮನ್‌ ಕೀ ಬಾತ್‌ನಲ್ಲಿ ಭಯೋತ್ಪಾದಕ ಶಿಬಿರ ನಾಶವಾದ ಚಿತ್ರ ತೋರಿಸಿದ ಮೋದಿ

ನಶಾ ಮುಕ್ತ ಯುವ ಅಭಿಯಾನ

ಇದೇ ವೇಳೆ ಮೋದಿ ಯುವ ಜನತೆಯನ್ನು ಮಾದಕ ವಸ್ತುಗಳ ಚಟದಿಂದ ಹೊರ ತರುವ ನಶಾ ಮುಕ್ತ ಯುವ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ಕರೆ ನೀಡಿದರು. ಮಾನಸಿಕ ಸ್ಥೈರ್ಯದಿಂದಾಗಿ ಚಟವನ್ನು ಎದುರಿಸಿ ಸಾಧನೆಯ ಹಾದಿಗೆ ಮರಳಿದ ಯುವ ಜನತೆಯ ಉದಾಹರಣೆ ನೀಡಿದರು. ʼʼಅವರು ದಿಟ್ಟ ಹೋರಾಟ ನಡೆಸಿದರು ಇದೀಗ ಹೊಸ ದಿಕ್ಕಿನಲ್ಲಿ ನಡೆಯುತ್ತಿದ್ದಾರೆʼʼ ಎಂದು ಹೇಳಿದರು.

ಯುವಕನೊಬ್ಬನ ಉದಾಹರಣೆಯನ್ನು ಉಲ್ಲೇಖಿಸಿದ ಮೋದಿ ಆತ ಹೇಗೆ ಚಟದಿಂದ ಹೊರಗೆ ಬಂದಿದ್ದಾನೆ ಎನ್ನುವುದನ್ನು ವಿವರಿಸಿದರು. ಆತ ಇಂದಿನ ಯುವ ಜನತೆಗೆ ಸ್ಫೂರ್ತಿ ಎಂದೂ ಹೇಳಿದರು. "ನಮ್ಮ ಯುವ ಪೀಳಿಗೆಯು ಮಾದಕ ವಸ್ತುಗಳಿಂದ ಮುಕ್ತವಾಗಿರುವುದು ನಮ್ಮ ಕುಟುಂಬಕ್ಕೆ ಹಾಗೂ ರಾಷ್ಟ್ರಕ್ಕೆ ಅತ್ಯಂತ ಮುಖ್ಯ" ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಸಂಚಾರ್ ಸಾಥಿ ಪೋರ್ಟಲ್‌

ಸಂಪರ್ಕ ವಿವರಗಳು, ಫೋಟೊ, ವಿಡಿಯೊ, ಪ್ರಮುಖ ದಾಖಲೆಗಳು ಮತ್ತು ಇತರ ಮಾಹಿತಿಯನ್ನು ಒಳಗೊಂಡಿರುವ ಮೊಬೈಲ್ ಫೋನ್ ಕಳೆದುಹೋದಾಗ ಉಂಟಾಗುವ ಸಂಕಷ್ಟದ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಸರ್ಕಾರಿ ಸ್ವಾಮ್ಯದ ಸಂಚಾರ್ ಸಾಥಿ (Sanchar Saathi) ಡಿಜಿಟಲ್ ಪ್ಲಾಟ್‌ಫಾರ್ಮ್, ಕಳೆದುಹೋದ ಎಲೆಕ್ಟ್ರಿಕ್‌ ಉಪಕರಣಗಳನ್ನು ಮರಳಿ ಪಡೆಯಲು ಜನರಿಗೆ ಸಹಾಯ ಮಾಡಬಲ್ಲದು ಎಂದು ಹೇಳಿದರು.

"ಇಲ್ಲಿಯವರೆಗೆ, 'ಸಂಚಾರ್ ಸಾಥಿ' ಪೋರ್ಟಲ್‌ಗೆ 30 ಕೋಟಿಗೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಈ ಆ್ಯಪನ್ನು ಸುಮಾರು 3 ಕೋಟಿ ಬಾರಿ ಡೌನ್‌ಲೋಡ್ ಮಾಡಲಾಗಿದೆ" ಎಂದು ಅವರು ತಿಳಿಸಿದರು. ಈ ಅಪ್ಲಿಕೇಷನ್‌ ಮೂಲಕ ಕಳೆದು ಹೋದ 14 ಲಕ್ಷಕ್ಕೂ ಹೆಚ್ಚು ಮೊಬೈಲ್‌ ಫೋನ್‌ಗಳನ್ನುವ ವಾರಸುದಾರರಿಗೆ ಮರಳಿಸಲಾಗಿದೆ ಎಂದರು.

ಭಾರತೀಯ ವಸ್ತುಸಂಗ್ರಹಾಲಯಗಳ ಸಾಧನೆ

ಇದೇ ವೇಳೆ ಮೋದಿ ಭಾರತೀಯ ವಸ್ತುಸಂಗ್ರಹಾಲಯಗಳ ಸಾಧನೆಗಳನ್ನು ಎತ್ತಿ ತೋರಿಸಿ ಬಿಹಾರದ ಪಾಟ್ನಾದಲ್ಲಿರುವ ಬಿಹಾರ ಮ್ಯೂಸಿಯಂ ವಿಶ್ವದ ಅತ್ಯುತ್ತಮ 100 ವಸ್ತುಸಂಗ್ರಹಾಲಯಗಳ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದಿದೆ ಮತ್ತು ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಮನ್‌ ಕೀ ಬಾತ್‌ನಲ್ಲಿ ಕಲಬುರಗಿ ರೊಟ್ಟಿಯ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ!

ಭಾರತೀಯ ಚಾಕೊಲೇಟ್‌ ಉಲ್ಲೇಖ

ಭಾರತೀಯ ಚಾಕೊಲೇಟ್‌ಗಳು ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸುತ್ತಿವೆ ಎಂದು ಮೋದಿ ಹೇಳಿದರು. ಕಳೆದ ವರ್ಷ ಚಾಕೊಲೇಟ್ ಮತ್ತು ಕೋಕೋ ಆಧಾರಿತ ಉತ್ಪನ್ನಗಳ ರಫ್ತು ಸುಮಾರು ಶೇಕಡಾ 25ರಷ್ಟು ಹೆಚ್ಚಾಗಿದೆ. ಈ ವಲಯದಲ್ಲಿರುವ ಸ್ಟಾರ್ಟ್-ಅಪ್‌ಗಳು ನಾವೀನ್ಯತೆಯನ್ನು ಉತ್ತೇಜಿಸುತ್ತಿವೆ ಎಂದರು.

ಚಳಿಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಫಿಟ್‌ನೆಸ್‌ನತ್ತ ಗಮನಹರಿಸುವಂತೆ ಮತ್ತು ಫಿಟ್ ಇಂಡಿಯಾ ಮೂವ್‌ಮೆಂಟ್ (Fit India Movement) ಅನ್ನು ಬೆಂಬಲಿಸುವುದನ್ನು ಮುಂದುವರಿಸುವಂತೆ ಕರೆ ನೀಡಿದರು. ಅಲ್ಲದೆ ಆಹಾರ ಕ್ರಮದಲ್ಲಿ ಎಣ್ಣೆಯ ಬಳಕೆಯನ್ನು ಶೇಕಡಾ 10ರಷ್ಟು ಕಡಿಮೆ ಮಾಡುವಂತೆ ಸೂಚಿಸಿದರು. ಇದೇ ವೇಳೆ ಚಿತ್ರ ಕಲಾವಿದ ಶೋಭಾ ಸಿಂಗ್‌ ಅವರ ಬಗ್ಗೆಯೂ ಮೆಚ್ಚುಗೆ ಸೂಚಿದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.