ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 11 ಸಾವು, ಹಲವರ ಸ್ಥಿತಿ ಗಂಭೀರ; ರಕ್ಷಣಾ ಕಾರ್ಯಾಚರಣೆ ಚುರುಕು

Massive Explosion at Firecracker Factory: ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, 11 ಜನರು ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಸಂಭವಿಸಿದೆ. ಸ್ಥಳದಲ್ಲಿ ಸುಮಾರು ಎಂಟರಿಂದ 10 ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.

ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 11 ಮಂದಿ ಸಾವು

ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ -

Priyanka P
Priyanka P Aug 31, 2026 6:45 PM

ಲಖನೌ, ಆ. 31: ಉತ್ತರ ಪ್ರದೇಶದ (Uttar Pradesh) ಕೌಶಂಬಿ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ (Explosion) ಸಂಭವಿಸಿದ್ದು, 11 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಕಾರ್ಖಾನೆಯೇ ಸಂಪೂರ್ಣ ನಾಶವಾಗಿದೆ. 11 ಜನರು ಮೃತಪಟ್ಟಿದ್ದಾರೆಂದು ಕೌಶಂಬಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಪಾಲ್ ದೃಢಪಡಿಸಿದ್ದಾರೆ. ಇನ್ನೂ ಹಲವರಿಗೆ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ರಕ್ಷಣಾ ತಂಡಗಳು ಇನ್ನೂ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುತ್ತಿದ್ದು, ಹಲವು ಜನರು ಸಿಲುಕಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳದಲ್ಲಿ ಸುಮಾರು 8ರಿಂದ 10 ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದ್ದು, ಸುಮಾರು ನಾಲ್ಕು ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಐಜಿ ಮತ್ತು ಡಿಐಜಿಯಂತಹ ಹಿರಿಯ ಅಧಿಕಾರಿಗಳು ಸೇರಿ ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ:



ಹಲವರು ಇನ್ನೂ ನಾಪತ್ತೆಯಾಗಿದ್ದಾರೆ. ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ತಂಡಗಳು ಸಹ ಸ್ಥಳಕ್ಕೆ ತಲುಪಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿವೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ಸಾವುನೋವುಗಳು ಮತ್ತು ಗಾಯಗೊಂಡವರ ಸಂಖ್ಯೆಯನ್ನು ದೃಢೀಕರಿಸಲಾಗುವುದು ಎಂದು ಆಡಳಿತ ಹೇಳಿದೆ.

ಬಿಜೆಪಿ ಶಾಸಕರ ನಿವಾಸದ ಆವರಣದಲ್ಲಿ ಸ್ಫೋಟ! ಹೆಚ್ಚಿದ ಭೀತಿ

50 ಮೀಟರ್ ವ್ಯಾಪ್ತಿಯೊಳಗಿನ ಮನೆಗಳಿಗೆ ಹಾನಿ

ಸ್ಫೋಟದ ತೀವ್ರತೆಗೆ ಪಟಾಕಿ ಕಾರ್ಖಾನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸುತ್ತಮುತ್ತಲಿನ ಪ್ರದೇಶದಲ್ಲೂ ಇದರ ಪರಿಣಾಮ ಕಂಡುಬಂದಿದ್ದು, ಕಾರ್ಖಾನೆಯಿಂದ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿ ಐದರಿಂದ ಏಳು ಮನೆಗಳು ಹಾನಿಗೊಳಗಾಗಿವೆ.

ಸ್ಫೋಟದ ಶಬ್ಧ ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಕೇಳಿಬಂದಿದೆ. ಸ್ಫೋಟದ ನಂತರ, ಆಕಾಶಕ್ಕೆ ಹೊಗೆ ಏರುತ್ತಿರುವುದು ಕಂಡುಬಂದಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಆವರಿಸಿತು. ಸಣ್ಣ ಬೆಂಕಿಯುಂಟಾಗಿ ಅದು ಭಾರಿ ಸ್ಫೋಟಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಫೋಟ ಸಂಭವಿಸಿದಾಗ ಸುಮಾರು 25 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಖಾನೆಯು ಕೌಶಂಬಿಯ ಪುರಾಮುಫ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೌರಿ ಪ್ರದೇಶದಲ್ಲಿದೆ. ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಆಡಳಿತ ತಂಡಗಳನ್ನು ನಿಯೋಜಿಸಲಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಮತ್ತು ಅವಶೇಷಗಳನ್ನು ತೆರವುಗೊಳಿಸಲು ತಂಡಗಳು ಕೆಲಸ ಮಾಡುತ್ತಿವೆ. ಇನ್ನೂ ಸಿಕ್ಕಿಬಿದ್ದಿರಬಹುದಾದವರನ್ನು ಪತ್ತೆಹಚ್ಚಲು ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ.