ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mizoram: ದೇಶದ ಮೊದಲ ಸಂಪೂರ್ಣ ಸಾಕ್ಷರತೆ ಹೊಂದಿದ ರಾಜ್ಯ ಮಿಜೋರಾಂ

ಮಿಜೋರಾಂ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಲಾಲ್ದುಹೋಮಾ ಮಿಜೋರಾಂ ಅನ್ನು ದೇಶದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯವೆಂದು ಘೋಷಿಸಿದರು. ರಾಜ್ಯ ಸಾಕ್ಷರತೆಯಲ್ಲಿ 2011ರ ಜನಗಣತಿಯಲ್ಲಿ 3ನೇ ಸ್ಥಾನ ಪಡೆದಿತ್ತು. ಈ ಜನಗಣತಿಯ ಪ್ರಕಾರ ರಾಜ್ಯವು ಶೇ. 91.33ರಷ್ಟು ಸಾಕ್ಷರತೆಯನ್ನು ಹೊಂದಿ, ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು ಎಂದು ಲಾಲ್ದುಹೋಮಾ ತಿಳಿಸಿದ್ದಾರೆ.

ದೇಶದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ  ಮಿಜೋರಾಂ

ಐಜ್ವಾಲ್: ಮಿಜೋರಾಂ (Mizoram) ಈಗ ದೇಶದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯವೆಂದು ಗುರುತಿಸಲ್ಪಟ್ಟಿದೆ. ಮಿಜೋರಾಂ ವಿಶ್ವವಿದ್ಯಾಲಯದಲ್ಲಿ (Mizoram University) ಮಂಗಳವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಲಾಲ್ದುಹೋಮಾ (Chief Minister Lalduhoma) ಅವರು ಮಿಜೋರಾಂ ಅನ್ನು ದೇಶದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯವೆಂದು ಘೋಷಿಸಿದರು. ಸಾಕ್ಷರತೆಯಲ್ಲಿ 2011ರ ಜನಗಣತಿಯಲ್ಲಿ 3ನೇ ಸ್ಥಾನ ಪಡೆದಿತ್ತು. ಈ ಜನಗಣತಿಯ ಪ್ರಕಾರ ರಾಜ್ಯವು ಶೇಕಡಾ 91.33 ರಷ್ಟು ಸಾಕ್ಷರತೆಯನ್ನು ಹೊಂದಿದ್ದ ರಾಜ್ಯವಾಗಿ ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು ಎಂದು ಈ ಸಂದರ್ಭದಲ್ಲಿ ಲಾಲ್ದುಹೋಮಾ ತಿಳಿಸಿದ್ದಾರೆ.

ಮಿಜೋರಾಂ ವಿಶ್ವವಿದ್ಯಾಲಯದಲ್ಲಿ (MZU) ನಡೆದ ಸಮಾರಂಭದಲ್ಲಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಿಜೋರಾಂ ಈಗ ದೇಶದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯವೆಂದು ಮುಖ್ಯಮಂತ್ರಿ ಲಾಲ್ದುಹೋಮಾ ಘೋಷಿಸಿದರು.

ಅವರು ತಮ್ಮ ಮಾತನ್ನು ಮುಂದುವರಿಸಿ, ʼʼನಾವು ಈ ಸಾಧನೆಯನ್ನು ಆಚರಿಸುತ್ತಿರುವ ನಡುವೆಯೇ ನಿರಂತರ ಶಿಕ್ಷಣ, ಡಿಜಿಟಲ್ ಪ್ರವೇಶ ಮತ್ತು ವೃತ್ತಿಪರ ಕೌಶಲ ತರಬೇತಿಯ ಮೂಲಕ ಸಾಕ್ಷರತೆಯನ್ನು ಉಳಿಸಿಕೊಳ್ಳಲು ನಮ್ಮ ಬದ್ಧತೆಯನ್ನು ತೋರುತ್ತಿದ್ದೇವೆʼʼ ತಿಳಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲೂ ಮಾಹಿತಿ ನೀಡಿರುವ ಅವರು, ಈಗ ನಾವು ಹೆಚ್ಚಿನ ಗುರಿಯನ್ನು ಹೊಂದೋಣ. ಎಲ್ಲ ಮಿಜೋಗಳಿಗೆ ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ ಮತ್ತು ಉದ್ಯಮಶೀಲತಾ ಕೌಶಲವನ್ನು ನೀಡೋಣ ಎಂದು ಕರೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ, ಶೈಕ್ಷಣಿಕ ಸಾಧನೆಗಾಗಿ ರಾಜ್ಯ ಸರ್ಕಾರ ಮತ್ತು ಜನರನ್ನು ಅಭಿನಂದಿಸಿದರು.



ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಾವು ಮಿಜೋರಾಂ ಅನ್ನು ಮೊದಲ ಸಂಪೂರ್ಣ ಸಾಕ್ಷರ ರಾಜ್ಯವೆಂದು ಹೆಮ್ಮೆಯಿಂದ ಘೋಷಿಸಿದ್ದೇವೆ. ಈ ಸಾಧನೆಗಾಗಿ ಮಿಜೋರಾಂ ಜನರಿಗೆ ಮತ್ತು ಮುಖ್ಯಮಂತ್ರಿ ಲಾಲ್ದುಹೋಮ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಈ ಸಾಧನೆಗಾಗಿ ಶಿಕ್ಷಣ ಸಚಿವ ಡಾ. ವನ್ಲಾಲ್ ತಾನಾ ಅವರಿಗೆ ವಿಶೇಷ ಧನ್ಯವಾದಗಳು. ಮಿಜೋರಾಂ ಕೈಗೊಂಡಿರುವ ಗಮನಾರ್ಹ ಪ್ರಗತಿಯ ಪ್ರಯಾಣದಲ್ಲಿ ಹಿಂದಿನ ರಾಜ್ಯ ಸರ್ಕಾರಗಳ ಕಾರ್ಯವನ್ನು ಮುಖ್ಯಮಂತ್ರಿ ಶ್ಲಾಘಿಸಿದ್ದಾರೆ. ಶಿಕ್ಷಿತ್, ಕುಶಾಲ್ ಮತ್ತು ಆತ್ಮನಿರ್ಭರ್ ಭಾರತ್ ಅನ್ನು ಮುಂದುವರಿಸುವಲ್ಲಿ ಈಶಾನ್ಯವು ಮುಂದುವರಿಯಲಿ ಎಂದು ಅವರು ಹೇಳಿದ್ದಾರೆ.



2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಶೇ. 91.33ರಷ್ಟು ಸಾಕ್ಷರರಿದ್ದರು. ಹೀಗಾಗಿ ಉಳಿದ ಅನಕ್ಷರಸ್ಥರನ್ನು ಗುರುತಿಸಲು ಮತ್ತು ಶಿಕ್ಷಣ ನೀಡಲು ಉಲ್ಲಾಸ್ ಹಾಗೂ ಸಮಾಜದಲ್ಲಿ ಎಲ್ಲರಿಗೂ ಜೀವನಪರ್ಯಂತ ಕಲಿಕೆಯ ತಿಳುವಳಿಕೆ ನೀಡಲು ನವ ಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: International Tea Day 2025: ಇಂದು ಅಂತಾರಾಷ್ಟ್ರೀಯ ಚಹಾ ದಿನ; ಏನಿದರ ವೈಶಿಷ್ಟ್ಯ?

2011ರ ಜನಗಣತಿ ದತ್ತಾಂಶದ ಆಧಾರದ ಮೇಲೆ ಸಮೀಕ್ಷೆಗಳನ್ನು ನಡೆಸಲಾಗಿದ್ದು, 3,026 ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಅವರಲ್ಲಿ 1,692 ಜನರು ಕಲಿಯುವವರು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಮತ್ತು ಕ್ಲಸ್ಟರ್ ಸಂಪನ್ಮೂಲ ಕೇಂದ್ರ ಸಂಯೋಜಕರು ಸೇರಿದಂತೆ ಒಟ್ಟು 292 ಸ್ವಯಂಸೇವಕ ಶಿಕ್ಷಕರು ಈ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ. ಸಾಮೂಹಿಕ ಪ್ರಯತ್ನ, ಸಮರ್ಪಣೆ ಮತ್ತು ಸಮುದಾಯದ ಸಿದ್ಧತೆಯು ಮಿಜೋರಾಂ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.