ರಾಷ್ಟ್ರೀಯ ಹೆದ್ದಾರಿ ಹೊಸ ಮಾಸಿಕ ಟೋಲ್ ಪಾಸ್; ಏನು ಇದರ ವಿಶೇಷ, ಪಡೆಯುವುದು ಹೇಗೆ ?
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿಜಿಟಲ್ ಫಾಸ್ಟ್ ಟ್ಯಾಗ್ ಲೋಕಲ್ ಪಾಸ್ ಸೌಲಭ್ಯವನ್ನು ದೇಶಾದ್ಯಂತ 121 ಟೋಲ್ ಪ್ಲಾಜಾಗಳಿಗೆ ವಿಸ್ತರಿಸಿದೆ. ಪ್ರಯಾಣಿಕರು ಈ ಮಾಸಿಕ ಪಾಸ್ ಅನ್ನು ತಮ್ಮ ಮೊಬೈಲ್ ಮೂಲಕ ಕುಳಿತಲ್ಲಿಂದವೇ ಪಡೆಯಬಹುದಾಗಿದೆ. ಇದಕ್ಕಾಗಿ ಏನು ಮಾಡಬೇಕು, ಈ ಪಾಸ್ ನ ವಿಶೇಷತೆಗಳೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (National Highways Authority of India) ಹೊಸ ಮಾಸಿಕ ಟೋಲ್ ಪಾಸ್ (Monthly Toll Pass) ಅನ್ನು ಬಿಡುಗಡೆ ಮಾಡಿದೆ. ಇದನ್ನು ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲೇ ಖರೀದಿ ಮಾಡಬಹುದು. ಮಾಸಿಕ 350 ರೂಪಾಯಿಯ ಈ ಪಾಸ್ (toll pas)ನಲ್ಲಿ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ (National highway) ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ನಾಗರಿಕ ಸ್ನೇಹಿಯನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತಿಳಿಸಿದೆ.
ಡಿಜಿಟಲ್ ಫಾಸ್ಟ್ ಟ್ಯಾಗ್ ಲೋಕಲ್ ಪಾಸ್ ಸೌಲಭ್ಯವನ್ನು ದೇಶಾದ್ಯಂತ 121 ಟೋಲ್ ಪ್ಲಾಜಾಗಳಿಗೆ ವಿಸ್ತರಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸ್ಥಳೀಯ ಪ್ರಯಾಣಿಕರಿಗೆ ಮಾಸಿಕ ಪಾಸ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ವೈಯಕ್ತಿಕವಾಗಿ ಟೋಲ್ ಪ್ಲಾಜಾಗೆ ಭೇಟಿ ನೀಡಬೇಕಾಗಿಲ್ಲ ಅಥವಾ ಯಾವುದೇ ರೀತಿಯ ಭೌತಿಕ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ನೇರವಾಗಿ ರಾಜಮಾರ್ಗಯಾತ್ರೆ ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಅನ್ನು ಪಡೆಯಬಹುದು ಎಂದು ಹೇಳಿದೆ.
ಜೆನ್ ಝೀ ಹೋರಾಟ ಆಯ್ತು, ಇದೀಗ ಬೀದಿಗಿಳಿದ ಜೆನ್ ಆಲ್ಫಾ ಸಮುದಾಯ: ಶಾಸಕರ ವಾಹನ ತಡೆದು, ಕಳಪೆ ರಸ್ತೆ ಬಗ್ಗೆ ಆಕ್ರೋಶ
ಯಾರು ಪಡೆಯಬಹುದು? ಏನು ಪ್ರಯೋಜನ ?
ಮಾಸಿಕ 350 ರೂಪಾಯಿಯ ಈ ಪಾಸ್ ಟೋಲ್ ಪ್ಲಾಜಾದ 20 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳಿಗೆ ನೀಡಲಾಗುತ್ತದೆ. ಅರ್ಹರು ಟೋಲ್ ಪ್ಲಾಜಾ ಮೂಲಕ ಅನಿಯಮಿತ ಪ್ರಯಾಣಕ್ಕಾಗಿ ಈ ಪಾಸ್ ಅನ್ನು ಬಳಸಬಹುದು. 350 ರೂಪಾಯಿಗಳಿಂದ ಪ್ರಾರಂಭವಾಗುವ ಮಾಸಿಕ ಸ್ಥಳೀಯ ಪಾಸ್ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಈ ಪಾಸ್ ಸದ್ಯಕ್ಕೆ ಎಲ್ಲಾ ಟೋಲ್ ಪ್ಲಾಜಾದಲ್ಲಿ ಲಭ್ಯವಿಲ್ಲ. ಹೀಗಾಗಿ ಪ್ರಯಾಣಿಕರು ಮೊದಲು ತಮ್ಮ ಟೋಲ್ ಪ್ಲಾಜಾ ಡಿಜಿಟಲ್ ಸೌಲಭ್ಯವನ್ನು ಹೊಂದಿರುವ 121 ಸ್ಥಳಗಳಲ್ಲಿ ಒಂದಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ರಾಜಮಾರ್ಗಯಾತ್ರೆ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಥಳೀಯ ಪಾಸ್‌ಗೆ ಅರ್ಜಿ ಸಲ್ಲಿಸಬಹುದು.ಇದಕ್ಕಾಗಿ ವಸತಿ ವಿಳಾಸ, ವಾಹನ ವಿವರಗಳು ಮತ್ತು ಲಿಂಕ್ ಮಾಡಲಾದ ಫಾಸ್ಟ್‌ಟ್ಯಾಗ್ ಸೇರಿದಂತೆ ಹಲವು ಮಾಹಿತಿಯನ್ನು ಒದಗಿಸಬೇಕು. ಪ್ರಯಾಣಿಕರು ನೀಡುವ ಮಾಹಿತಿಯನ್ನು ಡಿಜಿಲಾಕರ್ ಮತ್ತು ವಾಹನ್‌ನಂತಹ ಡಿಜಿಟಲ್ ಸರ್ಕಾರಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೊಂದಿಕೆಯಾಗುವುದೇ ಎಂಬುದನ್ನು ಪರಿಶೀಲಿಸಿದ ಬಳಿಕ ಪಾಸ್ ಮಂಜೂರು ಮಾಡಲಾಗುತ್ತದೆ. ಇದಕ್ಕಾಗಿ ಅರ್ಜಿದಾರರ ವಿಳಾಸವು ಜಿಐಎಸ್ ಆಧಾರಿತ ಪರಿಶೀಲನೆಯಲ್ಲಿ ಟೋಲ್ ಪ್ಲಾಜಾದ ನಿಗದಿತ 20 ಕಿಮೀ ವ್ಯಾಪ್ತಿಯೊಳಗೆ ಬರುತ್ತದೆಯೇ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತದೆ.
ಯಾವ ದಾಖಲೆ ಪರಿಶೀಲನೆ?
ವಸತಿ ವಿಳಾಸ, ವಾಹನ ವಿವರಗಳು, ವಾಹನಕ್ಕೆ ಲಿಂಕ್ ಮಾಡಲಾದ ಫಾಸ್ಟ್ ಟ್ಯಾಗ್ , ಟೋಲ್ ಪ್ಲಾಜಾಗೆ ಸಂಬಂಧಿಸಿದಂತೆ ನೋಂದಾಯಿತ ವಿಳಾಸದ ಸ್ಥಳ ವಿವರಗಳನ್ನು ಡಿಜಿಟಲ್ ದಾಖಲೆಗಳ ಮೂಲಕವೇ ಪರಿಶೀಲನೆ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಎಲ್ಲಿ ಲಭ್ಯ?
ಈ ಪಾಸ್ ಅನ್ನು ದೇಶಾದ್ಯಂತ ಇರುವ 121 ಟೋಲ್ ಪ್ಲಾಜಾಗಳಲ್ಲಿ ಲಭ್ಯವಾಗಲಿದೆ. ಇದಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ರಾಜಮಾರ್ಗಯಾತ್ರೆ ಪೋರ್ಟಲ್ ನಲ್ಲಿ ಅರ್ಹ ಟೋಲ್ ಪ್ಲಾಜಾಗಳ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ಈ ಸೌಲಭ್ಯವನ್ನು ಮೊದಲು ಜುಲೈ ತಿಂಗಳಲ್ಲಿ ದೆಹಲಿಯ ಅರ್ಬನ್ ಎಕ್ಸ್‌ಟೆನ್ಶನ್ ರೋಡ್-II (UER-II) ನಲ್ಲಿರುವ ಮುಂಡ್ಕಾ-ಬಕ್ಕರ್‌ವಾಲಾ ಟೋಲ್ ಪ್ಲಾಜಾದಲ್ಲಿ ಪರಿಚಯಿಸಲಾಯಿತು. ಇದರ ಬಳಿಕ ಇದೀಗ 120ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಿಗೆ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವರಿ ಟೋಲ್ ಪ್ಲಾಜಾಗಳಲ್ಲಿ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಸಚಿವಾಲಯ ಹೇಳಿದೆ.