ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಸ್ವಾತಂತ್ರ್ಯ ಸಿಕ್ಕಿ 80 ವರ್ಷ ಕಳೆದರೂ ಸರ್ಕಾರಿ ಶಾಲೆಯ ಸ್ಥಿತಿ ಸುಧಾರಿಸಿಲ್ಲʼʼ: ಜಂತರ್‌ ಮಂತರ್‌ ಪ್ರತಿಭಟನೆ ಬಳಿಕ ಮತ್ತೊಂದು ಅಭಿಯಾನ ಆರಂಭಿಸಿದ ಅಭಿಜಿತ್‌ ದೀಪ್ಕೆ

CJP new campaign: ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದ್ದಾರೆ. 2026ರ ಆಗಸ್ಟ್ 15ರಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಜನರು ಈ ಉದ್ದೇಶಕ್ಕಾಗಿ ಪ್ರತಿಜ್ಞೆ ಮಾಡುವಂತೆ ದೀಪ್ಕೆ ಕರೆ ನೀಡಿದರು.

ಹೊಸ ಅಭಿಯಾನ ಆರಂಭಿಸಿದ ಸಿಜೆಪಿಯ ಅಭಿಜಿತ್‌ ದೀಪ್ಕೆ

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ (ಸಂಗ್ರಹ ಚಿತ್ರ) -

Priyanka P
Priyanka P Aug 11, 2026 3:11 PM

ನವದೆಹಲಿ, ಆ.11: ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijit Dipke), ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯನ್ನು ಗ್ರಾಮದ ಮುಖ್ಯಸ್ಥರು ಮತ್ತು ಪೋಷಕರು ವಹಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ. ಆಗಸ್ಟ್ 15ರಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಜನರು ಈ ಉದ್ದೇಶಕ್ಕಾಗಿ ಪ್ರತಿಜ್ಞೆ ಮಾಡುವಂತೆ ದೀಪ್ಕೆ ಸೂಚಿಸಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೊ ಸಂದೇಶದಲ್ಲಿ, 80 ವರ್ಷಗಳಿಂದ ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ದೀಪ್ಕೆ ಹೇಳಿದ್ದಾರೆ. ಇಂದಿಗೂ ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿಯಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.

“ನಾವು ಹೊಸ ಸಂಸತ್ತು, ಹೊಸ ಪ್ರಧಾನಿ ಭವನವನ್ನು ನಿರ್ಮಿಸಿದ್ದೇವೆ. ಆದರೆ ನಮ್ಮ ಹಳ್ಳಿಗಳಲ್ಲಿ ಹೊಸ ಶಾಲೆಗಳನ್ನು ಏಕೆ ನಿರ್ಮಿಸಲು ಸಾಧ್ಯವಾಗಲಿಲ್ಲ? ಹಳ್ಳಿಗಳಲ್ಲಿರುವ ರೈತರು ಮತ್ತು ಕಾರ್ಮಿಕರ ಮಕ್ಕಳನ್ನು ನಮ್ಮ ದೇಶದ ಭವಿಷ್ಯವೆಂದು ನಾವು ಪರಿಗಣಿಸುವುದಿಲ್ಲವೆ? ಆ ಮಕ್ಕಳಿಗಾಗಿ ನಾವು ಏನು ಮಾಡಿದ್ದೇವೆ? ನಗರದಲ್ಲಿ ಮಗುವಿಗೆ ಸಿಗುವ ಸೌಲಭ್ಯಗಳನ್ನು ಅವರಿಗೆ ಒದಗಿಸಲು ನಮಗೆ ಏಕೆ ಸಾಧ್ಯವಾಗುತ್ತಿಲ್ಲ?” ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.

ಇಲ್ಲಿದೆ ವಿಡಿಯೊ:



“ಹಳ್ಳಿಯ ಮಕ್ಕಳು ಶಾಲೆಗೆ ಬಹಳ ದೂರ ನಡೆದುಕೊಂಡು ಹೋಗಬೇಕಾಗಿದೆ. ಅವರಿಗೆ ಅಲ್ಲಿ ನೀರು ಅಥವಾ ಶೌಚಾಲಯ ಸೌಲಭ್ಯಗಳಿಲ್ಲ. ಹೆಣ್ಣುಮಕ್ಕಳಿಗೆ ಎಷ್ಟು ಕಷ್ಟವಾಗಬಹುದು? ಹೀಗಾಗಿ, ಈ ಆಗಸ್ಟ್ 15ರಂದು ನಾವು ನಮ್ಮ ದೇಶದ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಸರಿ ಮಾಡುವ ಬಗ್ಗೆ, ಹೊಸ ಆರಂಭದ ಬಗ್ಗೆ ಮಾತನಾಡಬೇಕು. ನಮ್ಮ ಸರ್ಕಾರಿ ಶಾಲೆಗಳನ್ನು ಸರಿಪಡಿಸುವ ಮೂಲಕ ಆಂದೋಲನ ಪ್ರಾರಂಭಿಸಬೇಕು” ಎಂದು ದೀಪ್ಕೆ ಹೇಳಿದ್ದಾರೆ.

ನೇಮಕಾತಿ ವಿಳಂಬ ಖಂಡಿಸಿ ಹುಲ್ಲು ತಿಂದು ಪ್ರತಿಭಟನೆ ನಡೆಸಿದ ರ್‍ಯಾಂಕ್ ವಿಜೇತ ಉದ್ಯೋಗಾರ್ಥಿಗಳು

ಮಹಾರಾಷ್ಟ್ರದ ಮರಾಠವಾಡದಲ್ಲಿರುವ ತಮ್ಮ ಗ್ರಾಮ ಹಿಂಗೋಲಿಗೆ ತೆರಳಿ, ಅಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸುವಂತೆ ಮುಖ್ಯಸ್ಥರನ್ನು ವಿನಂತಿಸುವುದಾಗಿ ಅವರು ಘೋಷಿಸಿದ್ದಾರೆ. ತಮ್ಮ ವಿಡಿಯೊ ನೋಡುತ್ತಿರುವ ಎಲ್ಲ ಗ್ರಾಮದ ಮುಖ್ಯಸ್ಥರು ತಮ್ಮ ತಮ್ಮ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುವಂತೆ ದೀಪ್ಕೆ ಮನವಿ ಮಾಡಿದ್ದಾರೆ. ಅವರು ನೀಡುವ ಕೊಡುಗೆಯನ್ನು ಸಿಜೆಪಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಗ್ರಾಮದ ಮುಖ್ಯಸ್ಥರು ಕೈಗೊಳ್ಳುವ ಈ ಕ್ರಮವು ಇತರರಿಗೆ ಸ್ಫೂರ್ತಿ ನೀಡುತ್ತದೆ. ಪೋಷಕರು ತಮ್ಮ ಮಕ್ಕಳ ಶಾಲೆಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸುವಂತೆ ಮತ್ತು ಮೂಲಭೂತ ಸೌಲಭ್ಯಗಳು ಲಭ್ಯವಿದೆಯೇ ಎಂದು ಪರಿಶೀಲಿಸುವಂತೆ ದೀಪ್ಕೆ ಕರೆ ನೀಡಿದ್ದಾರೆ.

“ವಿದ್ಯುತ್ ಇದೆಯೇ, ನೀರು ಇದೆಯೇ ಮತ್ತು ಶೌಚಾಲಯ ಸೌಲಭ್ಯಗಳಿವೆಯೇ? ಎಂಬುದನ್ನು ಗಮನಿಸಿ. ಮಕ್ಕಳಿಗೆ ಮಧ್ಯಾಹ್ನದ ಊಟ ಸಿಗುತ್ತದೆಯೇ? ಇವುಗಳು ಇಲ್ಲದಿದ್ದರೆ ವಿಡಿಯೊ ಮಾಡಿ. ಏಕೆಂದರೆ ನಿಮ್ಮ ಮಕ್ಕಳ ಶಾಲಾ ಶಿಕ್ಷಣ ಚೆನ್ನಾಗಿರಬೇಕು. ಅದು ನಿಮ್ಮ ಮಕ್ಕಳ ಮೂಲಭೂತ ಹಕ್ಕು” ಎಂದು ಅವರು ಸಲಹೆ ನೀಡಿದ್ದಾರೆ.