ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nirmala Sitharaman: ಬಜೆಟ್‌ ಲೋಗೋದಲ್ಲಿ ಕರೆನ್ಸಿ ಚಿಹ್ನೆ ₹ ಬದಲಾಯಿಸಿದ ತಮಿಳುನಾಡು ಸರ್ಕಾರದ ವಿರುದ್ಧ ಸಚಿವೆ ನಿರ್ಮಲಾ ಗರಂ

Nirmala Sitharaman: ಎಂ.ಕೆ.ಸ್ಟಾಲಿನ್‌ ನೇತೃತ್ವದ ತಮಿಳುನಾಡಿನ ಡಿಎಂಕೆ ಸರ್ಕಾರ ರಾಷ್ಟ್ರೀಯ ಕರೆನ್ಸಿ ರೂಪಾಯಿಯ ಚಿಹ್ನೆ (₹) ದೇವನಾಗರಿ ಲಿಪಿಯಲ್ಲಿದೆ ಎನ್ನುವ ಕಾರಣಕ್ಕೆ ಅದನ್ನು ಬಜೆಟ್‌ ಲೋಗೋದಲ್ಲಿ ಬದಲಾಯಿಸುವ ಸಾಹಸಕ್ಕೆ ಕೈ ಹಾಕಿದೆ. ಈ ಕ್ರಮದ ವಿರುದ್ಧ ವಿತ್ತ ಸಚಿವೆ ನಿರ್ಮ ಸೀತಾರಾಮನ್‌ ಕಿಡಿಕಾರಿದ್ದಾರೆ.

ತಮಿಳುನಾಡು ಸರ್ಕಾರದ ವಿರುದ್ಧ ವಿತ್ತ ಸಚಿವೆ ಗರಂ ಅಗಿದ್ದೇಕೆ?

ನಿರ್ಮಲಾ ಸೀತಾರಾಮನ್‌ ಮತ್ತು ಎಂ.ಕೆ.ಸ್ಟಾಲಿನ್‌.

Profile Ramesh B Mar 13, 2025 11:28 PM

ಹೊಸದಿಲ್ಲಿ: ಕೇಂದ್ರದೊಂದಿಗಿನ ತಮಿಳುನಾಡು ಸರ್ಕಾರದ ಭಾಷಾ ಸಮರ ತಾರಕಕ್ಕೇರಿದೆ. ಎಂ.ಕೆ.ಸ್ಟಾಲಿನ್‌ (MK Stalin) ನೇತೃತ್ವದ ಡಿಎಂಕೆ (DMK) ಸರ್ಕಾರ ರಾಷ್ಟ್ರೀಯ ಕರೆನ್ಸಿ ರೂಪಾಯಿಯ ಚಿಹ್ನೆ (₹) ದೇವನಾಗರಿ ಲಿಪಿಯಲ್ಲಿದೆ ಎನ್ನುವ ಕಾರಣಕ್ಕೆ ಅದನ್ನು ಬಜೆಟ್‌ ಲೋಗೋದಲ್ಲಿ ಬದಲಾಯಿಸುವ ಸಾಹಸಕ್ಕೆ ಕೈ ಹಾಕಿದೆ. 2025-26ರ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರವಾಗಿ ಬದಲಾಯಿಸಿದ್ದಕ್ಕೆ ಇದೀಗ ಬಿಜೆಪಿ ಕೆರಳಿ ಕೆಂಡವಾಗಿದ್ದು, ಡಿಎಂಕೆ ವಿರುದ್ದ ಮುಗಿಬಿದ್ದಿದೆ. ಹೊತ್ತಿ ಉರಿಯುತ್ತಿರುವ ಈ ಸಮರಕ್ಕೆ ಇದೀಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಎಂಟ್ರಿ ಕೊಟ್ಟಿದ್ದು, ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

ರೂಪಾಯಿಯ ₹ ಚಿಹ್ನೆಯನ್ನು 2010ರಲ್ಲಿ ಅಂಗೀಕರಿಸಲಾಗಿತ್ತು. ಒಂದುವೇಳೆ ಡಿಎಂಕೆಗೆ ಇದರ ಬಗ್ಗೆ ಆಕ್ಷೇಪವಿದ್ದರೆ ಅಂದೇ ಅದನ್ನು ಹೇಳಬೇಕಿತ್ತು ಎಂದು ನಿರ್ಮಲಾ ಸೀತಾರಾಮನ್‌ ಕುಟುಕಿದ್ದಾರೆ.

ವಿತ್ತ ಸಚಿವೆ ಹೇಳಿದ್ದೇನು?

ʼʼಡಿಎಂಕೆಗೆ ರೂಪಾಯಿಯ ₹ ಚಿಹ್ನೆಯ ಬಗ್ಗೆ ತಕರಾರಿದ್ದರೆ ಅದನ್ನು ಅಂಗೀಕರಿಸಿದ 2010ರಲ್ಲೇ ತಿಳಿಸಬಹುದಿತ್ತು. ಈ ಚಿಹ್ನೆಯನ್ನು ಅಧಿಕೃತವಾಗಿ ಅಂಗೀಕರಿಸಿದ್ದು ಅಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಐ ಸರ್ಕಾರ. ಡಿಎಂಕೆ ಕೂಡ ಈ ಮೈತ್ರಿಕೂಟದ ಭಾಗವಾಗಿತ್ತು. ಅಲ್ಲದೆ ₹ ಚಿಹ್ನೆಯನ್ನು ರೂಪಿಸಿದವರು ತಮಿಳುನಾಡಿನವರಾದ ಡಿ.ಉದಯ್‌ ಕುಮಾರ್‌. ಇವರು ಡಿಎಂಕೆಯ ಮಾಜಿ ಶಾಸಕ ಧರ್ಮಲಿಂಗಂ ಅವರ ಪುತ್ರ. ಈಗ ಆ ಚಿಹ್ನೆಯನ್ನು ಅಳಿಸಿಹಾಕುವ ಮೂಲಕ ಡಿಎಂಕೆ ರಾಷ್ಟ್ರೀಯ ಚಿಹ್ನೆಯನ್ನು ತಿರಸ್ಕರಿಸುವುದಲ್ಲದೆ, ತಮಿಳುನಾಡಿನ ಯುವಕರ ಸೃಜನಶೀಲ ಕೊಡುಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ" ಎಂದು ಕಿಡಿಕಾರಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರ ಪೋಸ್ಟ್‌ ಇಲ್ಲಿದೆ.



ಡಿಎಂಕೆ ವಿರುದ್ಧ ಅಣ್ಣಾಮಲೈ ಗುಡುಗು

ಇದಕ್ಕೂ ಮೊದಲು ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಕೂಡ ಡಿಎಂಕೆ ಸರ್ಕಾರ ಈ ನಿರ್ಧಾರದ ವಿರುದ್ದ ಗುಡುಗಿದ್ದಾರೆ. “2025-26ರ ಡಿಎಂಕೆ ಸರ್ಕಾರದ ರಾಜ್ಯ ಬಜೆಟ್‌ನ ಲೋಗೋ ತಮಿಳಿಗನೊಬ್ಬ ವಿನ್ಯಾಸಗೊಳಿಸಿದ ರೂಪಾಯಿ ಚಿಹ್ನೆಯನ್ನು ಬದಲಾಯಿಸಿದೆ. ಈ ಚಿಹ್ನೆಯನ್ನು ಇಡೀ ಭಾರತ ಅಳವಡಿಸಿಕೊಂಡಿದೆ ಮತ್ತು ನಮ್ಮ ಕರೆನ್ಸಿಯಲ್ಲಿಯೂ ಸೇರಿಸಲಾಗಿದೆ. ಈ ಚಿಹ್ನೆಯನ್ನು ವಿನ್ಯಾಸಗೊಳಿಸಿದ ಉದಯ್ ಕುಮಾರ್ ಮಾಜಿ ಡಿಎಂಕೆ ಶಾಸಕರ ಮಗ. ಎಂ.ಕೆ. ಸ್ಟಾಲಿನ್ ಅವರದ್ದು ಮೂರ್ಖತನದ ನಿರ್ಧಾರʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Rupee Symbol: ರಾಷ್ಟ್ರೀಯ ಕರೆನ್ಸಿ ಚಿಹ್ನೆ ₹ ಬದಲಾಯಿಸಿದ ತಮಿಳುನಾಡು ಸರ್ಕಾರ; ಕೇಂದ್ರದ ವಿರುದ್ಧ ಮುಂದುವರಿದ ಭಾಷಾ ಸಮರ

ಎಂ.ಕೆ.ಸ್ಟಾಲಿನ್‌ ಪೋಸ್ಟ್‌ ಇಲ್ಲಿದೆ.



ಏನಿದು ವಿವಾದ?

ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ತ್ರಿಭಾಷಾ ಸೂತ್ರವನ್ನು ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, 2025-26ರ ಬಜೆಟ್‌ನ ಲೋಗೋದಲ್ಲಿ ರೂಪಾಯಿಯ ₹ ಚಿಹ್ನೆಯ ಬದಲು ತಮಿಳು ಲಿಪಿ ಅಳವಡಿಸಿರುವುದನ್ನು ಪ್ರದರ್ಶಿಸುವ ವಿಡಿಯೊವನ್ನು ಬಿಡುಗಡೆ ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಕೊಂಡಿತು. ಇದುವರೆಗೆ ತಮಿಳುನಾಡು ಸರ್ಕಾರ ಬಜೆಟ್‌ನಲ್ಲಿ ಅಧಿಕೃತ ರೂಪಾಯಿ ಚಿಹ್ನೆ (₹)ಯನ್ನೇ ಬಳಸುತ್ತಿತ್ತು. ಇದೀಗ ಮೊದಲ ಬಾರಿಗೆ ಬಜೆಟ್‌ ಲೋಗೋದಲ್ಲಿ ಎಂ.ಕೆ.ಸ್ಟಾಲಿನ್‌ ಸರ್ಕಾರ ತಮಿಳು ಚಿಹ್ನೆಯನ್ನು ಬಳಸಿದೆ. ಸ್ಥಳೀಯ ಭಾಷೆಯಲ್ಲಿ ರೂಪಾಯಿ ಚಿಹ್ನೆಯನ್ನು ಬಳಸುವ ಈ ನಿರ್ಧಾರವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರದ ವಿರುದ್ಧದ ರಾಜ್ಯದ ಬಲವಾದ ನಿಲುವಿನ ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬಜೆಟ್‌ ಮಾ. 14ರಂದು ಮಂಡನೆಯಾಗಲಿದೆ.