ʼʼನನಗೆ ಯಾವುದೇ ಲಾಭವಿಲ್ಲʼʼ: ಎಥನಾಲ್ ವಿವಾದ, ಆರೋಪ ತಳ್ಳಿ ಹಾಕಿದ ನಿತಿನ್ ಗಡ್ಕರಿ
Nitin Gadkari: ಕೇಂದ್ರ ಸಚಿವ ನಿತಿನ್ ಗಡ್ಕರಿ, ಎಥನಾಲ್ ಮಿಶ್ರಣ ನೀತಿಯಿಂದ ತಮಗೆ ವೈಯಕ್ತಿಕ ಲಾಭವಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ದೇಶದ ಎಥನಾಲ್ ಉತ್ಪಾದನೆಯಲ್ಲಿ ತಮ್ಮ ಪಾಲು ಕೇವಲ ಶೇ. 0.07 ಮಾತ್ರ ಎಂದು ಸ್ಪಷ್ಟಪಡಿಸಿದ ಅವರು, ಎಥನಾಲ್‌ನಿಂದ ವಾಹನಗಳಿಗೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ. ಈ ನೀತಿಯ ಉದ್ದೇಶ ತೈಲ ಆಮದು ವೆಚ್ಚ ಕಡಿಮೆ ಮಾಡುವುದು, ಪರಿಸರ ಸಂರಕ್ಷಣೆ ಹಾಗೂ ರೈತರ ಆದಾಯ ಹೆಚ್ಚಿಸುವುದಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ನಿತಿನ್ ಗಡ್ಕರಿ (ಸಂಗ್ರಹ ಚಿತ್ರ) -
ನವದೆಹಲಿ, ಜು. 8: ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಣ ಯೋಜನೆಯಿಂದ ತಮಗೆ ವೈಯಕ್ತಿಕ ಲಾಭವಿದೆ ಎಂಬ ಆರೋಪಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ತಳ್ಳಿ ಹಾಕಿದ್ದಾರೆ. ಈ ನೀತಿಯ ಹಿಂದೆ ತಮ್ಮ ಪಟ್ಟಭದ್ರ ಹಿತಾಸಕ್ತಿ ಅಡಗಿದೆ ಎಂಬ ವಾದವನ್ನು ನಿರಾಕರಿಸಿರುವ ಅವರು, ಇದರ ಹಿಂದೆ ತಮ್ಮನ್ನು ಮತ್ತು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬದಿಗೆ ತಳ್ಳುವ ರಾಜಕೀಯ ಪಿತೂರಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಗಡ್ಕರಿ, "ಎಥನಾಲ್ ನೀತಿಯಿಂದ ನನಗೆ ಯಾವುದೇ ಲಾಭವಿಲ್ಲ. ದೇಶದ ಒಟ್ಟು ಎಥನಾಲ್ ಉತ್ಪಾದನೆಯಲ್ಲಿ ನನ್ನ ಪಾಲು ಕೇವಲ 0.07ರಷ್ಟು ಮಾತ್ರ. ಇಷ್ಟು ಅತ್ಯಲ್ಪ ಪಾಲು ಹೊಂದಿರುವ ವ್ಯಕ್ತಿ ದೇಶದ ನೀತಿಯನ್ನು ತನ್ನ ಸ್ವಂತ ಲಾಭಕ್ಕಾಗಿ ಬದಲಾಯಿಸಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ. ಭಾರತದಲ್ಲಿ ಪ್ರಸ್ತುತ 550 ಘಟಕಗಳಿಂದ ವಾರ್ಷಿಕ 1,500 ಕೋಟಿ ಲೀಟರ್ ಎಥನಾಲ್ ಉತ್ಪಾದನೆಯಾಗುತ್ತಿದ್ದು, ತಮ್ಮ ಕುಟುಂಬದ ಸಕ್ಕರೆ ಉದ್ಯಮವು ಸರ್ಕಾರದ ನೀತಿಗಿಂತ ಹಳೆಯದಾಗಿದೆ ಎಂದು ಸ್ಪಷ್ಟಪಡಿಸಿದ್ದಾರ.
ಪಾಕಿಸ್ತಾನದಲ್ಲಿ ಐವರು ಪ್ರಯಾಣಿಕರೊಂದಿಗೆ ಬೋಯಿಂಗ್ ಕಾರ್ಗೋ ವಿಮಾನ ನಾಪತ್ತೆ: 2 ದಿನ ಕಳೆದರೂ ಸುಳಿವೇ ಇಲ್ಲ
ಎಥನಾಲ್ ಮಿಶ್ರಿತ ಇಂಧನದಿಂದ (E20 ಪೆಟ್ರೋಲ್) ವಾಹನಗಳು ಹಾಳಾಗುತ್ತವೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಸಚಿವರು, "ಎಥನಾಲ್‌ನಿಂದ ವಾಹನಗಳಿಗೆ ಹಾನಿಯಾಗಿದೆ ಎಂಬುದಕ್ಕೆ ಯಾರಾದರೂ ಪುರಾವೆ ನೀಡಲಿ. ನಿಮ್ಮ ಪರಿಚಿತರ ಯಾರದಾದರೂ ಎರಡು ವಾಹನಗಳು ಹಾಳಾಗಿರುವ ಉದಾಹರಣೆ ಇದೆಯೇ?" ಎಂದು ಸವಾಲು ಹಾಕಿದ್ದಾರೆ. ಮಾರುತಿ ಸುಜುಕಿ, ಟೊಯೋಟಾ, ಟಾಟಾ ಮೋಟಾರ್ಸ್‌ನಂತಹ ಕಂಪನಿಗಳು ಇಂತಹ ಯಾವುದೇ ದೂರು ನೀಡಿಲ್ಲ. ಇತ್ತೀಚೆಗೆ ಟೊಯೋಟಾ ವಾಹನವೊಂದರಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಗೆ ಇಂಧನದಲ್ಲಿದ್ದ ನೀರಿನ ಅಂಶ ಕಾರಣವೇ ಹೊರತು ಎಥನಾಲ್ ಅಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. "ಇದು ಪ್ರಾಯೋಗಿಕ ಯೋಜನೆಯಲ್ಲ. ವಾಹನಗಳಿಗೆ ಅನುಮೋದನೆ ನೀಡುವ ಮುನ್ನ ನಾಲ್ಕು ವರ್ಷಗಳ ಕಾಲ ಲಕ್ಷಾಂತರ ಕಿಲೋಮೀಟರ್ ಓಡಿಸಿ ಪರೀಕ್ಷಿಸಲಾಗುತ್ತದೆ" ಎಂದಿದ್ದಾರೆ.
ಟೀಕೆಗೆ ತಿರುಗೇಟು
ಕಾರ್ಖಾನೆಗಳ ಮಾಲಕರನ್ನು ಶ್ರೀಮಂತರನ್ನಾಗಿ ಮಾಡಲು ಈ ನೀತಿ ರೂಪಿಸಲಾಗಿದೆ ಎಂಬ ವಿರೋಧಿಗಳ ಟೀಕೆಗಳನ್ನು ನಿರಾಕರಿಸಿದ ಅವರು, ಈ ಇಂಧನವು ಪರಿಸರಕ್ಕೆ ಪೂರಕವಾಗಿದೆ ಎಂದು ಸಮರ್ಥಿಸಿಕೊಂಡರು. ಪೆಟ್ರೋಲಿಯಂ ಸಚಿವಾಲಯ, ಕೇಂದ್ರ ಸಚಿವ ಸಂಪುಟ ಮತ್ತು ವೈಜ್ಞಾನಿಕ ಸಂಶೋಧನೆಗಳ ನಂತರವೇ ಸಾಮೂಹಿಕವಾಗಿ ಈ ನೀತಿಯನ್ನು ರೂಪಿಸಲಾಗಿದೆ. ಅಮೆರಿಕ, ಬ್ರೆಜಿಲ್ ಮತ್ತು ಜಪಾನ್ ದೇಶಗಳ ಜಾಗತಿಕ ಮಾದರಿಯನ್ನು ಅನುಸರಿಸಿ ಇದನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಕಚ್ಚಾ ತೈಲ ಆಮದು ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡುವುದು, ಪರಿಸರ ಮಾಲಿನ್ಯ ತಡೆಯುವುದು ಮತ್ತು ದೇಶದ ಕೋಟ್ಯಂತರ ಗ್ರಾಮೀಣ ಭಾಗದ ರೈತರ ಆದಾಯವನ್ನು ಹೆಚ್ಚಿಸುವುದಾಗಿದೆ ಎಂದು ಗಡ್ಕರಿ ಪ್ರತಿಪಾದಿಸಿದ್ದಾರೆ.