ಬುಲ್ಡೋಜರ್ ಕಾರ್ಯಾಚರಣೆಗೆ ಸಂಪೂರ್ಣ ನಿಷೇಧವಿಲ್ಲ, ಆದರೆ...: ಸುಪ್ರೀಂ ಕೋರ್ಟ್‌ನ ಮಹತ್ವ ತೀರ್ಪಿನಲ್ಲಿ ಏನಿದೆ?
Bulldozer Action: ಬುಲ್ಡೋಜರ್ ಬಳಸಿ ಕಟ್ಟಡಗಳನ್ನು ಧ್ವಂಸಗೊಳಿಸುವ ಪ್ರಕರಣಗಳ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 2024ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ಮಾರ್ಗಸೂಚಿಗಳನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಸಾಂದರ್ಭಿಕ ಚಿತ್ರ -
ನವದೆಹಲಿ, ಜು. 16: ಬುಲ್ಡೋಜರ್ ಬಳಸಿ ಅಪರಾಧಿಗಳ ಕಟ್ಟಡ ಧ್ವಂಸಗೊಳಿಸುವ (Bulldozer demolitions) ಕ್ರಮದ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಬುಲ್ಡೋಜರ್ ಕ್ರಮಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ. ಆದರೆ ಕೆಲವರನ್ನೇ ಆಯ್ದುಕೊಂಡು ಶಿಕ್ಷಿಸುವ ಕ್ರಮ ಸರಿಯಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಸೂಚಿಸಿದೆ.
2024ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ಮಾರ್ಗಸೂಚಿಗಳನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನಡೆಸಿತು. ಅರ್ಜಿಗಳನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಇಂತಹ ವಿವಾದಗಳನ್ನು ಸಂಬಂಧಿತ ಹೈಕೋರ್ಟ್‌ಗಳೇ ಪರಿಶೀಲಿಸಬೇಕು ಎಂದು ತಿಳಿಸಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದಲ್ಲಿ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು, ಪ್ರತಿಯೊಂದು ಪ್ರಕರಣವು ವಿವರವಾದ ಪರಿಶೀಲನೆಯ ಅಗತ್ಯವಿರುವ ವಿವಾದಾತ್ಮಕ ಸಂಗತಿಗಳನ್ನು ಒಳಗೊಂಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲಾಗಿದೆಯೇ ಎಂದು ನಿರ್ಧರಿಸಲು ಹೈಕೋರ್ಟ್‌ಗಳು ಸೂಕ್ತ ವೇದಿಕೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
"ಸ್ತನವನ್ನು ಮುಟ್ಟಿ, ಸಲ್ವಾರ್ ಕಳಚಲು ಪ್ರಯತ್ನಿಸಿದರೆ ಅದು ಅತ್ಯಾಚಾರದ ಯತ್ನವಲ್ಲವೇ?" ಸುಪ್ರೀಂ ತರಾಟೆ
ʼʼಅಧಿಕಾರಿಗಳು ಮತ್ತು ಅಕ್ರಮ ಒತ್ತುವರಿದಾರರ ನಡುವಿನ ವಿವಾದಗಳನ್ನು ಹತ್ತಿಕ್ಕುವ ಸಂದರ್ಭದಲ್ಲಿ, ಬುಲ್ಡೋಜರ್ ಬಳಸಬೇಕಾಗಬಹುದು. ಆದರೆ ಕಾನೂನು ಜಾರಿಯ ಹೆಸರಿನಲ್ಲಿ ವ್ಯಕ್ತಿಗಳನ್ನು ಗುರಿಯಾಗಿಸಿ ಅಥವಾ ಆಯ್ದುಕೊಂಡು ಕ್ರಮ ಕೈಗೊಳ್ಳುವುದು ಸರಿಯಲ್ಲ. ಅದು ನಮ್ಮ ಮೂಲಭೂತ ನ್ಯಾಯ ತತ್ವಗಳಿಗೆ ವಿರುದ್ಧವಾಗಿದೆ. ನಿಜವಾದ ಪ್ರಶ್ನೆ ಏನೆಂದರೆ, ಒಬ್ಬ ವ್ಯಕ್ತಿಗೆ ಅಧಿಕಾರವಿದೆಯೇ ಮತ್ತು ಕಾನೂನಿನ ಕಾರ್ಯವಿಧಾನವನ್ನು ಅನುಸರಿಸಲಾಗಿದೆಯೇ?ʼʼ ಎಂದು ನ್ಯಾ. ಬಾಗ್ಚಿ ಪ್ರಶ್ನಿಸಿದರು.
ಪ್ರತಿಯೊಂದು ಧ್ವಂಸ ಪ್ರಕರಣದಲ್ಲಿ ಉದ್ಭವಿಸುವ ವಿವಾದಗಳನ್ನು ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳ ಮೂಲಕ ನಿರ್ಣಯಿಸಲು ಸಾಧ್ಯವಿಲ್ಲ ಎಂದು ಪೀಠವು ತಿಳಿಸಿತು. ಪರಿಣಾಮವಾಗಿ ಅರ್ಜಿಗಳನ್ನು ಸಂಬಂಧಪಟ್ಟ ಹೈಕೋರ್ಟ್‌ಗಳಿಗೆ ವರ್ಗಾಯಿಸಿತು.
ವಿಚಾರಣೆಯ ವೇಳೆ ಹಿರಿಯ ವಕೀಲ ಹುಝೈಫಾ ಅಹ್ಮದಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಗಂಭೀರ ಉಲ್ಲಂಘನೆಗಳು ಎಂದು ವಿವರಿಸಿದ ಪ್ರಕರಣಗಳಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು ಎಂದು ವಾದಿಸಿದರು. ಪ್ರತಿಯೊಂದು ಪ್ರಕರಣಕ್ಕೂ ದಾಖಲೆಗಳ ಪರಿಶೀಲನೆ ಅಗತ್ಯವಿದೆ. ಅದರಲ್ಲಿ ನೋಟಿಸ್‌ಗಳನ್ನು ನೀಡಲಾಗಿದೆಯೇ? ಯಾರಿಂದ ಮತ್ತು ಯಾವ ದಿನಾಂಕದಂದು ನೀಡಲಾಗಿದೆ ಎಂದು ಸೂರ್ಯಕಾಂತ್ ಹೇಳಿದರು.
ಸುಪ್ರೀಂ ಕೋರ್ಟ್ ತನ್ನ ಅಂತಿಮ ಆದೇಶದಲ್ಲಿ, ಬಾಕಿ ಇರುವ ಎಲ್ಲ ನ್ಯಾಯಾಂಗ ನಿಂದನೆ ಅರ್ಜಿಗಳ ದಾಖಲೆಗಳನ್ನು ಆಯಾ ಹೈಕೋರ್ಟ್‌ಗಳಿಗೆ ವರ್ಗಾಯಿಸಬೇಕೆಂದು ನಿರ್ದೇಶಿಸಿದೆ. ಅಗತ್ಯವಿದ್ದರೆ ಅವು ಅಧಿಕೃತ ದಾಖಲೆಗಳನ್ನು ಕೋರಬಹುದು ಅಥವಾ ಜಿಲ್ಲಾ ನ್ಯಾಯಾಲಯಗಳ ಮೂಲಕ ಸಾಕ್ಷ್ಯಗಳನ್ನು ಪಡೆಯಬಹುದು ಎಂದಿದೆ.