ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಲ್‌ಇಟಿ ಕಮಾಂಡರ್ ವಿರುದ್ಧ ಜಾಮೀನು ರಹಿತ ವಾರಂಟ್
Non-Bailable Warrant Issued: ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೈಫುಲ್ಲಾ ಕಸೂರಿ ವಿರುದ್ಧ ಎನ್‌ಐಎ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ನೇತೃತ್ವದ ಆಳವಾಗಿ ಬೇರೂರಿರುವ ಎಲ್‌ಇಟಿ ಮಾಡ್ಯೂಲ್‌ನ ತನಿಖೆಗೆ ಸಂಬಂಧಿಸಿದಂತೆ ಈ ವಾರಂಟ್ ಹೊರಡಿಸಲಾಗಿದೆ.
ಎಲ್‌ಇಟಿ ಕಮಾಂಡರ್ ಸೈಫುಲ್ಲಾ ಕಸೂರಿ (ಸಂಗ್ರಹ ಚಿತ್ರ) -
ಜಮ್ಮು, ಸೆ.17: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Attack) ರೂವಾರಿಗಳ ಸುತ್ತ ಕುಣಿಕೆ ಬಿಗಿಯಾಗುತ್ತಿದೆ. ಜಮ್ಮುವಿನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯವು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LET) ಕಮಾಂಡರ್ ಸೈಫುಲ್ಲಾ ಕಸೂರಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ. 2025ರ ಏಪ್ರಿಲ್‌ನಲ್ಲಿ ನಡೆದ ದಾಳಿಯಲ್ಲಿ ನೇಪಾಳಿ ಪ್ರಜೆ ಸೇರಿದಂತೆ 26 ಪ್ರವಾಸಿಗರು ಮೃತಪಟ್ಟಿದ್ದರು.
ಪಾಕಿಸ್ತಾನದ ಕಸೂರ್ ಜಿಲ್ಲೆಯ ಚಾಂಗಾ ಮಾಂಗಾ ಮೂಲದವನಾದ ಸೈಫುಲ್ಲಾ, ಗುಪ್ತಚರ ಇಲಾಖೆಗೆ ಹೊಸಬನೇನಲ್ಲ. ಸಾಜಿದ್ ಜಾಟ್, ಅಲಿ ಭಾಯಿ, ಹಬೀಬುಲ್ಲಾ ಮಲಿಕ್, ಲಂಗ್ಡಾ, ನೂಮಿ, ನುಮಾನ್, ಉಸ್ಮಾನ್ ಹಬೀಬ್ ಮತ್ತು ಶಾನಿ ಸೇರಿದಂತೆ ಹಲವು ಅಡ್ಡ ಹೆಸರುಗಳ ಜಾಲದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈತ, ಗಡಿಯುದ್ದಕ್ಕೂ ಲಷ್ಕರ್-ಎ-ತೊಯ್ಬಾ ಕಾರ್ಯಾಚರಣೆಗಳನ್ನು ನಿಯಂತ್ರಿಸುವ ಪ್ರಮುಖ ಹ್ಯಾಂಡ್ಲರ್ ಆಗಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಭದ್ರತಾ ಸಂಸ್ಥೆಗಳ ನಿರಂತರ ಕಣ್ಗಾವಲಿನಲ್ಲಿದ್ದಾನೆ.
ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ನೇತೃತ್ವದ ಆಳವಾಗಿ ಬೇರೂರಿರುವ ಎಲ್‌ಇಟಿ ಮಾಡ್ಯೂಲ್‌ನ ತನಿಖೆಗೆ ಸಂಬಂಧಿಸಿದಂತೆ ಈ ವಾರಂಟ್ ಹೊರಡಿಸಲಾಗಿದೆ. ಎನ್‌ಐಎ ಈಗಾಗಲೇ ಈ ಜಾಲದ ಮುಖ್ಯಸ್ಥ ಅಬ್ದುಲ್ಲಾನನ್ನು ಬಂಧಿಸಿದೆ. ಇದರೊಂದಿಗೆ ಉಸ್ಮಾನ್ ಅಲಿಯಾಸ್ ಖುಬೈಬ್ ಎಂಬ ಮತ್ತೊಬ್ಬ ಪಾಕಿಸ್ತಾನಿ ಪ್ರಜೆ ಹಾಗೂ ಈ ಭಯೋತ್ಪಾದನಾ ಜಾಲಕ್ಕೆ ಸ್ಥಳೀಯವಾಗಿ ನೆರವು ನೀಡುತ್ತಿದ್ದ ಮೂವರು ಓವರ್‌ಗ್ರೌಂಡ್ ವರ್ಕರ್ಸ್ ತನಿಖಾ ಸಂಸ್ಥೆಯ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬದಲಾಗುತ್ತಿದೆ ಜಮ್ಮು ಮತ್ತು ಕಾಶ್ಮೀರ: 2025ರಲ್ಲಿ ಒಂದೇ ಒಂದು ಕಲ್ಲು ತೂರಾಟದ ಘಟನೆಯಿಲ್ಲ, ಇಲ್ಲಿದೆ ವರದಿ
ಸೈಫುಲ್ಲಾ ಕಣಿವೆಯಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ, ನಿಧಿ ಸೇರಿದಂತೆ ಕಾರ್ಯಾಚರಣೆ ನಿರ್ದೇಶನಗಳನ್ನು ಒದಗಿಸುವ ಪ್ರಮುಖ ಕೊಂಡಿಯಾಗಿದ್ದ. ಬಂಧಿತ ಪಾಕಿಸ್ತಾನಿ ಭಯೋತ್ಪಾದಕನೊಬ್ಬನಿಂದ ಸೈಫುಲ್ಲಾ ಕಸೂರಿಗೆ ನೇರವಾಗಿ ಲಿಂಕ್ ಆಗಿರುವ ಟೆಲಿಗ್ರಾಮ್ ಐಡಿಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿದ ಎನ್ಐಎ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭದ್ರತಾ ಪಡೆಗಳು, ನಾಗರಿಕರು ಮತ್ತು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸೈಫುಲ್ಲಾ ನೀಡಿದ್ದ ಆಜ್ಞೆಗಳನ್ನು ಇದು ಬಹಿರಂಗಪಡಿಸಿದೆ ಎಂದು ಪ್ರತಿಪಾದಿಸಿದೆ.
ಲಭ್ಯವಿರುವ ಸಾಕ್ಷ್ಯಗಳನ್ನು ಪರಿಗಣಿಸಿದ ಬಳಿಕ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಈ ವಾರಂಟ್‌ನ್ನು ಜಾರಿಗೊಳಿಸಲು ಎನ್‌ಐಎ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗಿದೆ.
ಸೈಫುಲ್ಲಾ ಈ ಹಿಂದೆ 2005 ರಿಂದ 2007ರ ವರೆಗೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದ ಎಂದು ಎನ್‌ಐಎ ತಿಳಿಸಿದೆ. ಬಳಿಕ ಆತ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿನ ಸುರಕ್ಷಿತ ತಾಣಗಳಿಂದ ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸಿದ್ದ ಎನ್ನಲಾಗಿದೆ.