Bomb Blast: ಕಾಶ್ಮೀರದ ಪೊಲೀಸ್ ಠಾಣೆಯಲ್ಲಿ ಸ್ಫೋಟ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರತೆ, ದೇಹಗಳು ಛಿದ್ರ ಛಿದ್ರ
JK Police Station Blast: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ನೌಗಮ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕ ಸ್ಫೋಟ ಸಂಭವಿಸಿದ್ದು, ಒಂಬತ್ತು ಜನರು ಸಾವನ್ನಪ್ಪಿ, 32 ಜನರು ಗಾಯಗೊಂಡಿದ್ದಾರೆ. ಹತ್ತಿರದ ಮನೆಯೊಂದರ ಸಿಸಿಟಿವಿ ದೃಶ್ಯಾವಳಿಗಳು ಸ್ಫೋಟದ ಪರಿಣಾಮವನ್ನು ತೋರಿಸಿದ್ದು, ಅಪಾರ ಪ್ರಮಾಣದ ನಾಶವಾಗಿದೆ ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಶ್ರೀನಗರದ ಹೊರವಲಯದಲ್ಲಿರುವ ನೌಗಮ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕ ಸ್ಫೋಟ ಸಂಭವಿಸಿದ್ದು, ಒಂಬತ್ತು ಜನರು ಸಾವನ್ನಪ್ಪಿ, 32 ಜನರು (JK Police Station Blast) ಗಾಯಗೊಂಡಿದ್ದಾರೆ. ಇತ್ತೀಚೆಗೆ ಹರಿಯಾಣದ ಫರಿದಾಬಾದ್‌ನಲ್ಲಿ 'ವೈಟ್-ಕಾಲರ್' ಭಯೋತ್ಪಾದಕ ಮಾಡ್ಯೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಸ್ಫೋಟಕಗಳ ದೊಡ್ಡ ಸಂಗ್ರಹದಿಂದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡದ ಅಧಿಕಾರಿಗಳು ಮಾದರಿಗಳನ್ನು ಹೊರತೆಗೆಯುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
9 killed in blast at Nowgam police station in J&K during probe into explosives tied to Red Fort module.
— The Tatva (@thetatvaindia) November 15, 2025
Blast occured during probe as police examine explosives recovered from Faridabad.#Nowgam #RedFortBlast pic.twitter.com/QZIwn8lMEA
ಹತ್ತಿರದ ಮನೆಯೊಂದರ ಸಿಸಿಟಿವಿ ದೃಶ್ಯಾವಳಿಗಳು ಸ್ಫೋಟದ ಪರಿಣಾಮವನ್ನು ತೋರಿಸಿದ್ದು, ಅಪಾರ ಪ್ರಮಾಣದ ನಾಶವಾಗಿದೆ ಎಂದು ತಿಳಿದು ಬಂದಿದೆ. ಮತ್ತೊಂದು ವೀಡಿಯೊದಲ್ಲಿ ಸ್ಫೋಟದ ಸ್ಥಳದಿಂದ ಭಾರೀ ಹೊಗೆ ಏರುತ್ತಿದ್ದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹೋರಾಡುತ್ತಿರುವುದನ್ನು ತೋರಿಸಲಾಗಿದೆ. ನೆಲದ ಮೇಲೆ ಬೃಹತ್ ಅವಶೇಷಗಳು ಸಹ ಕಂಡುಬಂದಿದ್ದು, ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ದೇಹದ ಭಾಗಗಳು ಸುಮಾರು 300 ಮೀಟರ್ ದೂರದಲ್ಲಿರುವ ನೆರೆಯ ಮನೆಗಳಿಗೆ ಎಸೆಯಲ್ಪಟ್ಟಿವೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ: Delhi Bomb Blast: ಕೆಂಪು ಕೋಟೆ ಕಾರು ಸ್ಫೋಟ ಪ್ರಕರಣ; ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
15 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದಲ್ಲಿರುವ ಕೆಲವು ನಿವಾಸಿಗಳು ಸಹ ಸ್ಫೋಟದ ಅನುಭವವನ್ನು ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ 11:20 ರ ಸುಮಾರಿಗೆ ಆಕಸ್ಮಿಕ ಸ್ಫೋಟ ಸಂಭವಿಸಿದೆ. ಈ ಘಟನೆಯ ಕಾರಣದ ಬಗ್ಗೆ ಬೇರೆ ಯಾವುದೇ ಊಹಾಪೋಹಗಳು ಅನಗತ್ಯ" ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ನಳಿನ್ ಪ್ರಭಾತ್ ಸುದ್ದಿಗಾರರಿಗೆ ತಿಳಿಸಿದರು. ನೌಗಮ್ ಪೊಲೀಸ್ ಠಾಣೆ ಇತ್ತೀಚೆಗೆ ಪ್ರದೇಶದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಪೋಸ್ಟರ್‌ಗಳನ್ನು ಅಂಟಿಸಿದ್ದ ಪ್ರಕರಣವನ್ನು ಬೇಧಿಸಿತ್ತು.
ವೈಟ್ ಕಾಲರ್ ಟೆರರಿಸಮ್
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ಮಧ್ಯಾಹ್ನ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ "ವೈಟ್ ಕಾಲರ್" ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿದ್ದಾರೆ. ಇದು ಕನಿಷ್ಠ ಎರಡು ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಮತ್ತು ಕೇಂದ್ರಾಡಳಿತ ಪ್ರದೇಶದಾದ್ಯಂತ ಸಕ್ರಿಯವಾಗಿರುವ ಅಲ್-ಖೈದಾ ಸಂಯೋಜಿತ ಭಯೋತ್ಪಾದಕ ಗುಂಪು ಅನ್ಸರ್ ಘಜ್ವತ್-ಉಲ್-ಹಿಂದ್‌ಗಳೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದ್ದಾರೆ. 2,900 ಕಿಲೋಗ್ರಾಂಗಳಷ್ಟು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮೂವರು ವೈದ್ಯರಾದ ಅದೀಲ್ ಅಹ್ಮದ್ ರಾಥರ್, ಮುಜಮ್ಮಿಲ್ ಶಕೀಲ್ ಮತ್ತು ಶಾಹೀನ್ ಸಯೀದ್ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ .