Operation Sindoor: ಭಾರತದ ದಾಳಿ ಖಚಿತಪಡಿಸಿ ಯುದ್ಧಕ್ಕೆ ಸನ್ನದ್ಧ ಎಂದ ಪಾಕ್ ಪ್ರಧಾನಿ
ಭಾರತದ ದಾಳಿಯ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನವು ಭಾರತದತ್ತ ಗುಂಡು ಹಾರಿಸಲು ಆರಂಭಿಸಿದ್ದು, ಎರಡೂ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ. ಸದ್ಯ ಪಾಕಿಸ್ತಾನದ ಲಾಹೋರ್, ಸಿಯಾಲ್‌ಕೋಟ್ ವಿಮಾನ ನಿಲ್ದಾಣಗಳು ಬಂದ್ ಆಗಿವೆ.


ನವದೆಹಲಿ: ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯ(pahalgam attack) ಎರಡು ವಾರಗಳ ನಂತರ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿ(Operation Sindoor) ಕಾರ್ಯಾಚರಣೆಯಲ್ಲಿ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಭಾರತದ ಈ ದಾಳಿಯನ್ನು ಪಾಕ್ ಪ್ರಧಾನಿ ಶಹಬಾಜ್ ಶರೀಫ್(Shehbaz Sharif) ದೃಢಪಡಿಸಿದ್ದು, ಪ್ರತಿ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಭಾರತದ ವಿವಿಧ ಸ್ಥಳಗಳ ಮೇಲೆ ಆಂತರಿಕ ಭದ್ರತಾ ಪಡೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಟ್ವೀಟ್ ಮಾಡಿದ್ದು 'ಭಾರತ ನಿಯ ಉಲ್ಲಂಘಿಸಿ ಪಾಕಿಸ್ತಾನದ ಐದು ಸ್ಥಳಗಳ ಮೇಲೆ ಹೇಡಿತನದ ದಾಳಿ ನಡೆಸಿದೆ. ಭಾರತ ಹೇರಿರುವ ಈ ಯುದ್ಧ ಕ್ರಮದ ವಿರುದ್ಧ ಶಕ್ತಿಯುವಾದ ಪ್ರತಿಕ್ರಿಯೆ ನೀಡುವ ಎಲ್ಲ ಹಕ್ಕುಗಳೂ ಪಾಕಿಸ್ತಾನಕ್ಕೆ ಇವೆ. ನಾವು ಕೂಡ ಅತ್ಯಂತ ಪ್ರಬಲ ಪ್ರತಿಕ್ರಿಯೆ ನೀಡುತ್ತೇವೆ. ಇಡೀ ದೇಶವು ಪಾಕಿಸ್ತಾನ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ನಿಂತಿದೆ. ಶತ್ರುವನ್ನು ಹೇಗೆ ಎದುರಿಸಬೇಕು ಎಂಬುದು ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದ ಸಶಸ್ತ್ರ ಪಡೆಗಳಿಗೆ ಚೆನ್ನಾಗಿ ಗೊತ್ತಿದೆ. ಶತ್ರುವಿನ ದುಷ್ಟ ಗುರಿಗಳು ಯಶಸ್ವಿಯಾಗುವುದಕ್ಕೆ ನಾವು ಯಾವತ್ತೂ ಬಿಡುವುದಿಲ್ಲ' ಎಂದು ಬರೆದುಕೊಂಡಿದ್ದಾರೆ.
#OperationSindoor | Pakistan Prime Minister Shehbaz Sharif tweets "The cunning enemy has carried out cowardly attacks on five locations in Pakistan. Pakistan has every right to respond forcefully to this act of war imposed by India, and a forceful response is being given. The… pic.twitter.com/SAfeNvusbN
— ANI (@ANI) May 6, 2025
ಲಷ್ಕರ್ ಎ ತಯಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದಿಂದ ದಾಳಿ ನಡೆಸಲಾಗಿತ್ತು.
ದಾಳಿ ಆರಂಭಿಸಿದ ಪಾಕ್
ಭಾರತದ ದಾಳಿಯ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನವು ಭಾರತದತ್ತ ಗುಂಡು ಹಾರಿಸಲು ಆರಂಭಿಸಿದ್ದು, ಎರಡೂ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ. ಸದ್ಯ ಪಾಕಿಸ್ತಾನದ ಲಾಹೋರ್, ಸಿಯಾಲ್‌ಕೋಟ್ ವಿಮಾನ ನಿಲ್ದಾಣಗಳು ಬಂದ್ ಆಗಿವೆ.
ಶತ್ರು ರಾಷ್ಟ್ರದಿಂದ ದಾಳಿ ನಡೆದ ಪಕ್ಷದಲ್ಲಿ ನಾಗರಿಕರಿಗೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಸಿದ್ಧತೆಯನ್ನು ಕೈಗೊಳ್ಳುವುದಕ್ಕಾಗಿ ಬುಧವಾರ ನಾಗರಿಕ ಸ್ವರಕ್ಷಣೆ ತಾಲೀಮು ನಡೆಸಲು ಕೇಂದ್ರ ಗೃಹಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ರಾಜ್ಯಗಳು ಸಿದ್ಧತೆಯನ್ನೂ ನಡೆಸಿದ್ದವು. ಇದರ ನಡುವೆಯೇ ಭಾರತೀಯ ಸೇನೆಯು ಮಂಗಳವಾರ ರಾತ್ರಿ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.